ಮಂಗಳೂರು,ಅ.31 : ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದ ಪಾರ್ಕಿಂಗ್ ರಸ್ತೆಯಲ್ಲಿ ಇಂಡಿಕಾ ಕಾರ್ ಒಂದಕ್ಕೆ ಬೆಂಕಿ ತಗುಲಿ ಸುಟ್ಟು ಭಸ್ಮವಾದ ಘಟನೆ ಗುರುವಾರ ಸಂಜೆ ಸಂಭವಿಸಿದೆ. ಆದರೆ ವಿಮಾನ ನಿಲ್ದಾಣದ ಸಿಬ್ಬಂದಿ ಸಕಾಲಿಕ ಕಾರ್ಯಾಚರಣೆಯಿಂದ ಬೆಂಕಿ ನಂದಿಸಿ ಮುಂದಾಗಬಹುದಾದ ಭಾರೀ ಅನಾಹುತವೊಂದನ್ನು ತಪ್ಪಿಸಿದ್ದಾರೆ.
ವೆಂಚರ್ಸ್ ಎಂಬವರಿಗೆ ಸೇರಿದ ಕೆಎ 03 ಎಂಇ 6237 ಎಂಬ ನೋಂದಣಿ ಸಂಖ್ಯೆಯನ್ನು ಹೊಂದಿರುವ ಇಂಡಿಕಾ ಕಾರನ್ನು ಚಾಲಕ ರಾಜಾ ಶೇಕ್ ಎಂಬವರು ಬಜ್ಪೆ ವಿಮಾನ ನಿಲ್ದಾಣದ ಪಾರ್ಕಿಂಗ್ ರಸ್ತೆಯಲ್ಲಿ ನಿಲ್ಲಿಸಿದ್ದರು. ಕಾರ್ ಚಾಲಕ ರಾಜಾ ಅವರು ವೆಂಚರ್ಸ್ ಅವರ ಮಗಳನ್ನು ವಿಮಾನ ನಿಲ್ದಾಣದಿಂದ ಕರೆದುಕೊಂಡು ಹೋಗುವ ಉದ್ದೇಶವನ್ನು ಹೊಂದಿದ್ದರು. ಆದರೆ ಕಾರ್‍ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿದ್ದು ಕ್ಷಣಾರ್ಧದಲ್ಲಿ ಬೆಂಕಿ ಇಡೀ ಕಾರಿಗೆ ವ್ಯಾಪಿಸಿದೆ ಎನ್ನಲಾಗಿದೆ.ತಕ್ಷಣ ವಿಮಾನ ನಿಲ್ದಾಣದ ಸಿಬ್ಬಂದಿ ಸ್ಥಳಕ್ಕಾಗ ಮಿಸಿ ನೀರು ಹಾಯಿಸುವ ಮೂಲಕ ಬೆಂಕಿ ನಂದಿಸಿದರಾದರೂ, ಕಾರ್ ಮಾತ್ರ ಸುಟ್ಟು ಕರಕಲಾಗಿದೆ.
ಬೆಂಕಿಗೆ ಕಾರಣ ತಿಳಿದುಬಂದಿಲ್ಲ. ಶಾರ್ಟ್ ಸರ್ಕ್ಯೂಟ್ ಅಥವಾ ಇಂಜಿನ್ ಬಿಸಿ ಏರಿ ಸ್ಫೋಟಗೊಂಡು ಪೆಟ್ರೋಲ್ ಮುಖಾಂತರ ಕಾರ್ ಬೆಂಕಿಗಾಹುತಿ ಯಾಗಿರಬಹುದೆಂದು ಸಂಶಯಿಸಲಾ ಗಿದೆ. ವಿಮಾನ ನಿಲ್ದಾಣದ ನಿರ್ದೇಶಕ ಜಿ.ಟಿ. ರಾಧಾಕೃಷ್ಣ ಅವರು ಬಜ್ಪೆ ಠಾಣೆಗೆ ಮಾಹಿತಿ ನೀಡಿದ್ದಾರೆ. ಬಜ್ಪೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



