ಕರಾವಳಿ

ಅ.29 : ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಹಾಗೂ ಸರಕಾರಿ ಆಸ್ಪತ್ರೆ ಬಲಪಡಿಸಲು ಒತ್ತಾಯಿಸಿ ಡಿವೈಎಫ್‍ಐ ಕಾಲ್ನಡಿಗೆ ಜಾಥಾ

Pinterest LinkedIn Tumblr

Dyfi_Munir_Press_1

ಮಂಗಳೂರು: ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸಲು ಒತ್ತಾಯಿಸಿ, ಸರಕಾರಿ ಆಸ್ಪತ್ರೆಗಳನ್ನು ಬಲಪಡಿಸಲು ಆಗ್ರಹಿಸಿ ಹಾಗೂ ಸರಕಾರಿ ಮೆಡಿಕಲ್ ಕಾಲೇಜ್ ಸ್ಥಾಪನೆ ಇತ್ಯಾದಿ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಕ್ಟೋಬರ್ 29ರಂದು ಬೆಳಿಗ್ಗೆ 11 ಗಂಟೆಗೆ ನಗರದ ಯುನಿಟಿ ಆಸ್ಪತ್ರೆಯಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಬೃಹತ್ ಕಾಲ್ನಡಿಗೆ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ ಎಂದು ಡಿವೈಎಫ್‍ಐ ಸಂಘಟನೆಯ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದರು.

ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ಅವರು, ಇತ್ತೀಚಿನ ಸರಕಾರದ ಮುಕ್ತ ಮಾರುಕಟ್ಟೆ ನೀತಿಗಳಿಂದಾಗಿ ಎಲ್ಲವೂ ವ್ಯಾಪಾರೀಕರಣ ಗೊಂಡಿದೆ, ಸೇವಾ ಕ್ಷೇತ್ರಗಳಾದ ಸಾರಿಗೆ, ನೀರು, ಶಿಕ್ಷಣ, ಆರೋಗ್ಯ ಕ್ಷೇತ್ರಗಳೂ ಇದರಿಂದ ಹೊರತಾಗಿಲ್ಲ. ಸರಕಾರದ ಇಂತಹ ಖಾಸಗಿ ವಲಯದ ಪರವಾದ ಧೋರಣೆಯಿಂದಾಗಿ ಇಂದು ಸರಕಾರಿ ಆಸ್ಪತ್ರೆಗಳು ಪಾಲು ಬೀಳತೊಡಗಿದೆ, ಖಾಸಗಿ ಆಸ್ಪತ್ರೆಗಳು ಏಕಸ್ವಾಮ್ಯವನ್ನು ಸಾಧಿಸುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಸಾರ್ವಜನಿಕ ಆರೋಗ್ಯ ಸೇವೆ ಸಂಪೂರ್ಣವಾಗಿ ಕುಸಿದಿದೆ. ಜನಸಂಖ್ಯೆಯ ಆಧಾರದಲ್ಲಿ ಕನಿಷ್ಟ ನೂರು ಇರಬೇಕಾದ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಕೇವಲ ೭೦ ಇದೆ, ಮೂವತ್ತು ಇರಬೇಕಾದ ಸಮುದಾಯ ಆಸ್ಪತ್ರೆಗಳು ಕೇವಲ ಎಂಟು ಇದೆ. ತಾಲೂಕು ಆಸ್ಪತ್ರೆಗಳು ನಾಲ್ಕು ಇದೆ, ಜಿಲ್ಲಾಸ್ಪತ್ರೆ ಎರಡು ಇದೆ. ಇರುವ ಸಾರ್ವಜನಿಕ ಆಸ್ಪತ್ರಗಳೂ ಸರಿಯಾದ ವೈದ್ಯರಿಲ್ಲದೆ, ಸಿಬ್ಬಂದಿ, ಔಷಧಿ, ಯಂತ್ರೋಪಕರಣಗಳಿಲ್ಲದೆ ಬಳಲುತ್ತಿದೆ. ಇರುವ ಸರಕಾರಿ ವೈದ್ಯಕೀಯ ಕೇಂದ್ರಗಳಿಗೆ ಸರಕಾರ ಕೇವಲ ನೂರ ಅರವತ್ತೊಂದು ವೈದ್ಯರನ್ನಷ್ಟೇ ಮಂಜೂರು ಮಾಡಿದೆ. ಅದರಲ್ಲಿ ನೂರು ಮಂದಿಯನ್ನಷ್ಟೇ ನೇಮಕಾತಿ ಮಾಡಿದೆ ಎಂದು ಆರೋಪಗಳ ಸುರಿಮಳೆಗೈದರು.

Dyfi_Munir_Press_2

ಜಿಲ್ಲೆಯ ವೆನ್ಲಾಕ್, ಲೇಡಿಗೋಷನ್ ಸೇರಿದಂತೆ ಪ್ರಾಥಮಿಕ ಆರೋಗ್ಯ ಕೇಂದ್ರದವರೆಗೆ ಸರಕಾರಿ ವೈದ್ಯಕೀಯ ಕೇಂದ್ರಗಳು ಜನತೆಯ ಉಪಯೋಗಕ್ಕಿಲ್ಲದಾಗಿದೆ. ವೈದ್ಯರು, ವೈದ್ಯಕೀಯ ಸಿಬ್ಬಂದಿಗಳು, ಜೀವರಕ್ಷಕ ಔಷಧಿಗಳು ಸಿಗದೇ ಬಡಜನತೆ ಸರಕಾರಿ ಆಸ್ಪತ್ರೆಗಳಿಂದ ಅನಿವಾರ್ಯವಾಗಿ ದೂರ ಸರಿಯುತ್ತಿದ್ದಾರೆ. ವೆನ್ಲಾಕ್‌ನಂತಹ ಸುತ್ತಮುತ್ತಲಿನ ಆರೇಳು ಜಿಲ್ಲೆಗಳ ಜನತೆಯ ಪಾಲಿನ ಏಕೈಕ ದೊಡ್ಡಾಸ್ಪತ್ರೆ ರೋಗಿಗಳ ಪಾಲಿನ ನರಕವಾಗಿದೆ. ಇಲ್ಲಿ ಐಸಿಯು ವಿಭಾಗದಲ್ಲಿ ಕೇವಲ ಎಂಟು ಬೆಡ್‌ಗಳು ಮಾತ್ರ ಇದ್ದು, ಗಂಭೀರ ಸ್ಥಿತಿಯಲ್ಲಿರುವ ರೋಗಿಗಳು ಜನರಲ್ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುವ ಅಸಹಾಯಕ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೊಂದೆಡೆ ವೆನ್ಲಾಕ್ ಸೇರಿದಂತೆ ಹೆಚ್ಚಿನ ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಬಿಟ್ಟು ಕೊಡುತ್ತಿರುವುದರಿಂದ ಬಡರೋಗಿಗಳು ಖಾಸಗಿ ಮೆಡಿಕಲ್ ಕಾಲೇಜುಗಳ ಶ್ರೀಮಂತ ವಿದ್ಯಾರ್ಥಿಗಳ ಕಲಿಕೆಯ, ಪ್ರಯೋಗದ ವಸ್ತುಗಳಾಗಿದ್ದಾರೆ.

ಸರಕಾರಿ ಆಸ್ಪತ್ರೆಗಳ ಇಂತಹ ದಯನೀಯ ಪರಿಸ್ಥಿತಿಯನ್ನು ಖಾಸಗಿ ಆಸ್ಪತ್ರೆಗಳು, ವೈದ್ಯರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇಂದು ಮಂಗಳೂರು ಖಾಸಗಿ ವೈದ್ಯರು, ಆಸ್ಪತ್ರೆಗಳ ಹಬ್ ಆಗಿ ಪರಿವರ್ತನೆಗೊಂಡಿದೆ. ನೆರೆ ಜಿಲ್ಲೆಗಳು ಮಾತ್ರ ಅಲ್ಲದೆ ನೆರೆ ರಾಜ್ಯದ ರೋಗಿಗಳು ಉತ್ತಮ ವೈದ್ಯಕೀಯ ಸೇವೆಯನ್ನು ಹುಡುಕಿಕೊಂಡು ಮಂಗಳೂರಿಗೆ ಬರುತ್ತಿದ್ದಾರೆ. ಆದರೆ ಇಲ್ಲಿನ ಹೆಚ್ಚಿನ ಖಾಸಗಿ ವೈದ್ಯರು ರೋಗಿಗಳಲ್ಲಿ ದುಬಾರಿ ಶುಲ್ಕ ವಸೂಲಿ ಮಾಡುವುದು, ಅನಗತ್ಯ ಪರೀಕ್ಷೆಗಳನ್ನು ಮಾಡಿಸುವುದು ಕಂಡು ಬರುತ್ತಿದೆ. ಖಾಸಗಿ ಆಸ್ಪತ್ರೆಗಳಂತೂ ನಗರದಲ್ಲಿ ಓಣಿಗೊಂದರಂತೆ ಸ್ಥಾಪನೆಗೊಂಡಿದೆ, ಸ್ವಂತ ಮೆಡಿಕಲ್, ನರ್ಸಿಂಗ್ ಕಾಲೇಜುಗಳನ್ನು ಅರ್ಹತೆ ಇಲ್ಲದಿದ್ದರೂ ನಡೆಸುತ್ತಿವೆ. ಖಾಸಗಿ ಆಸ್ಪತ್ರೆಗಳು ಯಾವುದೇ ನಿಯಂತ್ರಣವಿಲ್ಲದೆ ವೈದ್ಯಕೀಯ ಸೇವೆಗಳಿಗೆ ದರ ವಿಧಿಸುತ್ತಿವೆ. ಸರಕಾರದ ನಿಯಮದಂತೆ ಪಾಲಿಸಬೇಕಾದ ಯಾವ ನಿಯಮವನ್ನು ಖಾಸಗಿ ವೈದ್ಯಕೀಯ ರಂಗ ಮಂಗಳೂರಿನಲ್ಲಿ ಪಾಲಿಸುತ್ತಿಲ್ಲ. ನಿಯಮದಂತೆ ವೈದ್ಯರು ಮತ್ತು ಆಸ್ಪತ್ರೆಗಳು ತಾವು ಪ್ರತಿಯೊಂದು ಸೇವೆಗೂ ವಿಧಿಸುವ ದರಗಳ ಪಟ್ಟಿಯನ್ನು ಎಲ್ಲರಿಗೂ ಕಾಣುವ ಸ್ಥಳದಲ್ಲಿ ಪ್ರದರ್ಶಿಸಬೇಕು ಮತ್ತು ರೋಗಿಯ ಕಡೆಯವರಿಗೆ ದರ ಪಟ್ಟಿಯನ್ನು ನೀಡಬೇಕು ಎಂಬ ನಿಯಮ ಮಂಗಳೂರಿನಲ್ಲಿ ಯಾವುದೇ ಆಸ್ಪತ್ರೆಗಳು ಪಾಲಿಸುತ್ತಿಲ್ಲ ಎಂದು ಮುನೀರ್ ವಿವರಿಸಿದರು.

ಇನ್ನು ದುಬಾರಿ ಬಿಲ್ ಪಾವತಿಸಲು ಸಾಧ್ಯವಾಗದವರನ್ನು ಅಕ್ರಮ ಬಂಧನದಲ್ಲಿಡುವುದು, ಬಿಲ್ ಪಾವತಿಸದೆ ರೋಗಿಯ ಶವ ಬಿಟ್ಟು ಕೊಡದಿರುವುದು ಮುಂತಾದ ನಿಯಮ ಬಾಹಿರ, ಅಮಾನವೀಯ ಘಟನೆಗಳು ದಿನಕ್ಕೊಂದರಂತೆ ಮಂಗಳೂರಿನಲ್ಲಿ ವರದಿಯಾಗುತ್ತಿದೆ. ಇನ್ನು ಸೇವಾ ಕ್ಷೇತ್ರವಾದ ಆಸ್ಪತ್ರೆಗಳು ನಿಯಂತ್ರಿತ ಮತ್ತು ಸಮಾನ ಸೇವೆಗೆ ಸಮಾನ ದರ ಹೊಂದುವುದು ಸಹಜ ನ್ಯಾಯ, ಆದರೆ ಮಂಗಳೂರಿನ ಖಾಸಗಿ ಆಸ್ಪತ್ರೆಗಳು ಲಂಗುಲಗಾಮಿಲ್ಲದೆ ತಮಗೆ ತೋಚಿದಂತೆ ದರಗಳನ್ನು ವಿಧಿಸುತ್ತದೆ. ಮತ್ತು ಆಸ್ಪತ್ರೆಯಿಂದ ಆಸ್ಪತ್ರೆಗೆ ದರಗಳು ಬೇರೆ ಬೇರೆಯಾಗಿವೆ. ಇಂತಹ ಲೋಪಗಳನ್ನು ಸರಿಪಡಿಸಲು ಸರಕಾರ, ಜಿಲ್ಲಾಡಳಿತ ಇಷ್ಟರವರೆಗೆ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಇದರಿಂದಾಗಿ ಬಡವರು ಮಾತ್ರವಲ್ಲ ಮಧ್ಯಮ ವರ್ಗದವರೂ ಆರೋಗ್ಯದ ಸಮಸ್ಯೆ ಎದುರಾದರೆ ಅಸಹಾಯಕರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಡಿವೈಎಫ್‍ಐ ಸಂಘಟನೆ ಈ ಹಿಂದಿನಿಂದಲೂ ಈ ಸಮಸ್ಯೆಯ ಬಗ್ಗೆ ಹೋರಾಡುತ್ತಿದ್ದು, ಇದೀಗ ಇಂತಹ ಗಂಭೀರವಾದ ಸಮಸ್ಯೆಗಳನ್ನು ಡಿವೈ‌ಎಫ್‌ಐ ದ.ಕ. ಜಿಲ್ಲಾ ಸಮಿತಿ ಗುರುತಿಸಿದ್ದು, ಸರಕಾರಿ ಆಸ್ಪತ್ರೆಗಳನ್ನು ಬಲಪಡಿಸಿ, ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸಿ ಎಂಬ ಘೋಷಣೆಯ ಅಡಿಯಲ್ಲಿ ತೀವ್ರ ರೀತಿಯ ಪ್ರತಿಭಟನೆಗೆ ಮುಂದಾಗಿದೆ.

ಈ ಎಲ್ಲಾ ಬೇಡಿಕೆಗಳ ಈಡೇರಿಕೆಗಾಗಿ ಡಿವೈ‌ಎಫ್‌ಐ ಆರಂಭಿಸುತ್ತಿರುವ ನಿರಂತರ ಚಳುವಳಿಯ ಭಾಗವಾಗಿ ಅಕ್ಟೋಬರ್ ೨೯ರಂದು ಬೆಳಿಗ್ಗೆ ೧೧ಕ್ಕೆ ನಗರದ ಪ್ರಮುಖ ಖಾಸಗಿ ಆಸ್ಪತ್ರೆ ಯುನಿಟಿಯ ಮುಂಭಾಗದಿಂದ ಜಿಲ್ಲಾಧಿಕಾರಿ ಕಛೇರಿಯ ವರೆಗೆ ಕಾಲ್ನಡಿಗೆ ಜಾಥವನ್ನು ಹಮ್ಮಿಕೊಂಡಿದೆ. ಇದರಲ್ಲಿ ಜನರು ಸಂಪೂರ್ಣ ಒಮ್ಮತದಿಂದ ಪಾಲ್ಗೊಳ್ಳಬೇಕು ಎಂದು ಮುನೀರ್ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಡಿವೈಎಫ್‍ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಜಿಲ್ಲಾಧ್ಯಕ್ಷ ದಯಾನಂದ ಶೆಟ್ಟಿ ಉಪಸ್ಥಿತರಿದ್ದರು.

Write A Comment