ಕರಾವಳಿ

ಹಳ್ಳಿಹೊಳೆಯಲ್ಲಿ ಮನೆಗೆ ನುಗ್ಗಿದ ದುಷ್ಕರ್ಮಿಗಳಿಂದ ದರೋಡೆ 40 ಸಾವಿರ ನಗದು 3 ಫವನ್ ಚಿನ್ನ ಲೂಟಿ | ಸ್ಥಳೀಯರ ಕೈವಾಡ ಶಂಕೆ

Pinterest LinkedIn Tumblr

hallihole_Home_robbary

ಕುಂದಾಪುರ: ಮನೆಯೊಂದಕ್ಕೆ ನುಗ್ಗಿ ಮನೆ ಮಂದಿಯನ್ನು ಬೆದರಿಸಿ ಲಕ್ಷಾಂತರ ರೂಪಾಯಿ ನಗ ನಗದು ದೋಚಿದ ಆತಂಕಕಾರಿ ಘಟನೆ ನಕ್ಸಲ್ ಪೀಡಿತ ಪ್ರದೇಶವಾದ ಹಳ್ಳಿಹೊಳೆಯಲ್ಲಿ ಗುರುವಾರ ರಾತ್ರಿ ನಡೆದಿದೆ.

ಹಳ್ಳಿಹೊಳೆಯ ಇರಗಿ ಶಾಲೆ ಸಮೀಪದ ನಿವಾಸಿ ರಾಘವೇಂದ್ರ ರಾವ್ (57)ಎನ್ನುವವರ ನಿವಾಸಕ್ಕೆ ನುಗ್ಗಿದ 7-8 ಮಂದಿಯಿದ್ದ ತಂಡವೊಂದು ರಾಘವೇಂದ್ರ ರಾವ್ ಹಾಗೂ ಅವರ ಮಗ ಕಿರಣರಾವ್ ಎನ್ನುವವರನ್ನು ಕೋಣೆಯೊಂದರಲ್ಲಿ ಕೂಡಿಹಾಕಿ ರಾಘವೇಂದ್ರ ರಾವ್ ಪತ್ನಿ ಪ್ರಭಾವತಿಯವರಿಗೆ ಕೊಲ್ಲುವುದಾಗಿ ಸಣ್ಣ ಚಾಕು ತೋರಿಸಿ ಬೆದರಿಸಿ ಹಣ ಹಾಗೂ ಚಿನ್ನದ ಸರವನ್ನು ಲೂಟಿಗೈದು ಪರಾರಿಯಾಗಿದ್ದಾರೆ.

ಈ ವೇಳೆ ೩ ಫವನ್ ತೂಕದ ಚಿನ್ನದ ಸರ ಹಾಗೂ 40 ಸಾವಿರ ನಗದು ದೋಚಿದ್ದಾರೆ ಒಟ್ಟು ಸುಮಾರು 1  ಲಕ್ಷ ಮೌಲ್ಯ ದೋಚಲಾಗಿದೆ ಎಂದು ತಿಳಿದುಬಂದಿದೆ.
ರಾಘವೇಂದ್ರ ರಾವ್ ಅಡಿಕೆ ಹಾಗೂ ತೆಂಗಿನ ತೋಟ ಹೊಂದಿದ್ದು, ಗುರುವಾರ ಭಾರೀ ಮಳೆ ಹಾಗೂ ಸಿಡಿಲಿನ ಆರ್ಭಟದಿಂದಾಗಿ ಪತ್ನಿ ಹಾಗೂ ಪುತ್ರನೊಂದಿಗೆ ಮನೆಯಲ್ಲಿಯೇ ಇದ್ದರು. ಇವರ ಮನೆ ಇರುವ ಪ್ರದೇಶ ನಿರ್ಜನವಾಗಿದ್ದು, ಮಳೆಯಿದ್ದ ಕಾರಣ ದೂರವಾಣಿ ಸಂಪರ್ಕವೂ ಸರಿಯಾಗಿರಲಿಲ್ಲ ಎನ್ನಲಾಗಿದೆ. ಒಮ್ಮೆಲೆ ಇವರು ನುಗ್ಗಿದಾಗ ದುಡಾಟ ತಳ್ಳಾಟಕ್ಕೆ ರಾಘವೇಂದ್ರ ರಾವ್ ಕೊಂಚ ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ದುಷ್ಕರ್ಮಿಗಳು ಸ್ಥಳೀಯ ಕುಂದಾಪುರ ಕನ್ನಡ ಭಾಷೆಯನ್ನು ಆಡುತ್ತಿದ್ದರು ಎಂದು ತಿಳಿದುಬಂದಿದೆ. ರಾಘವೇಂದ್ರ ರಾವ್ ಬಗ್ಗೆ ಪರಿಚಯವಿರುವಂತಯೇ ದುಷ್ಕರ್ಮಿಗಳು ಮಾತನಾಡುತ್ತಿದ್ದು ಇವರಲ್ಲಿ ಕೆಲವರು ಸ್ಥಳೀಯರು ಎಂದು ಅಂದಾಜಿಸಲಾಗಿದೆ.

ಘಟನಾ ಸ್ಥಳಕ್ಕೆ ತಡರಾತ್ರಿಯೇ ಪೊಲೀಸ್ ಅಧಿಕಾರಿಗಳು, ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶುಕ್ರವಾರ ಬೆಳಿಗ್ಗೆ ಕುಂದಾಪುರ ಡಿವೈ‌ಎಸ್ಪಿ ಸಿ.ಬಿ. ಪಾಟೀಲ್ ಮೊದಲಾದವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಪ್ರಕರಣದ ತನಿಖೆಗಾಗಿ ಮೂರು ತಂಡಗಳನ್ನು ರಚಿಸಲಾಗಿದೆ. ಶಂಕರನಾರಯಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Write A Comment