ಕರಾವಳಿ

ಸೌಪರ್ಣೀಕ ನದಿಯ ಉಪ್ಪುನೀರಿನ ತಡೆಗೋಡೆ ಪ್ರದೇಶಕ್ಕೆ ಆಸ್ಕರ್ ಭೇಟಿ

Pinterest LinkedIn Tumblr

ಕುಂದಾಪುರ: ಹೆಮ್ಮಾಡಿ ಸಮೀಪದ ಹೆಮ್ಮಾಡಿ ಕಟ್ಟು ಎಂಬಲ್ಲಿ ಸೌಪರ್ಣಿಕ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಉಪ್ಪು ನೀರಿನ ತಡೆಗೋಡೆ ಪ್ರದೇಶಕ್ಕೆ ಸೋಮವಾರ ಬೆಳಿಗ್ಗೆ ಭೇಟಿ ನೀಡಿದ ಮಾಜಿ ಕೇಂದ್ರ ಸಚಿವ ಹಾಗೂ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ ಸೊರಕೆಯವರು ಭೇಟಿ ನೀಡಿ ಸ್ಥಳೀಯ ಸಮಸ್ಯೆಗಳ ಪರಿಶೀಲನೆ ನಡೆಸಿದರು.

ಈ ವೇಳೆ ಮಾತನಾಡಿದ ಬೈಂದೂರು ಕ್ಷೇತ್ರದ ಶಾಸಕ ಕೆ.ಗೋಪಾಲ ಪೂಜಾರಿಯವರು ತಡೆಗೋಡೆಗೆ ನಿರ್ಮಿಸಲಾದ ಕಿಂಡಿಗಳಿಗೆ ಮಾನವ ಬಳಕೆಯ ತಡೆ ಹಲಗೆಗಳನ್ನು ಹಾಕಲಾಗುತ್ತಿದ್ದು, ಹಲಗೆಗಳ ಬಳಕೆಯಲ್ಲಿ ವ್ಯತ್ಯಯ ಉಂಟಾಗುವುದರಿಂದ ನೀರಿನ ಹರಿವನ್ನು ಸರಿಯಾಗಿ ನಿಯಂತ್ರಿಸಲಾಗದೆ, ಆಸು ಪಾಸಿನ ಕೃಷಿಕರಿಗೆ ಸಮಸ್ಯೆಗಳು ಉಂಟಾಗುತ್ತಿದೆ. ಇದರಿಂದಾಗಿ ಯೋಜನೆಯ ಒಟ್ಟಾರೆ ಉದ್ದೇಶವೇ ಸಫಲವಾಗುತ್ತಿಲ್ಲ ಎಂದು ವಿವರಿಸಿದರು.

Kundapura_Souparnika_River

ಇದಕ್ಕೆ ಸ್ಪಂದಿಸಿದ ಆಸ್ಕರ್ ಫೆರ್ನಾಂಡಿಸ್ ಅವರು ಸ್ಥಳದಿಂದಲೆ ಮೊಬೈಲ್ ದೂರವಾಣಿಯಲ್ಲಿ ರಾಜ್ಯದ ಬೃಹತ್ ನೀರಾವರಿ ಸಚಿವ ಎ.ಬಿ ಪಾಟೀಲ್ ಅವರನ್ನು ಸಂಪರ್ಕಿಸಿ ಅವರಿಗೆ ಸಮಸ್ಯೆಯ ಮನವರಿಕೆಯನ್ನು ಮಾಡಿಕೊಟ್ಟರು. ಪ್ರಸ್ತುತ ಯೋಜನೆಯ ನಿರ್ವಹಣೆ ಸಣ್ಣ ನೀರಾವರಿ ಇಲಾಖೆಯ ಅಡಿಯಲ್ಲಿ ಇರುವುದರಿಂದ ನಿರ್ವಹಣೆಯ ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದು ಸಾಧ್ಯವಾಗುತ್ತಿಲ್ಲ. ಯಾಂತ್ರೀಕೃತ ಹಲಗೆಗಳ ನಿರ್ವಹಣೆ ಮಾಡುವುದರಿಂದ ಸಮಸ್ಯೆಗೆ ಪರಿಹಾರ ದೊರಕಬಹುದು ಎನ್ನುವ ಕುರಿತು ಸ್ಥಳೀಯರಲ್ಲಿ ಭರವಸೆ ಇರುವುದರಿಂದ ಯೋಜನೆಯ ನಿರ್ವಹಣೆಯನ್ನು ಸಣ್ಣ ನೀರಾವರಿ ಇಲಾಖೆಯಿಂದ ಬೃಹತ್ ನೀರಾವರಿ ಇಲಾಖೆಗೆ ವರ್ಗಾಯಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದರು. ಇದಕ್ಕೆ ಸ್ಪಂದಿಸಿದ ಸಚಿವರು ಅಧಿಕಾರಿಗಳ ಅಭಿಪ್ರಾಯ ಪಡೆದು ಖುದ್ದಾಗಿ ತಾನು ಮಾಹಿತಿ ನೀಡುವುದಾಗಿ ಆಸ್ಕರ್ ಅವರಿಗೆ ಭರವಸೆ ನೀಡಿದರು.

ಸ್ಳಳದಲ್ಲಿ ಹಾಜರಿದ್ದ ವರಾಹಿ ಯೋಜನೆಯ ಹಿರಿಯ ಅಧಿಕಾರಿಗಳು ಯೋಜನೆಯ ನಿರ್ವಹಣೆಯ ಉಸ್ತುವಾರಿಯನ್ನು ಸಣ್ಣ ನೀರಾವರಿ ಇಲಾಖೆಯಿಂದ, ಬ್ರಹತ್ ನೀರಾವರಿ ಇಲಾಖೆಗೆ ವರ್ಗಾಹಿಸುವಂತೆ ಸ್ಥಳೀಯ ಶಾಸಕರು ಸರ್ಕಾರಕ್ಕೆ ಪತ್ರ ಬರೆದು ತಿಳಿಸಿದ್ದು, ಸರ್ಕಾರ ಈ ಕುರಿತು ನಿರ್ಧಾರ ಕೈಗೊಂಡು ಆದೇಶ ನೀಡಿದರೆ, ನಮ್ಮ ಇಲಾಖೆಯಿಂದ ನಿರ್ವಹಣೆಯ ಉಸ್ತುವಾರಿಯನ್ನು ವಹಿಸಿಕೊಳ್ಳಲಾಗುವುದು ಎಂದು ತಿಳಿಸಿದರು.

ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಸ್.ರಾಜು ಪೂಜಾರಿ, ಕೆಪಿಸಿಸಿ ಕಾರ್ಯದರ್ಶಿ ಎಂ.ಎ ಗಫೂರ್, ಮಾಜಿ ಜಿ.ಪಂ ಉಪಾಧ್ಯಕ್ಷ ಎಚ್.ರಾಜೂ ದೇವಾಡಿಗ, ಸಿದ್ದಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಂಪಿಗೇಡಿ ಸಂಜೀವ ಶೆಟ್ಟಿ, ಉದ್ಯಮಿ ರಾಜೇಶ್ ಕಾರಂತ್, ಹಸನ್ ಸಾಹೇಬ್ ಹೆಮ್ಮಾಡಿ, ವೀರಭಧ್ರ ಶೆಟ್ಟಿಗಾರ್ ಇದ್ದರು.

Write A Comment