ಕರಾವಳಿ

ಉಡುಪಿ ಎಬಿವಿಪಿ: ತೀರ್ಥಹಳ್ಳಿ ಬಾಲಕಿ ನಂದಿತಾ ಪ್ರಕರಣ: ಸೂಕ್ತ ತನಿಖೆಗೆ ಆಗ್ರಹಿಸಿ ಪ್ರತಿಭಟನೆ

Pinterest LinkedIn Tumblr

ಉಡುಪಿ: ರಾಜ್ಯದಲ್ಲಿ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟುವಲ್ಲಿ ರಾಜ್ಯ ಸರ್ಕಾರದ ವೈಫಲ್ಯವನ್ನು ವಿರೋಧಿಸಿ, ಸೂಕ್ತ ರಕ್ಷಣೆ, ಸೂಕ್ತ ಕಾನೂನು ಹಾಗೂ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ರಾಜ್ಯ ಸರ್ಕಾರವನ್ನು ಆಗ್ರಹಿಸಿ ರಾಜ್ಯದಾದ್ಯಂತ ಬೃಹತ್ ಪ್ರತಿಭಟನೆಗೆ ಅಭಾವಿಪ ಕರೆ ನೀಡಿದ್ದು ಸೋಮವಾರ ಉಡುಪಿಯಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಅತ್ಯಾಚಾರಿಗಳ ಸ್ವೇಚ್ಛಾಚಾರಕ್ಕೆ ಕಡಿವಾಣ ಹಾಕಲಾಗದೆ ಕೈಕಟ್ಟಿ ಕುಳಿತಿರುವ, ನಿಷ್ಕ್ರಿಯ ರಾಜ್ಯ ಸರ್ಕಾರದ ವಿರುದ್ದ ಅಭಾವಿಪ ರಾಜ್ಯದಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ.

Udupi_ABVP_Protest

ಪ್ರಸ್ತುತ ರಾಜ್ಯದಲ್ಲಿ ನಡೆಯುತ್ತಿರುವ ಅತ್ಯಾಚಾರ ದೌರ್ಜನ್ಯ ಪ್ರಕರಣಗಳನ್ನು ಗಮನಿಸಿದಾಗ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು ಇದನ್ನು ಸೂಕ್ತವಾಗಿ ನಿರ್ವಹಿಸಲು ಅಸಮರ್ಥವಾಗಿರುವ ಸರ್ಕಾರದ ಪ್ರತಿನಿಧಿಗಳು ಹೋರಾಟವನ್ನು ಹತ್ತಿಕ್ಕುವ, ಮಾಧ್ಯಮಗಳ ಮೇಲೆ ಕೋಪಾ-ತಾಪ ಪ್ರದರ್ಶಿಸುವ ಹಂತಕ್ಕೆ ತಲುಪಿದ್ದು ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ತನಗಿರುವ ನಿಲುವನ್ನು ಪ್ರದರ್ಶಿಸುತ್ತಿದ್ದಾರೆ. ರಾಜ್ಯದಲ್ಲಿ ಸರಣಿ ಅತ್ಯಾಚಾರ, ದೌರ್ಜನ್ಯದ ಘಟನೆಗಳು ನಡೆಯುತ್ತಿದ್ದರು ಯಾವುದೇ ಅರಿವಿಲ್ಲದಂತೆ ವರ್ತಿಸುತ್ತಿರುವ ರಾಜ್ಯ ಸರ್ಕಾರದ ಈ ನಿರ್ಲಜ್ಜ, ನಿರ್ಲಕ್ಷ ನಿಲುವನ್ನು ಅಭಾವಿಪ ತೀವ್ರವಾಗಿ ಖಂಡಿಸುತ್ತದೆ.

ಕಳೆದ ಒಂದು ವರ್ಷದಲ್ಲಿ ಕಾಲೇಜು ಕ್ಯಾಂಪಸ್‌ಗಳಲ್ಲಿ, ವಿದ್ಯಾರ್ಥಿನಿಯರ ಮೇಲೆ ನಡೆದ ಪ್ರಕರಣಗಳು, ಶಾಲೆಯಲ್ಲಿನ ಮುಗ್ಧ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಬಗ್ಗೆ ಸರ್ಕಾರ ಇಲ್ಲಿಯವರೆಗೂ ಸೂಕ್ತ ರೀತಿಯಲ್ಲಿ ಸ್ಪಂದಿಸಿಲ್ಲ, ಅತ್ಯಾಚಾರಿಗಳಿಗೆ ನಡುಕ ಹುಟ್ಟುವಂತ ಯಾವುದೇ ಕಠಿಣಕ್ರಮಕ್ಕೆ ಮುಂದಾಗಿಲ್ಲ ಅನಧಿಕೃತ ಶಾಲೆಗಳ ಬಗ್ಗೆ ಮಾಧ್ಯಮಗಳ ವರದಿ ಹಾಗೂ ಸಂಘಟನೆಗಳ ಹೋರಾಟದ ನಂತರವೇ ಎಚ್ಚರಗೊಳ್ಳವ ಸರ್ಕಾರದ ನೀತಿಯನ್ನು ನೋಡಿದರೆ ಸರ್ಕಾರ ಈ ವಿಷಯಗಳ ಬಗ್ಗೆ ಜಾಣಕುರುಡನ್ನು ಪ್ರದರ್ಶಿಸುತ್ತಿರುವುದು ಖಂಡನೀಯ.

ಇಡೀ ರಾಜ್ಯವನ್ನೇ ತಲ್ಲಣಗೊಳಿಸಿದ ಬೆಳ್ತಂಗಡಿ ಕು.ಸೌಜನ್ಯ ಪ್ರಕರಣ, ಉಡುಪಿಯ ಕು.ರತ್ನಾ ಕೊಟ್ಟಾರಿ ಪ್ರಕರಣ ಮಣಿಪಾಲದ ವೈದ್ಯ ವಿದ್ಯಾರ್ಥಿನಿಯ ಮೇಲಿನ ಅತ್ಯಾಚಾರ, ದೇರಳಕಟ್ಟಿಯ ದಂತ ವೈದ್ಯ ವಿದ್ಯಾರ್ಥಿನಿಯ ಮೇಲಿನ ಬಲಾತ್ಕಾರ ಮತ್ತು ನೀಲಿ ಚಿತ್ರ ತಯಾರಿ ಜಾಲದ ಪ್ರಕರಣ, ಶಿಕ್ಷಣ ಸಚಿವರ ಸ್ವಂತ ಕ್ಷೇತ್ರ ತೀರ್ಥಹಳ್ಳಿಯಲ್ಲಿ ನಡೆದ ಪ್ರಕರಣ, ಬೆಂಗಳೂರಿನ ವಿಬ್ ಗಯಾರ್, ಆರ್ಕಿಡ್, ಕೇಂಬ್ರಿಡ್ಜ್ ಶಾಲೆಗಳ ಪ್ರಕರಣ ಹಾಗೂ ನಿನ್ನೆ ನಡೆದ ತೀರ್ಥಹಳ್ಳಿಯ ೧೪ವರ್ಷದ ೮ನೇ ತರಗತಿಯ ವಿದ್ಯಾರ್ಥಿನಿ ಕು ನಂದಿತಾ ಪೂಜಾರಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಮತ್ತು ವಿಶಪ್ರಾಶನದ ನಂತರ ಹತ್ಯೆಯ ಪ್ರಕರಣಗಳು ರಾಜ್ಯವನ್ನು ತಲೆ ತಗ್ಗಿಸುಂತೆ ಮಾಡಿದೆ. ಈ ಎಲ್ಲಾ ಘಟನೆಗಳು ರಾಜ್ಯದಲ್ಲಿ ತಲ್ಲಣವನ್ನು ಉಂಟುಮಾಡಿದ್ದು ಅಸುರಕ್ಷತೆಯ ವಾತವರಣವನ್ನು ನಿರ್ಮಿಸಿವೆ. ಆದ್ದರಿಂದ ರಾಜ್ಯದಲ್ಲಿ ನಡೆದ ಈ ಎಲ್ಲಾ ಘಟನೆಗಳ ತನಿಖೆಗಾಗಿ ಸಮರ್ಥ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತನಿಖಾ ದಳವನ್ನು ನೇಮಿಸಬೇಕು ಹಾಗೂ ಈ ಪ್ರಕರಣಗಳ ಶೀಘ್ರ ವಿಲೇವಾರಿಗಾಗಿ ವಿಶೇಷ ನ್ಯಾಯಾಲಯಗಳನ್ನು ತೆರೆಯಬೇಕೆಂದು ಅಭಾವಿಪ ಈ ಮೂಲಕ ಆಗ್ರಹಿಸುತ್ತದೆ.

ಕರ್ನಾಟಕ ರಾಜ್ಯ ಸರ್ಕಾರ ತಕ್ಷಣವೇ ತನ್ನ ಜವಾಬ್ದಾರಿಯನ್ನು ಅರಿತು ಬೇಜವಬ್ದಾರಿ ಹೇಳಿಕೆಯನ್ನು ನೀಡಿ ಕಾಲಹರಣ ಮಾಡದೇ ನೈಜ ಸಾಮಾಜಿಕ ಕಳಕಳಿಯನ್ನು ತೋರಿಸಬೇಕಾಗಿದೆ. ಅಲ್ಲದೇ ಅತ್ಯಾಚಾರಕ್ಕೊಳಕಾದ ಸಂತ್ರಸ್ಥರನ್ನು ಗೃಹ ಸಚಿವರು ಖುದ್ದು ಭೇಟಿ ಮಾಡಿ ಧೈರ್ಯ ತುಂಬಬೇಕಿದೆ. ಅತ್ಯಾಚಾರ ಪ್ರಕರಣಗಳ ಕುರಿತು ಕೇವಲ ಚರ್ಚೆ ಮಾತ್ರ ನಡೆಸದೆ ಕುಕೃತ್ತವೆಸಗಿದವರ ಮೇಲೆ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಕಠಿಣ ಸಂದೇಶವನ್ನು ಸಮಾಜ ಘಾತುಕರಿಗೆ, ಅತ್ಯಾಚಾರಿಗಳಿಗೆ ರವಾನಿಸಬೇಕು. ಅತ್ಯಾಚಾರದಂತಹ ಹೀನ ಕೃತ್ಯವನ್ನು ಎಸಗುವ ವ್ಯಕ್ತಿಗಳು ಮತ್ತು ಅವರ ರಕ್ಷಣೆಗೆ ನಿಲ್ಲುವ ಅಧಿಕಾರಿಗಳನ್ನು ಶಿಕ್ಷಿಸಿ ಕಠಿಣ ಕಾನೂನನ್ನು ರೂಪಿಸಬೇಕು.

ಈ ರೀತಿ ಸರ್ಕಾರ ಹಲವು ಕಠಿಣ ಕ್ರಮಗಳನ್ನು ಕೈಗೊಂಡು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಿ ಅತ್ಯಾಚಾರಿಗಳಿಂದ ರಾಜ್ಯವನ್ನು ರಕ್ಷಿಸುವ ಹೊಣೆಗಾರಿಕೆ ಸರ್ಕಾರದ ಮೇಲಿದೆ. ಈ ಸಂದರ್ಭದಲ್ಲಿ ಇರುವ ಕಾನೂನನ್ನು ತಕ್ಷಣವೇ ತಿದ್ದುಪಡಿಗೆ ಒಳಪಡಿಸಿ ಮಹಿಳೆ ಹಾಗೂ ವಿದ್ಯಾರ್ಥಿನಿಯರ ರಕ್ಷಣೆಗೆ ಪ್ರಬಲವಾದ ಕಾನೂನನ್ನು ರೂಪಿಸಬೇಕೆಂದು ಈ ಕೆಳಕಂಡ ಬೇಡಿಕೆಯೊಂದಿಗೆ ರಾಜ್ಯ ಸರ್ಕಾರವನ್ನು ಎಬಿವಿಪಿ ಆಗ್ರಹಿಸುತ್ತದೆ.

ಬೇಡಿಕೆಗಳು: 
1. ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ತಕ್ಷಣವೇ ಬಂಧಿಸುವ ಕಠಿಣ ನಿಲುವನ್ನು ಗೃಹ ಇಲಾಖೆ ತೆಗೆದುಕೊಳ್ಳಬೇಕು.
2 ಅತ್ಯಾಚಾರ ಪ್ರಕರಣ ದಾಖಲಾದ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಪೋಲಿಸ್ ವರಿಷ್ಠಾಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಮಹಿಳೆಯರಿಗೆ ನೈತಿಕ ಸ್ಥೈರ್ಯ ತುಂಬಬೇಕು.
3. ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಶಾಲಾ ಕಾಲೇಜುಗಳಿಗೆ ರಾಜ್ಯ ಸರ್ಕಾರ ಬಿಡುಗಡೆಗೊಳಿಸಿರುವ ಸುರಕ್ಷಾ ಮಾರ್ಗಸೂಚಿಗಳನ್ನು ತಕ್ಷಣವೇ ಜಾರಿಗೊಳಿಸಬೇಕು. ಆ ಅಕ್ರಮ ಶಾಲೆಗಳನ್ನು ಮೊದಲು ಬೀಗ ಹಾಕಿಸಲು ಸೂಚಿಸಬೇಕು.
4. ಎಲ್ಲಾ ಶಾಲಾ, ಕಾಲೇಜು ಹಾಗೂ ವಿ.ವಿ. ಕ್ಯಾಂಪಸ್‌ಗಳಲ್ಲಿ ಮಹಿಳಾ ಸುರಕ್ಷಾ ಸಮಿತಿಯನ್ನು ರಚಿಸಲು ಆದೇಶಿಸಬೇಕು.
5. ಅತ್ಯಾಚಾರ ಎಸಗಿರುವವರಿಗೆ ಕಠಿಣವಾದ ಶಿಕ್ಷೆ ನೀಡಬೇಕು.
6. ಅತ್ಯಾಚಾರ ಪ್ರಕರಣ ದಾಖಲಾದ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಪೋಲಿಸ್ ವರಿಷ್ಠಾಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಮಹಿಳೆಯರಿಗೆ ನೈತಿಕ ಸ್ಥೈರ್ಯ ತುಂಬಬೇಕು.
7 ಎಲ್ಲಾ ಶಾಲಾ, ಕಾಲೇಜು ಹಾಗೂ ವಿ.ವಿ. ಕ್ಯಾಂಪಸ್‌ಗಳಲ್ಲಿ ಮಹಿಳಾ ಸುರಕ್ಷಾ ಸಮಿತಿಯನ್ನು ರಚಿಸಲು ಆದೇಶಿಸಬೇಕು.

ಹೋರಾಟದ ನೇತೃತ್ವವನ್ನು ನಗರ ಕಾರ್ಯಕಾರಿಣಿ ಸದಸ್ಯರಾದ ಅಕ್ಷಯ ಕಮ್ಮರಡಿ ವಹಿಸಿದ್ದರು. ಹೋರಾಟದಲ್ಲಿ ಪಾರಿತೋಷ್ ಜೈನ್, ಕಾರ್ತಿಕ್, ಸಹನಾ, ಗಣೇಶ್ ಹಾಗೂ ನಗರ ಸಂಘಟನಾ ಕಾರ್ಯದರ್ಶಿ ಸುಬ್ರಹ್ಮಣಿ ಭಾಗವಹಿಸಿದ್ದರು.

Write A Comment