ಕರಾವಳಿ

ನವೆಂಬರ್ 14, 15 ಮತ್ತು 16 : ಆಳ್ವಾಸ್ ನುಡಿಸಿರಿ” – ಹತ್ತು ಮಂದಿ ಸಾಧಕರಿಗೆ ಆಳ್ವಾಸ್ ನುಡಿಸಿರಿ ಪ್ರಶಸ್ತಿ

Pinterest LinkedIn Tumblr

Alvas_Nudisiri_Press_1

Alvas_Nudisiri_Press_2

ಮಂಗಳೂರು: ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ.) ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ “ಆಳ್ವಾಸ್ ನುಡಿಸಿರಿ” ನಾಡು-ನುಡಿಯ ರಾಷ್ಟ್ರೀಯ ಸಮ್ಮೇಳನವು ಸುಂದರಿ ಆನಂದ ಆಳ್ವ ಆವರಣದ ರತ್ನಾಕರವರ್ಣಿ ವೇದಿಕೆ, ದಿ. ಡಾ.ಯು.ಆರ್.ಅನಂತಮೂರ್ತಿ ಸಭಾಂಗಣದಲ್ಲಿ ನವೆಂಬರ್ 14, 15 ಮತ್ತು 16ನೇ ದಿನಾಂಕಗಳಂದು ಸಾಹಿತ್ಯ-ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ.

ಕಾದಂಬರಿಕಾರ, ಮಕ್ಕಳ ಸಾಹಿತಿ, ಡಾ.ನಾ.ಡಿ.ಸೋಜರವರು ನವೆಂಬರ್ 14ರಂದು ಬೆಳಿಗ್ಗೆ ಆಳ್ವಾಸ್ ನುಡಿಸಿರಿ ಸಮ್ಮೇಳನಕ್ಕೆ ದೀಪ ಪ್ರಜ್ವಲನೆಯ ಮೂಲಕ ಚಾಲನೆಯನ್ನು ನೀಡಲಿದ್ದಾರೆ. ಶಾಸಕರು, ಸಂಸದರು ಈ ವೇಳೆ ಉಪಸ್ಥಿತರಿರುತ್ತಾರೆ. ಮೂರು ದಿನಗಳ ಕಾಲ ನಡೆಯುವ ಈ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಖ್ಯಾತ ಕವಿ, ಸಾಹಿತಿ ನಾಡೋಜ ಡಾ.ಸಿದ್ದಲಿಂಗಯ್ಯನವರು ವಹಿಸಿಕೊಳ್ಳಲಿದ್ದಾರೆ’ಎಂದು ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಮಾಹಿತಿ ನೀಡಿದ್ದಾರೆ.

Alvas_Nudisiri_Press_3 Alvas_Nudisiri_Press_4

ಹತ್ತು ಮಂದಿ ಸಾಧಕರಿಗೆ ಆಳ್ವಾಸ್ ನುಡಿಸಿರಿ ಪ್ರಶಸ್ತಿ

ನವೆಂಬರ್ 14, 15 ಮತ್ತು 16ನೇ ದಿನಾಂಕಗಳಂದು ನಡೆಯುವ ಆಳ್ವಾಸ್ ನುಡಿಸಿರಿ 2014ರಲ್ಲಿ ಆಳ್ವಾಸ್ ನುಡಿಸಿರಿ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 80 ಮಂದಿ ಖ್ಯಾತನಾಮರ ಹೆಸರುಗಳನ್ನು ಪ್ರಕಟಿಸಲಾಗಿದೆ.

ಅನನ್ಯ ಸಂಶೋಧಕ, ಭಾಷಾ ವಿಜ್ಞಾನಿ ಡಾ. ಸಂಗಮೇಶ ಸವದತ್ತಿಮಠ, ಸಾಹಿತಿ, ಸಂಶೋಧಕ ಪ್ರೊ. ವಸಂತ ಕುಷ್ಠಗಿ, ಖ್ಯಾತ ಕವಿ, ಅಂಕಣಕಾರ ಪ್ರೊ. ಎಚ್.ಎಸ್. ಶಿವಪ್ರಕಾಶ್, ಸಂಶೋಧಕ ಪ್ರೊ ಷ. ಶೆಟ್ಟರ್, ಕವಯಿತ್ರಿ ಡಾ. ಮಾಲತಿ ಪಟ್ಟಣಶೆಟ್ಟಿ, ನಟ, ನಿರ್ದೇಶಕ ಶ್ರೀ ಟಿ.ಎಸ್.ನಾಗಾಭರಣ, ಸಂಘಟಕ ಪ್ರೊ. ಹೆರಂಜೆ ಕೃಷ್ಣಭಟ್ಟ, ಜಾನಪದ ವಿದ್ವಾಂಸ, ಖ್ಯಾತ ಗಾಯಕ ಬಾನಂದೂರು ಕೆಂಪಯ್ಯ, ಯಕ್ಷಗಾನ ಸವ್ಯಸಾಚಿ ಶ್ರೀ ಮಂಟಪ ಪ್ರಭಾಕರ ಉಪಾಧ್ಯ, ನೃತ್ಯ ವಿದುಷಿ ಡಾ. ವಸುಂಧರಾ ದೊರೆಸ್ವಾಮಿ, ಪ್ರಖ್ಯಾತ ರಥ ಶಿಲ್ಪಿ ಶ್ರೀ ಅಶ್ವತ್ಥಪುರ ಬಾಬುರಾಯ ಆಚಾರ್ಯರನ್ನು ಆಳ್ವಾಸ್ ನುಡಿಸಿರಿ 2014ರ ಗೌರವಕ್ಕಾಗಿ ಆಯ್ಕೆ ಮಾಡಲಾಗಿದೆ ಎಂದು ಶುಕ್ರವಾರ ನಗರದ ಪತ್ರಿಕಾಭವನದಲ್ಲಿ  ಪತ್ರಿಕಾಗೋಷ್ಠಿಯಲ್ಲಿ ಮೋಹನ್ ಆಳ್ವ ಅವರು ವಿವರ ನೀಡಿದರು.

Alvas_Nudisiri_Press_9

ಪ್ರಶಸ್ತಿ ಪುರಸ್ಕೃತರ ಬಗ್ಗೆ ಒಂದಿಷ್ಟು…

ಡಾ. ಸಂಗಮೇಶ ಸವದತ್ತಿಮಠ : ಭಾಷಾ ವಿಜ್ಞಾನಿ, ಸಂಶೋಧಕ, ಸಾಹಿತಿ, ಕಲಾವಿದರಾಗಿ ಹೆಸರುವಾಸಿಯಾದ ಇವರು ಗುಲ್ಬರ್ಗಾ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ, ಕಲಾನಿಕಾಯದ ಡೀನ್ ಆಗಿ ಕಾರ್ಯನಿರ್ವಹಿಸಿದವರು. ಉತ್ತರ ಕರ್ನಾಟಕದ ಮೊತ್ತಮೊದಲ ಕನ್ನಡದ ಎಮರಿಟಸ್ ಪ್ರೊಫೆಸರ್ ‘ಕನ್ನಡ ಭಾಷಾ ವ್ಯಾಸಂಗ’ ‘ವರ್ಣನಾತ್ಮಕ ವಚನಪದಕೋಶ’ ಆರ್ಯಬಾಷಾ ವ್ಯಾಸಂಗ’ ಗಳಂಥ ಮೌಲಿಕ, ಅಪೂರ್ವ ಕೃತಿಗಳ ರಚನೆಕಾರರು. ಎಳವ ಮತ್ತು ಕೊರಚ ಭಾಷೆಗಳನ್ನು ಶೋಧಿಸಿದ ಹಿರಿಯ ಭಾಷಾವಿಜ್ಞಾನಿಗಳು.

ಪ್ರೊ. ವಸಂತ ಕುಷ್ಠಗಿ : ಗುಲಬರ್ಗಾ ವಿಶ್ವವಿದ್ಯಾನಿಲಯದ ಡೆಪ್ಯುಟಿ ರಿಜಿಸ್ಟ್ರಾರ್ ಆಗಿ, ಪ್ರಸಾರಾಂಗ ನಿರ್ದೇಶಕರಾಗಿ ೩೫ ವರ್ಷಗಳ ಪ್ರಾಧ್ಯಾಪಕರಾಗಿ, ಸಂಶೋಧಕರಾಗಿ ಹೆಸರು ಪಡೆದವರು. ಕವಿಯಾಗಿ, ಸಾಹಿತಿಯಾಗಿ, ಗ್ರಂಥ ಸಂಪಾದಕರಾಗಿ ಚಿರಪರಿಚಿತರಾದ ಇವರು ಅನೇಕ ಪ್ರಶಸ್ತಿಗಳಿಗೆ ಭಾಜನರಾದವರು.

ಪ್ರೊ. ಎಚ್.ಎಸ್. ಶಿವಪ್ರಕಾಶ್ : ಬೆಂಗಳೂರು ವಿಶ್ವವಿದ್ಯಾನಿಲಯದ ಇಂಗ್ಲೀಷ್ ಸ್ನಾತಕೋತ್ತರ ಪದವಿ ಪಡೆದ ಇವರು ಜವಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಆರ್ಟ್ಸ್ ಆಂಡ್ ಈಸ್ತೆಟಿಕ್ಸ್‌ನ ಪ್ರಾಧ್ಯಾಪಕರು. ಟಾಗೋರ್ ಕೇಂದ್ರದ ಮಾಜಿ ನಿರ್ದೇಶಕರು, ಕೇಂದ್ರ ಸಾಹಿತ್ಯ ಅಕಾಡೆಮಿ ಜರ್ನಲ್‌ನ ಮಾಜಿ ಸಂಪಾದಕರು. ಎಂಟು ಕವನಸಂಕಲನಗಳು, ಒಂಬತ್ತು ನಾಟಕಗಳು, ಎರಡು ವಿಮರ್ಶಾಕೃತಿಗಳನ್ನು ಇವರು ರಚಿಸಿದ್ದಾರೆ. ಇವರ ಕೃತಿಗಳು ಹೆಚ್ಚಿನ ಭಾರತೀಯ ಭಾಷೆಗಳಿಗೆ ಅನುವಾದಗೊಂಡಿವೆ. ಅಂತರಾಷ್ಟ್ರೀಯ ಪ್ರಕಾಶನ ಸಂಸ್ಥೆಗಳಾದ ಪೆಂಗ್ವಿನ್, ಹಾರ್ಪರ್ ಕೊಲಿನ್ಸ್ ಪ್ರಕಾಶನ ಸಂಸ್ಥೆಗಳು ಇವರ ಕೃತಿಗಳನ್ನು ಪ್ರಕಟಿಸಿದೆ. ಸಾಹಿತ್ಯ-ನಾಟಕಗಳಿಗೆ ಸಂಬಂಧಿಸಿ ಜಗತ್ತಿನಾದ್ಯಾಂತ ಉಪನ್ಯಾಸ ನೀಡಿದ ಇವರು ‘ಪ್ರಜಾವಾಣಿ’ಯಲ್ಲಿ ಬರೆಯುತ್ತಿರುವ ಅಂಕಣ ಅತ್ಯಂತ ಜನಪ್ರಿಯವಾಗಿದೆ.

ಪ್ರೊ. ಷ. ಶೆಟ್ಟರ್ : ಇತಿಹಾಸ ಮತ್ತು ಪುರಾತತ್ವ ಶಾಸ್ತ್ರದ ಪ್ರಾಧ್ಯಾಪಕರಾಗಿ, ಸಂಶೋಧಕರಾಗಿ ಹೆಸರುವಾಸಿಯಾದವರು. ಇವರು ಕರ್ನಾಟಕ ವಿಶ್ವವಿದ್ಯಾನಿಲಯ ಧಾರವಾಡದ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಆರ್ಟ್ ಹಿಸ್ಟರಿಯ ನಿರ್ದೇಶಕರಾಗಿ, ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟೋರಿಕಲ್ ರಿಸರ್ಚ್, ನವದೆಹಲಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದವರು. ಭಾರತೀಯ ಪುರಾತತ್ವ, ಕಲಾ‌ಇತಿಹಾಸ, ತತ್ವಶಾಸ್ತ್ರ, ಶಾಸ್ತ್ರೀಯ ಸಾಹಿತ್ಯಗಳ ವಿಚಾರದಲ್ಲಿ ಕಳೆದ ೪೦ ವರ್ಷಗಳಿಂದ ಅಧ್ಯಯನ ಮಾಡುತ್ತಿದ್ದಾರೆ. ಕಲಾ ಇತಿಹಾಸಕ್ಕೆ ೪ ಸಂಪುಟಗಳು, ತತ್ವಶಾಸ್ತ್ರಕ್ಕೆ ಸಂಬಂಧಿಸಿ ಎರಡು ಕೃತಿಗಳು, ಮಾನವ ನಾಗರಿಕತೆಯ ಕುರಿತು ಒಂದು ಕೃತಿ, ಇತಿಹಾಸಕ್ಕೆ ಸಂಬಂಧಿಸಿ ೪ ಕೃತಿಗಳನ್ನು ಇವರು ರಚಿಸಿದ್ದಾರೆ.

ಪ್ರೊ. ಮಾಲತಿ ಪಟ್ಟಣ ಶೆಟ್ಟಿ : ಇಂಗ್ಲೀಷ್ ಭಾಷಾ ಪ್ರಾಧ್ಯಾಪಿಕೆಯಾಗಿ, ವಿಭಾಗ ಮುಖ್ಯಸ್ಥೆಯಾಗಿ ೩೪ ವರ್ಷಗಳ ಸಾರ್ಥಕ ಸೇವೆ. ಕವಿ, ಕಥೆಗಾರ್ತಿ, ವಿಮರ್ಶಕಿ, ಮಕ್ಕಳ ಸಾಹಿತಿಯಾಗಿ ಹೆಸರುವಾಸಿಯಾದವರು. ಕೇಂದ್ರ ಸಾಹಿತ್ಯ ಅಕಾಡೆಮಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಮೊದಲಾದ ಸಂಸ್ಥೆಗಳ ಸದಸ್ಯರಾಗಿ ಚಿರಪಚಿತರು.

ಟಿ.ಎಸ್. ನಾಗಾಭರಣ : ಚಲನಚಿತ್ರ, ರಂಗಭೂಮಿ, ದೂರದರ್ಶನಗಳಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದವರು ಇವರು. ತಮ್ಮ ೩೧ ಚಿತ್ರಗಳಲ್ಲಿ ೯ ರಾಷ್ಟ್ರೀಯ ಪ್ರಶಸ್ತಿ, ೧೪ ರಾಜ್ಯಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡವರು. ೭೫ ವರ್ಷಗಳ ಕನ್ನಡ ಚಲನಚಿತ್ರ ಪರಂಪರೆಯಲ್ಲಿ ಮೂರುದಶಕಗಳ ಸಾರ್ಥಕ ಸೇವೆ ಇವರದು. ಇವರ ೭ ಚಲನಚಿತ್ರಗಳು ‘ಪನೋರಮಾ’ ಹಾಗೂ ‘ಅಂತರಾಷ್ಟ್ರೀಯ ಚಲನಚಿತ್ರೋತ್ಸವ’ಗಳಿಗೆ ಆಯ್ಕೆಯಾಗಿವೆ. ರಾಷ್ಟ್ರೀಯ ಭಾವೈಕ್ಯತೆಗಾಗಿ ಮೂರು ಬಾರಿ ರಾಷ್ಟ್ರೀಯ ಪ್ರಶಸ್ತಿ ಪಡೆದ ಏಕೈಕ ನಿರ್ದೇಶಕರು ಇವರು. ರಂಗಜಂಗಮ ಬಿ.ವಿ. ಕಾರಂತರೊಂದಿಗೆ ಕಟ್ಟಿದ ‘ಬೆನಕ ಸಂಸ್ಥೆ’, ಮಕ್ಕಳ ರಂಗಭೂಮಿ ‘ಬೆನಕ ಮಕ್ಕಳ ನಾಟಕ ಸಂಸ್ಥೆ’ಯ ಸಂಸ್ಥಾಪಕ ಅಧ್ಯಕ್ಷರು.

ಪ್ರೊ. ಹೆರಂಜೆ ಕೃಷ್ಣ ಭಟ್ಟ : ಸಂಸ್ಕೃತ ಉಪನ್ಯಾಸಕರಾಗಿ, ವಿಭಾಗ ಮುಖ್ಯಸ್ಥರಾಗಿ ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ಸೇವೆ. ಎಂ.ಜಿ.ಎಂ. ಕಾಲೇಜಿನ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಯಕ್ಷರಂಗ ಹಾಗೂ ಪ್ರಾದೇಶಿಕ ರಂಗಕಲೆಗಳ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಸೇವೆಸಲ್ಲಿಸುತ್ತಿದ್ದಾರೆ. ‘ಗೋವಿಂದ ಪೈ ಸಂಶೋಧನಾ ಸಂಪುಟ’, ಇಂಗ್ಲೀಷ್ ಆವೃತ್ತಿ ‘ಇಂಡಿಯಾ’, ‘ಬೈಕಾಡಿ’, ‘ತುಳು ಕರ್ನಾಟಕ ಅರಸುಮನೆತನಗಳು’, ‘ಸಂಶೋಧನಾ ಪ್ರಜ್ಞೆ’ಯೇ ಮೊದಲಾದ ಕೃತಿಗಳ ಸಂಪಾದಕರಲ್ಲಿ ಒಬ್ಬರು.

ಡಾ. ಬಾನಂದೂರು ಕೆಂಪಯ್ಯ : ಜನಪದ ಗೀತೆಗಳಿಗೆ ಗೌರವ ತಂದುಕೊಟ್ಟ ಗಾಯಕರಲ್ಲಿ ಡಾ. ಬಾನಂದೂರು ಕೆಂಪಯ್ಯನವರು ಅಗ್ರಗಣ್ಯರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬಿಡದಿ ಸಮೀಪದ ಬಾನಂದೂರಿನಲ್ಲಿ ಇವರ ಜನನ. ದಲಿತರು ಹಾಡುವ ಜನಪದ ಗೀತೆಗಳನ್ನು ಮೂಲ ಧಾಟಿಯಲ್ಲಿ ಸಂಗ್ರಹಿಸಿ ಹಾಡುವುದು ಡಾ. ಬಾನಂದೂರು ಕೆಂಪಯ್ಯನವರ ವಿಶೇಷತೆ. ಅಸಂಖ್ಯ ಹಾಡುಗಳನ್ನು ಅನಕ್ಷರಸ್ಥ ಹಾಡುಗಾರರಿಂದಲೇ ಕಲಿತು ಹಾಡಿದವರು ಇವರು. ಹಂಪಿ ಕನ್ನಡ ವಿಶ್ವವಿದ್ಯಾನಿಲಯಕ್ಕೆ ‘ಕರ್ನಾಟಕ ದಲಿತ ಜನಪದ ಸಂಗೀತ’ದ ಕುರಿತ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಲಭಿಸಿದೆ. ‘ಚಂದುಳ್ಳಿ ಪದವ ಕಲಿಸವ್ವ’, ‘ಮೊಗ್ಗಾಗಿ ಬಾರೋ ತುರುಬಿಗೆ’ ಎನ್ನುವ ಜಾನಪದ ಗೀತೆಗಳ ಸಂಕಲನವನ್ನು ಪ್ರಕಟಿಸಿದ್ದಾರೆ. ಇವರು ಜಾನಪದ ಕಥೆಗಳ ಸಂಗ್ರಾಹಕರೂ ಹೌದು, ಮಾತ್ರವಲ್ಲ ಸ್ವತಃ ಕಥೆಗಾರರೂ ಹೌದು.

ಮಂಟಪ ಪ್ರಭಾಕರ ಉಪಾಧ್ಯ : ಉಡುಪಿಯ ಯಕ್ಷಗಾನ ಕೇಂದ್ರದಲ್ಲಿ ಕಲೆಯನ್ನು ಕಲಿತು ವೃತ್ತಿಪರ ಮೇಳಗಳ ಕಲಾವಿದರಾಗಿ ಹಲವು ವರ್ಷಗಳ ಕಾಲ ದುಡಿದವರು. ಉತ್ಕಟ ಭಾವಾಭಿವ್ಯಕ್ತಿಯಿಂದಲೂ ಕಣ್ಮನ ಸೆಳೆಯುವ ನೃತ್ಯ – ಅಭಿನಯ -ಕಲ್ಪನೆಗಳಿಂದಲೂ ಮಂಟಪರು ರಸಿಕರ ಮನೆ ಮಾತಾದವರು. ಮಂಟಪರ ಹೆಸರು ಚಿರಸ್ಥಾಯಿಯಾಗಿರುವುದು ಅವರ ಅನನ್ಯವೂ ಅಪೂರ್ವವೂ ಆದ ಏಕವ್ಯಕ್ತಿ ಯಕ್ಷಗಾನದ ಮೂಲಕ. ಯಕ್ಷಗಾನವನ್ನು ಶಾಸ್ತ್ರೀಯ ನೃತ್ಯ – ನಾಟ್ಯ ವೇದಿಕೆಗಳಿಗೆ, ರಾಷ್ಟ್ರೀಯ-ಅಂತಾರಾಷ್ಟ್ರೀಯ ಕಲಾ ಸಮ್ಮೇಳನಗಳಿಗೆ, ಕಥಕ್, ಒಡಿಸ್ಸಿ, ಮಣಿಪುರಿ, ಕೂಚಿಪುಡಿ, ಭರತನಾಟ್ಯಗಳಂಥ ಕಲಾ ಪ್ರಕಾರಗಳಿಗೆ ಹೆಗಲೆಣೆಯಾಗಿ ಪರಿಚಯಿಸಿದವರು.

ಡಾ. ವಸುಂಧರಾ ದೊರೆಸ್ವಾಮಿ : ಮೂರು ದಶಕಗಳಿಂದ ಕಲಾರಾಧನೆಯಲ್ಲಿ ತೊಡಗಿಸಿಕೊಂಡು, ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಯೋಗ ಮತ್ತು ಭರತನಾಟ್ಯ ಸಂಬಂಧವಾಗಿ ಡಾಕ್ಟರೇಟ್ ಪದವಿ ಪಡೆದಿರುತ್ತಾರೆ. ದೂರದರ್ಶನದ ‘ಎ’ ಶ್ರೇಣಿಯ ಕಲಾವಿದೆಯಾಗಿ, ಮೈಸೂರು ವಿಶ್ವವಿದ್ಯಾನಿಲಯದ ನೃತ್ಯ ವಿಭಾಗದ ಆಯ್ಕೆ ಸಮಿತಿಯ ಸದಸ್ಯರಾಗಿ ಹಲವಾರು ನೃತ್ಯ ಸಂಬಂಧಿ ಸಂಸ್ಥೆಗಳಲ್ಲಿ ಪರಿಣಿತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ವರ್ಷದಲ್ಲಿ ಮೂರು-ನಾಲ್ಕು ತಿಂಗಳುಗಳ ಕಾಲ ಭರತನಾಟ್ಯ ಹಾಗೂ ಯೋಗಕ್ಕೆ ಸಂಬಂಧಿಸಿದಂತೆ ಜಗದಗಲ ಕಾರ್ಯಾಗಾರಗಳನ್ನು ಸಂಯೋಜಿಸುತ್ತಾ ಸಕ್ರಿಯರಾಗಿರುವ ಇವರು ಜಗತ್ತಿನ ಹೆಚ್ಚಿನ ರಾಷ್ಟ್ರಗಳಲ್ಲಿ ಭರತನಾಟ್ಯ ಕಲಾಪ್ರೌಢಿಮೆಯನ್ನು ಮೆರೆದಿದ್ದಾರೆ. ಇವರ ಪಾಂಚಾಲಿ, ಸೌಂದರ್ಯ ಲಹರಿ, ಶಕುಂತಕುಂಜನ, ಅಂಬೆ ಹಾಗೂ ದಾಕ್ಷಾಯಿನಿ ಕೃತಿಗಳು ಅತ್ಯಂತ ಜನಮನ್ನಣೆ ಪಡೆದು ಹೆಸರುವಾಸಿಯಾದುವುಗಳು.

ಅಶ್ವತ್ಥಪುರ ಬಾಬುರಾಯ ಆಚಾರ್ಯ : ಬಾಬುರಾಯ ಆಚಾರ್ಯರು ಬಡಗ ಮಿಜಾರು ಗ್ರಾಮದ ಅಶ್ವತ್ಥಪುರದವರು. ವೃತ್ತಿಯಲ್ಲಿ ದಾರು ಶಿಲ್ಪ ಕಲಾವಿದರಾಗಿ ಪ್ರಸಿದ್ಧರಾದವರು. ಮೂತ್ತೆಂಟು ವರ್ಷಗಳ ತಮ್ಮ ವೃತ್ತಿ ಜೀವನದಲ್ಲಿ ಮೂವತ್ತಕ್ಕಿಂತಲೂ ಹೆಚ್ಚು ರಥ ಶಿಲ್ಪಗಳನ್ನು ತಯಾರಿಸಿದ ಹೆಗ್ಗಳಿಕೆ ಇವರದು. ದೈವಾಲಯ, ದೇವಾಲಯಗಳ ರಥ ಶಿಲ್ಪಗಳು, ಮೂರ್ತಿ ಶಿಲ್ಪಗಳು ಇವರ ಶಿಲ್ಪ ಕೌಶಲ್ಯಕ್ಕೆ ಸಾಕ್ಷಿಯಾಗಿವೆ. 2011ರಲ್ಲಿ ಇವರ ಶಿಲ್ಪ ಕಲಾ ಪ್ರತಿಭೆಯನ್ನು ಗಮನಿಸಿ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ ಎಂದು ಪ್ರಶಸ್ತಿ ಪುರಸ್ಕೃತರ ಬಗ್ಗೆ ಮಾಹಿತಿ ನೀಡಿದರು.

Alvas_Nudisiri_Press_5 Alvas_Nudisiri_Press_6 Alvas_Nudisiri_Press_7 Alvas_Nudisiri_Press_8

ಕರ್ನಾಟಕ ವರ್ತಮಾನದ ತಲ್ಲಣಗಳು : ನಾಲ್ಕು ಪ್ರಧಾನ ಗೋಷ್ಠಿ

ನಾಡು-ನುಡಿಯ ರಾಷ್ಟ್ರೀಯ ಸಮ್ಮೇಳನದಲ್ಲಿ ಮುಖ್ಯ ಪರಿಕಲ್ಪನೆಯಾಗಿ `ಕರ್ನಾಟಕ ವರ್ತಮಾನದ ತಲ್ಲಣಗಳು’ ಎಂಬ ವಿಷಯವನ್ನು ಆರಿಸಲಾಗಿದೆ. ಈ ವಿಚಾರವಾಗಿ ನಾಲ್ಕು ಪ್ರಧಾನ ಗೋಷ್ಠಿಗಳಿದ್ದು ಶಿವಾನಂದ ಕಳವೆ, ನಾಗೇಶ ಹೆಗಡೆ, ಡಾ.ಮೋಹನ ಚಂದ್ರಗುತ್ತಿ, ಡಾ.ಗುರುರಾಜ ಕರ್ಜಗಿ, ಎ.ಈಶ್ವರಯ್ಯ ಮಣಿಪಾಲ, ಡಾ.ಕೆ.ಆರ್.ಸಂಧ್ಯಾ ರೆಡ್ಡಿ, ಪ್ರತಿಭಾ ನಂದಕುಮಾರ್, ಡಾ.ಪಿ.ಎನ್.ರಾಮಚಂದ್ರನ್‍ರವರು ಈ ವಿಷಯದಲ್ಲಿ ಪ್ರಬಂಧ ಮಂಡಿಸಲಿದ್ದಾರೆ.

ಶತಮಾನದ ಸಂಭ್ರಮವನ್ನು ಹಂಚಿಕೊಳ್ಳುವ, ಗೌರವಿಸುವ ಶತಮಾನದ ನಮನ ಕಾರ್ಯಕ್ರಮದಲ್ಲಿ ಕನ್ನಡದ ಖ್ಯಾತ ಜಾನಪದ ತಜ್ಞರಾಗಿದ್ದ ನಾಡೋಜ ಡಾ.ಎಚ್.ಎಲ್.ನಾಗೇಗೌಡರಿಗೆ ನುಡಿನಮನವನ್ನು ಡಾ.ಚಿಕ್ಕೆರೆ ಶಿವಶಂಕರ ಸಲ್ಲಿಸಲಿದ್ದಾರೆ. ಶತಾಯುಷಿ ನಾಡೋಜ ಕಯ್ಯಾರ ಕಿಂಞಣ್ಣ ರೈಯವರಿಗೆ ಡಾ.ಸದಾನಂದ ಪೆರ್ಲರವರು ನುಡಿನಮನ ಸಲ್ಲಿಸಲಿದ್ದಾರೆ ಎಂದರು.

ತುಳು-ಕೊಂಕಣಿ-ಬ್ಯಾರಿ ಭಾಷೆಗಳ ಸಮ್ಮೇಳನ

ಸಾಂಸ್ಕೃತಿಕ ನೆಲೆಯಲ್ಲಿ ಎಲ್ಲ ಧರ್ಮದವರನ್ನು ಪರಸ್ಪರ ಅರಿತುಕೊಳ್ಳುವ ಉದ್ದೇಶದಿಂದ ಈ ವರ್ಷ ಸಮಾನಾಂತರ ವೇದಿಕೆಯಲ್ಲಿ ದಿನವೊಂದರಂತೆ ತುಳು-ಕೊಂಕಣಿ-ಬ್ಯಾರಿ ಭಾಷೆಗಳ ಸಮ್ಮೇಳನವನ್ನು ಏರ್ಪಡಿಸಲಾಗಿದೆ. ಮುಸ್ಸಂಜೆ 5.30ಕ್ಕೆ ಪ್ರಾರಂಭವಾಗುವ ಸಮ್ಮೇಳನದಲ್ಲಿ ಒಂದು ಗಂಟೆಯ ಸಭಾ ಕಾರ್ಯಕ್ರಮವಿದ್ದು ಆಯಾಭಾಷೆಗಳಿಗೆ ದುಡಿದ ಮಹನೀಯರನ್ನು ಸನ್ಮಾನಿಸುವ ಹಾಗೂ ಉಪನ್ಯಾಸದ ಕಾರ್ಯಕ್ರಮಗಳಿರುತ್ತದೆ. ಸಂಜೆ ೬:೩೦ರಿಂದ 10 ಗಂಟೆಯವರೆಗೆ ಆಯಾ ಸಾಂಸ್ಕೃತಿಯನ್ನು ಪರಿಚಯಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಸುಮಾರು ಇನ್ನೂರಕ್ಕೂ ಅಧಿಕ ಕನ್ನಡ ಪುಸ್ತಕಗಳ ಮಾರಾಟ ಮಳಿಗೆಗಳು, ತಿಂಡಿ ತಿನಸುಗಳ ಹಾಗೂ ಇನ್ನಿತರ ಮಳಿಗೆಗಳಿಗೆ ಈ ಸಮ್ಮೇಳನದಲ್ಲಿ ಅವಕಾಶ ಕಲ್ಪಿಸಿ ಕೊಡಲಾಗಿದೆ. ಕೇವಲ 500 ರೂಪಾಯಿ ಶುಲ್ಕವನ್ನು ನಿಗದಿಪಡಿಸಲಾಗಿದೆ. ಸಮ್ಮೇಳನದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುವ ಸಂಸ್ಥೆಯ ಗುರುತುಚೀಟಿಯೊಂದಿಗೆ ಬಂದು ಸಮ್ಮೇಳನದಲ್ಲಿ ಪಾಲ್ಗೊಳ್ಳುವುದಾದರೆ ಸಂಪೂರ್ಣ ಉಚಿತವಾಗಿ ವಸತಿ ಮತ್ತು ಊಟ ಉಪಚಾರದದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮೋಹನ ಆಳ್ವ ತಿಳಿಸಿದರು.

Write A Comment