ಕರಾವಳಿ

ತೆಕ್ಕಟ್ಟೆಯಲ್ಲಿ ಜನಮನಸೂರೆಗೊಂಡ ‘ಮಾಯಾಮೃಗ’ ಯಕ್ಷಗಾನ ಪ್ರದರ್ಶನ

Pinterest LinkedIn Tumblr

ಕುಂದಾಪುರ: ಯಶಸ್ವಿ ಕಲಾವೃಂದ ಸಾಂಸ್ಕೃತಿಕ ಪರ್ವದ ಸರಣಿ ಕಾರ್ಯಕ್ರಮದ ಅಡಿಯಲ್ಲಿ ಬೆಂಗಳೂರಿನ ಯಕ್ಷಾಂಗಣ ಟ್ರಸ್ಟ್‌ನ ಮಾಯಾಮೃಗ ಯಕ್ಷಗಾನದ ಉದ್ಘಾಟನೆಯನ್ನು ಭಾನುವಾರ ತೆಕ್ಕಟ್ಟೆಯ ಹಯಗ್ರೀವ ಕಲಾ ಮಂಟಪದಲ್ಲಿ ಈಟಿವಿ ಕನ್ನಡ ವಾಹಿನಿಯ ಯಶೋದೆ ಧಾರವಾಹಿಯ ಯಶೋದೆ ಪಾತ್ರದ ನಟಿ ನೀತಾ ಅಶೋಕ್‌ರವರು ಪ್ರಸಂಗದ ರಾಮ, ಲಕ್ಷ್ಮಣ ವೇಷಕ್ಕೆ ತುರಾಯಿ ಸಿಕ್ಕಿಸುವ ಮೂಲಕ ಉದ್ಘಾಟನೆ ಮಾಡಿದರು.

ಬಳಿಕ ಮಾತನಾಡಿದ ಅವರು, ಯಕ್ಷಗಾನ ಒಂದು ಸಾಂಪ್ರದಾಯಿಕ ರಂಗಭೂಮಿ. ಇಲ್ಲಿ ಹೆಜ್ಜೆಗಾರಿಕೆ, ವಸ್ತ್ರಾಲಂಕಾರ, ಪಾತ್ರ ನಿರ್ವಹಣೆ ಎಲ್ಲವೂ ಹಿರಿಯರಿಂದ ಕಿರಿಯರಿಗೆ ಅನುಕರಣೆ ಮೂಲಕ ಬಂದಿರುವಂಥದ್ದಾಗಿದೆ ಎಂದು ತಿಳಿದುಕೊಂಡಿರುವೆ. ಯಕ್ಷಕಲೆಯು ಉಳಿದು ಬೆಳೆಯುವಂತಾಗಬೇಕು ಕರಾವಳಿಕಲೆ ಶ್ರೀಮಂತವಾಗಿ ಬೆಳೆಯಬೇಕೆಂದು ಹೇಳಿದರು.

Thekkatte_Mayamraga_Yakashagana (1) Thekkatte_Mayamraga_Yakashagana (2) Thekkatte_Mayamraga_Yakashagana (3) Thekkatte_Mayamraga_Yakashagana (4) Thekkatte_Mayamraga_Yakashagana (5) Thekkatte_Mayamraga_Yakashagana (6)

 

ಕಾರ್ಯಕ್ರಮದ ಅಧ್ಯಕ್ಷತೆ ಮತ್ತು ಯಶಸ್ವಿ ಕಲಾವೃಂದ ಕಛೇರಿ ಉದ್ಘಾಟನೆ ಮಾಡಿದ ಉದ್ಯಮಿ ಆನಂದ ಸಿ. ಕುಂದರ್‌ರವರು ಕಲಾವೃಂದದ ಯಕ್ಷಸೇವೆ ನಿಜಕ್ಕೂ ಅಭಿನಂದನೆ ಅರ್ಹವಾಗಿದೆ. ಯಕ್ಷಗಾನವೆಂಬುದು ಒಂದು ಅದ್ಘುತ ಸೃಷ್ಟಿ ಅದು ನಮಗೆ ಹಿರಿಯರು ಮಾಡಿಟ್ಟ ಸೊತ್ತು ಅದನ್ನು ಸುಧಾರಣೆಯ ಹೆಸರಿನಲ್ಲಿ ಹಾಳು ಮಾಡುವ ಹಕ್ಕು ನಮಗಿಲ್ಲ, ಇಂದು ಹೊಸ ಪ್ರಸಂಗಗಳ ಅಬ್ಬರದಲ್ಲಿ ರಾಮಾಯಣ, ಮಹಾಭಾರತದ ಪ್ರಸಂಗಗಳು ಮೂಲೆ ಗುಂಪಾಗಿದೆ. ಈ ನಿಟ್ಟಿನಲ್ಲಿ ಬೆಂಗಳೂರಿನ ಯಕ್ಷಾಂಗಣ ಟ್ರಸ್ಟ್‌ನವರು ರಾಮಾಯಣದ ಮಾಯಾಮೃಗ (ಪಂಚವಟಿ) ಪ್ರಸಂಗವನ್ನು ಆಯ್ಕೆ ಮಾಡಿಕೊಂಡು ಇಂದು ಪ್ರದರ್ಶಿಸುತ್ತಿರುವುದು ಸಂತೋಷದ ವಿಚಾರ ಎಂದರು.

ವೇದಿಕೆಯಲ್ಲಿ ರೋಟರಿ ಅಧ್ಯಕ್ಷರಾದ ಶಂಕರ ದೇವಾಡಿಗ, ಕಲಾವೃಂದದ ಅಧ್ಯಕ್ಷರಾದ ಮಲ್ಯಾಡಿ ಸೀತಾರಾಮ ಶೆಟ್ಟಿ ಮತ್ತು ಭಾಗವತ ಲಂಬೋದರ ಹೆಗಡೆಯವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಮಟ್ಟದ ಪವರ್ ಲಿಫ್ಟಿಂಗ್ ಕ್ರೀಡಾಪಟು ಅಶೋಕ ಜಿ.ವಿಯವರಿಗೆ ಸಾಧಕ ಸನ್ಮಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಎಂ. ಸೀತಾರಾಮ ಶೆಟ್ಟಿಯವರು ಸ್ವಾಗತಿಸಿದರು. ಕೊಕೂರು ಸೀತಾರಾಮ ಶೆಟ್ಟಿಯವರು ವಂದಿಸಿ, ಭಾಗವಹಿಸಿದ ಗಣ್ಯರಿಗೆ ಸ್ಮರಣಿಕೆ ನೀಡಿದರು. ಕಾರ್ಯಕ್ರಮವನ್ನು  ಹೆರಿಯ ಮಾಸ್ಟರ್ ನಿರೂಪಿಸಿದರು.

ನಂತರ ಯಕ್ಷಾಂಗಣ ಟ್ರಸ್ಟ್‌ನ ಸಂಯೋಜನೆಯ ಮಾಯಾಮೃಗ ಯಕ್ಷಗಾನದಲ್ಲಿ ಭಾಗವತರಾಗಿ ಲಂಬೋದರ ಹೆಗಡೆ, ದೇವರಾಜ್, ಮದ್ದಲೆಯಲ್ಲಿ  ಗಣಪತಿ ಭಟ್, ಚೆಂಡೆಯಲ್ಲಿ ಮಾಧವ ಮತ್ತು ಮಂಜುನಾಥ ನಾವುಡ ಹಾಗೆ ಮುಮ್ಮೇಳದಲ್ಲು ರಾಮನಾಗಿ ಉಪನ್ಯಾಸಕ ಸುಜಯೀಂದ್ರ ಹಂದೆ, ರಾವಣನಾಗಿ  ತಮ್ಮಣ್ಣ ಗಾಂವ್ಕರ್, ಶೂರ್ಪನಖಿಯಾಗಿ ಗಣೇಶ ಉಪ್ಪುಂದ,  ಮಾಯಾ ಶೂರ್ಪನಖಿಯಾಗಿ ಪ್ರದೀಪ್ ಸಾಮುಗ, ಸೀತೆಯಾಗಿ ಕಡ್ಲೆ ಗಣಪತಿ ಹೆಗಡೆ, ಲಕ್ಷ್ಮಣನಾಗಿ ನವೀನ್, ಮಾಯಾ ಜಿಂಕೆಯಾಗಿ ಉದಯ ಬೋವಿ, ಸನ್ಯಾಸಿ ರಾವಣನಾಗಿ ವಿಶ್ವನಾಥ ಶೆಟ್ಟಿ, ಜಟಾಯು ಪಾತ್ರದಲ್ಲಿ ನರಸಿಂಹ ತುಂಗ, ಪ್ರಹಸ್ತನಾಗಿ ರಮೇಶ್ ಹಾಗೂ ಬಾಲಗೋಪಾಲನಾಗಿ ನಿಶಾ ಮತ್ತುಪೂಜಾ ಭಾಗವಹಿಸಿದರು.

ಕಾರ್ಯಕ್ರಮಕ್ಕೆ ರೋಟರಿ ಕ್ಲಬ್‌ನವರು  ಸಹಕಾರ ನೀಡಿದರು.

Write A Comment