ಕರಾವಳಿ

ಸುರತ್ಕಲ್‌ನಲ್ಲಿ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಕನಕ ಜಯಂತಿ

Pinterest LinkedIn Tumblr

bjp_surtkal_kanaka_jayathi

ಸುರತ್ಕಲ್ ನ.8 : ಜಾತಿಗಳ ಕಟ್ಟುಪಾಡಿಲ್ಲದೆ, ಶಾಸ್ತ್ರಾಧ್ಯಯನದ ಅನಿವಾರ್ಯವಿಲ್ಲದೆ, ತಮ್ಮ ಅನುಭಾವದಿಂದ ಹೊರಹೊಮ್ಮುವ ಭಕ್ತಿ ಭಾವನೆಗಳನ್ನು ತಾಯ್ನುಡಿಯಲ್ಲಿ ಹಾಡಿ ಲೋಕಪಾವನವನ್ನೂ, ಆತ್ಮೋದ್ಧಾರವನ್ನೂ ಮಾಡಬೇಕೆನ್ನುವುದು ದಾಸಕೂಟದ ಉದ್ದೇಶವಾಗಿತ್ತು. ಭಕ್ತ ಕನಕದಾಸರು ಶೋಷಿತ ವರ್ಗದ ದಾಸಕೂಟದ ಏಕಮಾತ್ರ ಪ್ರತಿನಿಧಿಯಾಗಿದ್ದರು ಎಂದು ವಿಶ್ವಾಮಿತ್ರ ಫೌಂಡೇಶನ್‌ನ ಆಡಳಿತ ನಿರ್ದೇಶಕ ಮಹೇಶ್ ಮೂರ್ತಿ ಸುರತ್ಕಲ್ ಹೇಳಿದರು.

ಅವರು ಭಾರತೀಯ ಜನತಾಪಾರ್ಟಿ ಸುರತ್ಕಲ್ ನಗರ 1ನೇ ಶಕ್ತಿ ಕೇಂದ್ರದ ವತಿಯಿಂದ ತಾ.  08-11-2014 ರಂದು ಆಯೋಜಿಸಲಾದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.

ಮಡಿವಂತರ ಜೊತೆಗಿದ್ದರೂ ಕೂಡಾ ತುಳಿತಕ್ಕೊಳಗಾದ ವರ್ಗದ ಬಲವಾದ ಧ್ವನಿಯಾಗಿ, ಎಲ್ಲೂ ಕೂಡ ಓಲೈಕೆಯನ್ನು ಮಾಡದೆ, ತಾನು ಕುರುಬನೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ ಭಕ್ತ ಕನಕದಾಸರ ಜೀವನವೇ ಉಪದೇಶವಾಗಿದೆ. ಕನಕದಾಸರ ಈ ದಿಟ್ಟ ನಿಲುವು ನಮ್ಮೆಲ್ಲರಿಗೂ ಪಾಠವಾಗಲಿ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ದ.ಕ. ಜಿಲ್ಲಾ ಬಿ.ಜೆ.ಪಿ. ಕಾರ್ಯದರ್ಶಿ ಅಶೋಕ್ ಕೃಷ್ಣಾಪುರ ಸಭಾಧ್ಯಕ್ಷತೆಯನ್ನು ವಹಿಸಿದ್ದರು. ದೇಶದ ಪರಂಪರೆಯಲ್ಲಿ ದೇಶಸೇವೆ ಮಾಡಿದ ಮಹೋನ್ನತ ಸಾಧಕರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿರುತ್ತದೆ. ಕನಕದಾಸರ ಜೀವನ, ಕೃತಿ, ಸಾಹಿತ್ಯ, ಹಾಡುಗಳು ಅಮೃತ ಸದೃಶವಾಗಿರುತ್ತದೆ ಎಂದು ಅವರು ಹೇಳಿದರು.

ಜಿತೇಶ್ ಶೆಟ್ಟಿ ಕುಪ್ಪರಪಾಡಿ ಕನಕದಾಸರ ಕೀರ್ತನೆಗಳನ್ನು ಹಾಡಿದರು. ಕನಕದಾಸರ ಭಾವಚಿತ್ರಕ್ಕೆ ಸಾಮೂಹಿಕ ಪುಷ್ಪಾರ್ಚನೆಗೈಯ್ಯಲಾಯಿತು. ಕೃಷ್ಣಾಪುರ 5 ನೇ ವಾರ್ಡು ಬಿ.ಜೆ.ಪಿ. ಅಧ್ಯಕ್ಷ ಹರೀಶ್ ಸುವರ್ಣ ಸ್ವಾಗತಿಸಿದರು. ಶುಭಕರ ಕರ್ಕೇರ ದೊಡ್ಡಕೊಪ್ಲ ವಂದಿಸಿದರು. ಕೃಷ್ಣಾಪುರ ೪ನೇ ವಾರ್ಡ್ ಬಿ.ಜೆ.ಪಿ. ಘಟಕದ ಪ್ರಧಾನ ಕಾರ್ಯದರ್ಶಿ ರಾಕೇಶ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.

ವೇದಿಕೆಯಲ್ಲಿ ಕಾರ್ಪೋರೇಟರ್ ಗುಣಶೇಖರ ಶೆಟ್ಟಿ, ಮಂಡಲ ಸಮಿತಿ ಪದಾಧಿಕಾರಿಗಳಾದ ಭಾಸ್ಕರ ಸಾಲ್ಯಾನ್ ಮತ್ತು ಐ. ಭಾಸ್ಕರ ದೇವಾಡಿಗ, ಬಿ.ಜೆ.ಪಿ. ಯುವಮೋರ್ಚಾದ ಜಿಲ್ಲಾ ಕಾರ್ಯದರ್ಶಿ ವಸಂತ ಹೊಸಬೆಟ್ಟು ಪ್ರಮುಖರಾದ ಅಜೀಜ್ ಫ್ಯಾನ್ಸಿ, ಲೋಕೇಶ್ ಬೊಳ್ಳಾಜೆ, ಗಣೇಶ್ ಕಾಟಿಪಳ್ಳ, ರಾಕೇಶ್ ಕೃಷ್ಣಾಪುರ, ನವೀನ್ ಆಚಾರ್ಯ ಜನತಾಕಾಲೋನಿ ಮುಂತಾದವರು ಉಪಸ್ಥಿತರಿದ್ದರು.

Write A Comment