ಮಂಗಳೂರು, ಅ.27: ನ್ಯಾಯಾಧೀಶರ ನಕಲಿ ಸಹಿ ಹಾಗೂ ನಕಲಿ ಸೀಲುಗಳನ್ನು ಬಳಸಿ ನ್ಯಾಯಾಲಯಕ್ಕೆ ವಂಚಿಸಿದ ಆರೋಪ ಎದುರಿಸುತ್ತಿರುವ ಆರೋಪಿ ವಕೀಲ ಎ.ಸಿ. ಜಯರಾಜ್ ಪ್ರಕರಣ ನಡೆದು 3 ತಿಂಗಳಾದರೂ ನಾಪತ್ತೆಯಾಗಿದ್ದು, ಇದೀಗ ತಲೆಮರೆಸಿಕೊಂಡಿರುವ ನ್ಯಾಯವಾದಿ ಎ.ಸಿ. ಜಯರಾಜ್ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.
ಮಂಗಳೂರು ಜಿಲ್ಲಾ ಸೆಷನ್ಸ್ ಮತ್ತು ಸಿಜೆಎಂ ನ್ಯಾಯಾಲಯದ ನ್ಯಾಯಾಧೀಶರ ನಕಲಿ ಸಹಿ, ನ್ಯಾಯಾಲಯದ ನಕಲಿ ಸೀಲು ಹಾಕಿ ಪೋರ್ಜರಿ ಪತ್ರ ತಯಾರಿಸಿ ವಿಮಾ ಗ್ರಾಹಕರ ನಿಶ್ಚಿತ ಠೇವಣಿ ಹಣವನ್ನು ಅವಧಿ ಪೂರ್ವವಾಗಿ ಡ್ರಾ ಮಾಡಿ ನ್ಯಾಯಾಲಯಕ್ಕೆ, ಬ್ಯಾಂಕಿಗೆ ಮತ್ತು ಸಮಾಜಕ್ಕೆ ವಂಚನೆ ಎಸ ಗಿದ ಆರೋಪ ಎ.ಸಿ. ಜಯರಾಜ್ ಮೇಲಿದೆ. ಆರೋಪಿಯ ವಿರುದ್ಧ ಬಂದರು ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಪ್ರಕರಣದ ಬಳಿಕ ಜಯರಾಜ್ ತಲೆ ಮರೆಸಿಕೊಂಡಿದ್ದು, ಇದೀಗ ಪೊಲೀಸರು ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ.
ಜಾಮೀನು ತಿರಸ್ಕೃತ :
ಪ್ರಕರಣಕ್ಕೆ ಸಂಬಂಧಿಸಿ ವಕೀಲ ಎ.ಸಿ.ಜಯರಾಜ್ ಹೈಕೋರ್ಟಿನಲ್ಲಿ ಸಲ್ಲಿಸಿದ ಜಾಮೀನು ಅರ್ಜಿ ತಿರಸ್ಕೃತವಾಗಿದ್ದು, ಅವರ ಬಂಧನಕ್ಕಾಗಿ ಜಾಮೀನು ರಹಿತ ವಾರೆಂಟ್ ಹೊರಡಿಸಲಾಗಿದೆ. ಆರೋಪಿ ವಕೀಲರ ಪತ್ತೆಗಾಗಿ ಅವರ ಮನೆ, ಕಚೇರಿ ಮತ್ತು ಅವರಿಗೆ ಸಂಪರ್ಕವಿರುವ ಎಲ್ಲಾ ಕಡೆಗಳಲ್ಲಿ ಮಾತ್ರವಲ್ಲದೇ ಬೆಳ್ತಂಗಡಿ ತಾಲೂಕಿನ ಶಿಭಾಜೆಯಲ್ಲಿರುವ ಅವರ ಮನೆಯಲ್ಲಿ ಕೂಡ ಶೋಧ ನಡೆಸಲಾಗಿದೆ. ಸಮೀಪ ಸಮ್ಮಂದಿಗಳ ಬಳಿಗೆ ತೆರಳಿ ವಿಚಾರಿಸಲಾಗಿದೆ. ಪ್ರಸ್ತುತ ಅವರ ಪತ್ತೆಗಾಗಿ ಪೊಲೀಸರು ಮಾತ್ರವಲ್ಲದೇ ಸಾರ್ವಜನಿಕರು ಕೂಡ ಶ್ರಮಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಎ.ಸಿ. ಜಯರಾಜ್ ಪತ್ತೆಯಾದಲ್ಲಿ ಬಂದರು ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 0824-2220516, ಪೊಲೀಸ್ ನಿರೀಕ್ಷಕರ ಮೊಬೈಲ್ ಸಂಖ್ಯೆ 9480805338, ಉಪ ನಿರೀಕ್ಷಕರ ಸಂಖ್ಯೆ 9480805345 ಸಂಖ್ಯೆಗೆ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.
