ಕರಾವಳಿ

ಕರಾವಳಿ ಜಿಲ್ಲೆಗಳಿಗೆ ಮುಂದಿನ ದಿನದಲ್ಲಿ 24 ತಾಸು ವಿದ್ಯುತ್‌ : ಮಂಗಳೂರಿನಲ್ಲಿ ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಘೋಷಣೆ

Pinterest LinkedIn Tumblr

Dk_shiv_kum_4

ಮಂಗಳೂರು,ಅ.29 : ಕರಾವಳಿ ಜಿಲ್ಲೆಗಳಿಗೆ ಮುಂದಿನ ದಿನದಲ್ಲಿ 24 ” ತಾಸು ವಿದ್ಯುತ್ ನೀಡಲು ಸರಕಾರ ಬದ್ಧವಾಗಿದೆ ಎಂದು ರಾಜ್ಯ ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಮಂಗಳವಾರ ಸಂಜೆ ಕಾವೂರಿನಲ್ಲಿ ಕರ್ನಾಟಕ ವಿದ್ಯುತ್ಛಕ್ತಿ ಮಂಡಳಿಯ ಎಂಜಿನಿಯರುಗಳ ಸಂಘದ ವಲಯ ಕೇಂದ್ರ ಸ್ವರ್ಣ ಸೌಧದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಪ್ರಾಮಾಣಿಕ ಗ್ರಾಹಕರ ಸಮೂಹವೇ ಇದ್ದು, ಶೇ. 100ರಷ್ಟು ವಿದ್ಯುತ್‌ ಬಿಲ್‌ ಪಾವತಿ ಈ ಭಾಗದಲ್ಲಿ ಆಗುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬಂದಿರುವುದಾಗಿ ಹೇಳಿದರು.

ಪ್ರಸಕ್ತ ಶೇ. 10ರಷ್ಟು ವಿದ್ಯುತ್‌ ಸಮಸ್ಯೆ ರಾಜ್ಯದಲ್ಲಿ ಕಾಡುತ್ತಿದ್ದು, ಮುಂದಿನ ಒಂದೂ ಕಾಲು ವರ್ಷದಲ್ಲಿ ಇವು ನಿವಾರಣೆಯಾಗಿ ರಾಜ್ಯಾದ್ಯಂತ ಸಮರ್ಪಕ ವಿದ್ಯುತ್‌ ನೀಡುವ ಶಕ್ತಿ ಸರಕಾರದಲ್ಲಿದೆ ಎಂದರು.

Dk_shiv_kum_5

ಕೈಗಾರಿಕೆಗಳಿಗೂ ಸಮರ್ಪಕ ವಿದ್ಯುತ್‌

ಹೊಸ ಕೈಗಾರಿಕಾ ನೀತಿಯನ್ನು ಮುಖ್ಯಮಂತ್ರಿಗಳು ಘೋಷಿಸಿದ್ದು, ಈ ಹಿನ್ನೆಲೆಯಲ್ಲಿ ಕೈಗಾರಿಕಾ ಸ್ಥಾಪನೆ ಮಾಡಲು ಮುಂದೆ ಬರುವವರಿಗೆ ಇಂಧನ ಇಲಾಖೆಯು ಪ್ರಾಮಾಣಿಕ ರೀತಿಯಲ್ಲಿ ವಿದ್ಯುತ್‌ ನೀಡಲು ತಯಾರಾಗಿದೆ. 1000 ಮೆ.ವ್ಯಾ. ಸೋಲಾರ್‌ ವಿದ್ಯುತ್‌ ತಯಾರಿಸುವ ಸಂಬಂಧ ಸರಕಾರ ಈಗಾಗಲೇ ಕ್ರಮ ಕೈಗೊಂಡಿದೆ. ರೈತರಿಂದ ಆನ್‌ಲೈನ್‌ ಮೂಲಕ ಅರ್ಜಿ ಪಡೆದು, ನಿಗದಿತ ವ್ಯಾಪ್ತಿಯಲ್ಲಿ ಅವರೇ ಹಣ ಹೂಡಿಕೆ ಮಾಡಿಕೊಂಡು ಸೋಲಾರ್‌ ವಿದ್ಯುತ್‌ ತಯಾರಿಸಿ, ಸರಕಾರಕ್ಕೆ ನೀಡುವ ಗುರಿ ಹೊಂದಲಾಗಿದೆ ಎಂದರು.

ಲೈನ್‌ಮನ್‌ ಹುದ್ದೆ ಭರ್ತಿ :6,000 ಲೈನ್‌ಮನ್‌ ಹುದ್ದೆ ಭರ್ತಿಗೆ ಶೀಘ್ರದಲ್ಲಿ ಕ್ರಮ ಕೈಗೊಳ್ಳಲಾಗುವುದು. ಇದಕ್ಕಾಗಿ ವಿದ್ಯಾಭ್ಯಾಸದ ಮಿತಿಯನ್ನು ಕಡಿಮೆಗೊಳಿಸುವ ಚಿಂತನೆ ನಡೆಸಲಾಗಿದೆ ಎಂದವರು ಹೇಳಿದರು.

Dk_shiv_kum_1

ಯುಪಿಸಿ‌ಎಲ್‌-ಭರವಸೆ ಈಡೇರಿಕೆಗೆ ಸೂಚನೆ: ಯುಪಿಸಿ‌ಎಲ್‌ ಕಂಪೆನಿಯವರು ಉಡುಪಿಯಲ್ಲಿ ಈಗಾಗಲೇ ಜನರಿಗೆ ಕೊಟ್ಟಿರುವ ಮಾತು ಈಡೇರಿಸಿಲ್ಲ ಎಂಬ ದೂರುಗಳು ಕೇಳಿ ಬಂದಿವೆ. ಹೀಗಾಗಿ 15 ದಿನದೊಳಗೆ ಆ ಕಂಪೆನಿಯ ಪ್ರಮುಖರ ಜತೆಗೆ ಸಭೆ ನಡೆಸಿ, ಜನರಿಗೆ ನೀಡಿರುವ ಆಶ್ವಾಸನೆಯನ್ನು ಈಡೇರಿಸಲು ಸರಕಾರ ಬದ್ಧವಾಗಿದೆ ಎಂದವರು ಹೇಳಿದರು. ಎಂಜಿನಿಯರುಗಳ ಸಂಘದ ಅಧ್ಯಕ್ಷ ವಿ. ವೆಂಕಟಶಿವಾರೆಡ್ಡಿ ಅಧ್ಯಕ್ಷತೆ ವಹಿಸಿದ್ದರು.

ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಅರಣ್ಯ ಸಚಿವ ಬಿ. ರಮಾನಾಥ ರೈ, ಸಂಸದ ನಳಿನ್‌ ಕುಮಾರ್‌ ಕಟೀಲು, ಶಾಸಕ ಮೊದಿನ್‌ ಬಾವಾ, ಮನಪಾ ಮೇಯರ್‌ ಮಹಾಬಲ ಮಾರ್ಲ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್‌, ಕ.ವಿ.ಪ್ರ.ನಿ.ನಿ. ವ್ಯವಸ್ಥಾಪಕ ನಿರ್ದೇಶಕ ಕುಮಾರ ನಾಯಕ್‌, ನಿರ್ದೇಶಕರಾದ (ಪ್ರಸರಣ) ಎಸ್‌. ಸುಮಂತ್‌, ಪ್ರಮುಖ ಅಧಿಕಾರಿಗಳಾದ ವಿ.ಎಸ್‌. ಬಿದರಿ, ಎನ್‌. ಲಕ್ಷ್ಮಣ್‌, ರಾಮಕೃಷ್ಣ, ಎಂ. ಮಹಾದೇವ, ಎಂ. ನಾರಾಯಣ, ಎಂ. ಜಯಸೂರ್ಯ ಮುಂತಾದವರು ಉಪಸ್ಥಿತರಿದ್ದರು.

Dk_shiv_kum_2

ಸಭೆಯ ಆರಂಭದಲ್ಲಿ ಮಾತನಾಡಿದ ಸಂಸದ ನಳಿನ್‌ ಕುಮಾರ್‌ ಕಟೀಲು ಅವರು, ‘ನಿಡ್ಡೋಡಿ ಸ್ಥಾವರ ನಿರ್ಮಾಣಕ್ಕೆ ಅವಕಾಶ ನೀಡಬಾರದು. ಕೃಷಿ ಆಧಾರಿತ ಭೂಮಿಯನ್ನು ಇಂತಹ ಸ್ಥಾವರಕ್ಕೆ ಅವಕಾಶ ನೀಡಬಾರದು’ ಎಂದು ಆಗ್ರಹಿಸಿದರು. ಬಳಿಕ ಮಾತನಾಡಿದ ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಅವರು, ‘ನಿಡ್ಡೋಡಿಯಲ್ಲಿ ಮಾಡಲೇ ಬೇಕು ಎಂದು ನಾನು ವಾದ ಮಾಡುತ್ತಿಲ್ಲ. ಒತ್ತಡ ಹಾಕುತ್ತಿಲ್ಲ. ಆದರೆ, ಸಮುದ್ರ ಹತ್ತಿರ ಇರುವಂತಹ ಪ್ರದೇಶಗಳಲ್ಲಿ ಕಲ್ಲಿದ್ದಲು ಆಧಾರಿತ ವಿದ್ಯುತ್‌ ಸ್ಥಾವರ ನಿರ್ಮಾಣ ಮಾಡಿದರೆ, ಸಾಗಾಟ ವೆಚ್ಚ ಕಡಿಮೆಯಾಗಿ ವಿದ್ಯುತ್‌ ದರದಲ್ಲೂ ಕಡಿಮೆಯಾಗಲಿದೆ.

Dk_shiv_kum_3

ಹೀಗಾಗಿ ಸಮುದ್ರ ಹತ್ತಿರವಿರುವ ಈ ಭಾಗದಲ್ಲೇ ಆದರೆ ಸ್ಥಾವರ ನಿರ್ಮಾಣವಾದರೆ ಸುಲಭ ಆಗುತ್ತದೆ. ಆದರೆ, ಅದಕ್ಕೆ ವಿರೋಧ ಇರುವುದು ಗೊತ್ತಿದೆ. ಹೀಗಾಗಿ ಇಲ್ಲಿನ ಜನಪ್ರತಿನಿಧಿಗಳಲ್ಲಿ ನಾನು ಮನವಿ ಮಾಡುತ್ತಿದ್ದೇನೆ.. ಕೃಷಿ ಭೂಮಿಗೆ ತೊಂದರೆ ಆಗದಂತೆ, ಯಾರಿಗೂ ತೊಂದರೆ ಆಗದಂತೆ ರಾಜಕೀಯ, ಸೇರಿದಂತೆ ಯಾವುದೇ ಗೊಂದಲ ಆಗದ ಹಾಗೆ ಕರಾವಳಿಯ ಯಾವ ಪ್ರದೇಶದಲ್ಲಿ ಸ್ಥಾವರ ನಿರ್ಮಾಣ ಮಾಡಬೇಕು? ಎಂಬುದನ್ನು ನೀವೇ ಹೇಳಿ. ಅಲ್ಲಿ ನಾವು ಸಿದ್ಧರಿದ್ದೇವೆ’ ಎಂದು ಉತ್ತರಿಸಿದರು.

ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಎಂ. ಚಿಕ್ಕನಂಜಪ್ಪ ಸ್ವಾಗತಿಸಿದರು.

Write A Comment