ಕರಾವಳಿ

ಕಸಾಪ ಹಾಗೂ ಕಲ್ಕೂರ ಪ್ರತಿಷ್ಠಾನದಿಂದ ಕಾರಂತ ಹುಟ್ಟುಹಬ್ಬ ಪ್ರಯುಕ್ತ ಪ್ರೊ.ಅಮೃತ ಸೋಮೇಶ್ವರ ದಂಪತಿಗೆ ಅಭಿನಂದನೆ

Pinterest LinkedIn Tumblr

karantha_news_photo_1

ಮಂಗಳೂರು, ಅ. 29: ಶಿವರಾಮ ಕಾರಂತರು ವಿಶ್ವ ಮಾನವ. ‘ಆಡು ಮುಟ್ಟದ ಸೊಪ್ಪಿಲ್ಲ’ ಎಂಬ ಮಾತಿನಂತೆ ಕಾರಂತರು ಕೆಲಸ ಮಾಡದ ಕ್ಷೇತ್ರವಿಲ್ಲ ಎಂದು ಹಿರಿಯ ಸಾಹಿತಿ ಪ್ರೊ. ಅಮೃತ ಸೋಮೇಶ್ವರ ವಿಶ್ಲೇಷಿಸಿದ್ದಾರೆ.

ನಗರದ ಡಾನ್‌ಬಾಸ್ಕೋ ಸಭಾಂಗಣದಲ್ಲಿ ಇಂದು ಕಡಲ ತಡಿಯ ಭಾರ್ಗವ ಶಿವರಾಮ ಕಾರಂತರ ಹುಟ್ಟು ಹಬ್ಬದ ಪ್ರಯುಕ್ತ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಕಲ್ಕೂರ ಪ್ರತಿಷ್ಠಾನದ ವತಿಯಿಂದ ಪತ್ನಿ ನರ್ಮದಾ ಜೊತೆಯಲ್ಲಿ ತಮಗೆ ನೀಡಲಾದ ಅಭಿನಂದನೆಯನ್ನು ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.

ದಿಟ್ಟ ನಡೆ ನುಡಿಯ ಮೂಲಕ ಕೊಟ್ಟ ವಚನಕ್ಕೆ ಬದ್ಧರಾಗಿ ಅದನ್ನು ಸಂಪೂರ್ಣರಾಗಿ ಪರಿಪಾಲಿಸುತ್ತಿದ್ದ ಕಾರಂತರನ್ನು ನಾಸ್ತಿಕರೆಂದು ಹೆಚ್ಚಿನವರು ಹೇಳುತ್ತಾರೆ. ಆದರೆ, ಸರ್ವ ಮಾನ್ಯರೂ, ವಿಶ್ವತೋಮಾನ್ಯರೂ ಆಗಿದ್ದ ಅವರ ಪಾದಗಳಿಗೆ ಅದೊಂದು ಸಲ ನಮಸ್ಕರಿಸಿದ್ದೆ. ಆಗ ಅವರು ‘ದೇವರು ನಿನಗೆ ಆಶೀರ್ವದಿಸಲಿ’ ಎಂದು ಆಂಗ್ಲ ಭಾಷೆಯಲ್ಲಿ ಹರಸಿದ್ದರು. ಹಾಗಿದ್ದರೆ ಅವರನ್ನು ನಾಸ್ತಿಕರೆಂದು ಕರೆಯುವುದು ಹೇಗೆ? ಆಸ್ತಿಕತೆ ಎಂಬುದು ಪೂಜೆ, ಪುನಸ್ಕಾರಕ್ಕೆ ಮಾತ್ರ ಸೀಮಿತವಾಗಿರುವುದಲ್ಲ. ಜೀವನ ವೌಲ್ಯಗಳ ಬಗ್ಗೆ ವಿಶ್ವಾಸವುಳ್ಳವರನ್ನು ನಾಸ್ತಿಕರೆಂದು ಕರೆಯುವುದು ಸರಿಯಲ್ಲ. ಶ್ರೇಷ್ಠ ವ್ಯಕ್ತಿಗಳ ನಡೆ ನುಡಿಗಳಲ್ಲಿ ಇಂತಹ ನಡೆಯನ್ನು ಕಾಣಬಹುದು ಎಂದು ಕಾರಂತರ ಜೊತೆಗಿನ ತಮ್ಮ ಒಡನಾಟವನ್ನು ಸ್ಮರಿಸುತ್ತಾ ಪ್ರೊ. ಅಮೃತ ಸೋಮೇಶ್ವರ ಅಭಿಪ್ರಾಯಿಸಿದರು.

ಜಿ.ಕೆ. ಭಟ್ ಸೇರಾಜೆ ಅಭಿನಂದನಾ ಭಾಷಣಗೈದರು. ಕಾರ್ಯಕ್ರಮದಲ್ಲಿ ಪಾರಂಪರಿಕ ಯಕ್ಷಗಾನ ಮೇರು ಕಲಾವಿದ, ಹಿರಿಯ ಕಟ್ಟು ಹಾಸ್ಯ ಕಲಾವಿದ ಪೆರೋಡಿ ನಾರಾಯಣ ಭಟ್‌ರನ್ನು ಅಭಿನಂದಿಸಲಾಯಿತು. ಇದೇ ವೇಳೆ ತೆಂಕುತಿಟ್ಟು ಯಕ್ಷಗಾನದ ಬಾಲ ಪ್ರತಿಭೆ ರಂಜಿತಾ ಎಲ್ಲೂರು, ಭರತನಾಟ್ಯ ಕಲಾವಿದೆಯರಾದ ಅನನ್ಯ ಎಸ್. ರಾವ್ ಹಾಗೂ ಅಪೂರ್ವ ಎಸ್. ರಾವ್, ಮೆಂಡೊಲಿನ್ ವಾದಕ ಸದ್ಗುಣ ಐತಾಳ್, ಕರಾಟೆ ಸಾಧಕ ಕಾರ್ತಿಕ್ ಎಸ್. ಕಟೀಲ್‌ರನ್ನು ಗೌರವಿಸಲಾಯಿತು.

ಇದೇ ವೇಳೆ ಕಲಾವಿದ ಕುಂಬಳೆ ಸುಂದರ ರಾವ್ ಅವರು ಸಗರಾಶ್ವಮೇಧ ಮತ್ತು ಗಂಗಾವತರಣ ಕೃತಿಗಳನ್ನು ಬಿಡುಗಡೆಗೊಳಿಸಿದರು. ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಉದ್ಘಾಟನಾ ಸಮಾರಂಭಕ್ಕೆ ಮೊದಲು ಬಾಲ ಕಲಾವಿದ ಸದ್ಗುಣ ಐತಾಳ್ ಹಾಗೂ ಬಳಗದಿಂದ ಮೆಂಡೊಲಿನ್ ವಾದನ ನಡೆಯಿತು.

Write A Comment