ಕರಾವಳಿ

ಬಂಟ್ವಾಳ : ಈ ದಿನದ ಪ್ರಮುಖ ವರದಿಗಳು…

Pinterest LinkedIn Tumblr

Bantwala_News_Pics_1

– ಬಂಟ್ವಾಳ ತಾಲೂಕು ಪಂಚಾಯತ್ ಕಛೇರಿಗೆ ಇನ್ಫೋಸಿಸ್ ಸಂಸ್ಥೆಯಿಂದ ಉಚಿತ ಕಂಪ್ಯೂಟರ್‌ ವಿತರಣೆ –

ಬಂಟ್ವಾಳ: ಬಂಟ್ವಾಳ ತಾಲೂಕು ಪಂಚಾಯತ್ ಕಛೇರಿಗೆ ಇನ್ಫೋಸಿಸ್ ಸಂಸ್ಥೆ 10 ಕಂಪ್ಯೂಟರ್‌ಗಳನ್ನು ಉಚಿತವಾಗಿ ನೀಡಿದೆ. ಇಲ್ಲಿನ ತಾಲೂಕು ಪಂಚಾಯತ್‌ನಲ್ಲಿ ಕಂಪ್ಯೂಟರ್‌ಗಳ ಕೊರತೆ ಇದ್ದು ಹೀಗಾಗಿ ಇಲ್ಲಿನ ಉದ್ಯೋಗ ಖಾತರಿ ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ತಾತ್ರಿಕ ಕಾರ್ಯ ನಿಧಾನಗತಿಯಲ್ಲಿ ಸಾಗುತ್ತಿತ್ತು. ಈ ಹಿನ್ನಲೆಯಲ್ಲಿ ವಿಶೇಷವಾಗಿ ತಾ.ಪಂ.ಅಧ್ಯಕ್ಷ ಯಶವಂತ ಅವರ ಮುತುವರ್ಜಿಯಲ್ಲಿ ಇನ್ಪೋಸಿಸ್ ಕಂಪೆನಿಗೆ ಮನವಿ ಮಾಡಿದ್ದರು.

Bantwala_News_Pics_2

 

ಇಲ್ಲಿನ ಸಮಸ್ಯೆಯ ಬಗ್ಗೆ ವಿಶ್ಲೇಷಿಸಿ 10 ಕಂಪ್ಯೂಟರ್‌ನ್ನು ತಾ.ಪಂ.ಗೆ ನೀಡಿದೆ. ಈ ಸಂದರ್ಭ ತಾ.ಪಂ ಅಧ್ಯಕ್ಷ ಯಶವಂತ, ಉಪಾಧ್ಯಕ್ಷೆ ವಿಲಾಸಿನಿ, ಮಾಜಿ ಉಪಾಧ್ಯಕ್ಷರುಗಳಾದ ಆನಂದ ಎ.ಶಂಭೂರು, ದಿನೇಶ್ ಅಮ್ಟೂರು ಮತ್ತು ಕಂಪೆನಿಯ ಅಧಿಕಾರಿಗಳು ಉಪಸ್ಥಿತರಿದ್ದರು.

– ನೇಣುಬಿಗಿದು ಆತ್ಮಹತ್ಯೆ –

ಬಂಟ್ವಾಳ; ಮಕ್ಕಳೊಂದಿಗೆ ಮನಸ್ತಾಪವಾದ ಹಿನ್ನೆಲೆಯಲ್ಲಿ ಮನನೊಂದ ವ್ಯಕ್ತಿಯೊಬ್ಬರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಾವೂರು ಗ್ರಾಮದಲ್ಲಿ ಗುರುವಾರ ನಡೆದಿದೆ. ಇಲ್ಲಿನ ಮೈಂದಳ ಕೋಟಿಪಾಲು ನಿವಾಸಿ ಸುಂದರ ಪೂಜಾರಿ(55) ಎಂಬಾವರೇ ಆತ್ಮಹತ್ಯೆ ಮಾಡಿಕೊಂಡವರು. ಕೆಲ ದಿನಗಳ ಹಿಂದೆ ಇವರ ಜಮೀನು ಮಾರಾಟವಾಗಿದ್ದು, ಇದರ ಹಣದ ವಿಚಾರದ ಬಗ್ಗೆ ಸುಂದರ ಪೂಜಾರಿ ಹಾಗೂ ಅವರ ಮಕ್ಕಳ ನಡುವೆ ಮಾತಿಗೆ ಮಾತು ಬೆಳೆದು ಮನಸ್ತಾಪ ಉಂಟಾಗಿತ್ತು. ಇದರಿಂದ ಬೇಸತ್ತ ಅವರು ಗುರುವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಊಟದ ಕೋಣೆಯಲ್ಲಿ ನೇಣುಬಿಗಿದು ಅತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮೃತರ ಪತ್ನಿ ಮೀನಾಕ್ಷಿ ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

– ತುಂಬೆ ವೆಂಟೆಡ್ ಡ್ಯಾಮ್ ಸಮೀಪ ಅಪರಿಚಿತ ಶವ ಪತ್ತೆ –  

ಬಂಟ್ವಾಳ; ತುಂಬೆ ವೆಂಟೆಡ್ ಡ್ಯಾಮ್ ಸಮೀಪ ಗುರುವಾರ ಬೆಳಿಗ್ಗೆ ಅಪರಿಚಿತ ಶವ ಪತ್ತೆಯಾಗಿದೆ. ಸ್ಥಳೀಯರು ಶವ ಕಂಡು ಬಂಟ್ವಾಳ ಗ್ರಾಮಾಂತರ ಪೊಲೀಸರಿಗೆ ಮಾಹಿತಿನೀಡಿದ್ದಾರೆ. ಇದರನ್ವಯ ಬಂಟ್ವಾಳ ಗ್ರಾಮಾಂತರ ಪೊಲೀಸ್ ಉಪನಿರೀಕ್ಷಕ ರಕ್ಷಿತ್ ಮತ್ತು ಸಿಬ್ಬಂದಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ನೂತನ ವೆಂಟೆಡ್ ಡ್ಯಾಂ ನಿರ್ಮಾಣಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಶವ ಪತ್ತೆಯಾಗಿದ್ದು, ಶವ ಮೇಲೆತ್ತಲು ಅಗ್ನಿಶಾಮಕ ದಳದ ಸಿಬ್ಬಂದಿಗಳನ್ನು ಸ್ಥಳಕ್ಕೆ ಕರೆಸಲಾಗಿದ್ದು, ಸಾರ್ವಜನಿಕರ ನೆರವಿನೊಂದಿಗೆ ಶವವನ್ನು ಅಗ್ನಿಶಾಮಕದಳದ ಬೋಟ್ ಮೂಲಕ ನದಿಯಿಂದ ತೆರವುಗೊಳಿಸಿ,ಮಂಗಳೂರು ವೆನ್‌ಲಾಕ್ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ. ಬಂಟ್ವಾಳ ಎ‌ಎಸ್ಪಿ ರಾಹುಲ್ ಕುಮಾರ್ ಘಟನಾ ಸ್ಥಳಕ್ಕೆ ಆಗಮಿಸಿ, ಮುಂದಿನ ಕ್ರಮದ ಕುರಿತು ಪೊಲೀಸರಿಗೆ ಸೂಚನೆ ನೀಡಿದರು. ತುಂಬೆ ಗ್ರಾಮಪಂಚಾಯತ್ ಅಧ್ಯಕ್ಷ ಮಹಮ್ಮದ್ ವಳವೂರು, ಪುರಸಭಾ ಸದಸ್ಯ ರಾಮಕೃಷ್ಣ ಆಳ್ವ, ಮಾಜಿ ತಾ.ಪಂ.ಸದಸ್ಯ ಪ್ರವೀಣ್ ಆಳ್ವ ಮೊದಲಾದವರು ಘಟನಾ ಸ್ಥಳಕ್ಕೆ ಭೇಟಿ ನೀಡಿದರು. ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಗ್ನಿಶಾಮಕ ಅಧಿಕಾರಿ ತರಾಟೆಗೆ…

ತುಂಬೆ ವೆಂಟೆಡ್ ಡ್ಯಾಂ ಬಂಟ್ವಾಳ ತಾಲೂಕಿಗೆ ಸೇರಿದ್ದು, ಇಲ್ಲಿನ ಅಪರಿಚಿತ ಶವ ಮೇಲೆತ್ತಲು ಬಂಟ್ವಾಳದ ಅಗ್ನಿಶಾಮಕದಳವೇ ಬರಲಿ ಎಂದು ಮಂಗಳೂರು ಅಗ್ನಿಶಾಮಕ ದಳದ ಸಿಬ್ಬಂದಿಗಳು ಹೇಳಿದ್ದಾರೆಂಬ ವಿಚಾರ ಪೊಲೀಸ್ ಅಧಿಕಾರಿಗಳನ್ನು ಕೆರಳಿಸಿತು. ಈ ಬಗ್ಗೆ ಅಗ್ನಿಶಾಮಕ ದಳದ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಬಂಟ್ವಾಳ ಎ‌ಎಸ್ಪಿ ರಾಹುಲ್ ಕುಮಾರ್, ಪೊಲೀಸ್ ಇಲಾಖೆಯಲ್ಲಿ ಬೋಟ್ ಇಲ್ಲ, ಇದ್ದರೆ ಅದನ್ನೂ ನಾವೇ ಮಾಡ್ತೇವೆ, ಎರಡೂ ಇಲಾಖೆಗಳೂ ಸಾರ್ವಜನಿಕ ಕೆಲಸಕ್ಕೆ ಇರುವಂತಾದ್ದು, ಇಂತಹಾ ಸಂದರ್ಭದಲ್ಲೂ ವ್ಯಾಪ್ತಿ ವ್ಯಾಪ್ತಿ ಅಂತ ಯಾಕೆ ಹೇಳ್ತೀರಿ ಎಂದು ವಿವರ ಕೇಳಿದರು. ಇದಕ್ಕೆ ಸಮಜಾಯಿಷಿಕೆ ನೀಡಿದ ಅಧಿಕಾರಿ, ನಾವು ಆ ಅರ್ಥದಲ್ಲಿ ಹೇಳಿದ್ದಲ್ಲ, ನಮ್ಮೊಂದಿಗೆ ನೆರವಿಗೆ ಜನಬೇಕೆಂದು ಹೇಳಿದ್ದೇವಷ್ಟೇ ಎಂದು ಹೇಳಿ ಜಾರಿಕೊಂಡರು. ಬಳಿಕ ಅಗ್ನಿಶಾಮಕದಳದವರ ನೇತೃತ್ವದಲ್ಲಿ ಪೊಲೀರು ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಶವವನ್ನು ನದಿಯಿಂದ ಮೇಲೆತ್ತಲಾಯಿತು.

– ಕಾಂಗ್ರೆಸ್ ಸದಸ್ಯತ್ವ ಅಭಿಯಾನ –

ಬಂಟ್ವಾಳ; ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮತ್ತು ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿಯು ಪಕ್ಷದ ಸದಸ್ಯತ್ವ ನೋಂದಣಿ ಹಾಗೂ ಪಕ್ಷ ಸಂಘಟನೆಗಾಗಿ ಹಮ್ಮಿಕೊಂಡಿರುವ ವಿಶೇಷ ಅಭಿಯಾನದ ಅಂಗವಾಗಿ ಪಾಣೆಮಂಗಳೂರು ಹಾಗೂ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಅ.29ರ ಮಂಗಳವಾರ ಬೆಳಿಗ್ಗೆ 9 ಗಂಟೆಯಿಂದ ಅಪರಾಹ್ನ 6ಗಂಟೆಯ ವರೆಗೆ ಕಾಂಗ್ರೆಸ್ ಪಕ್ಷದ ಸದಸ್ಯತ್ವ ಅಭಿಯಾನವು ಎರಡೂ ಬ್ಲಾಕ್ ವ್ಯಾಪ್ತಿಯಲ್ಲಿ ನಡೆಯಲಿದೆ.

ಸದ್ರಿ ದಿನದಂದು ಪಾಣೆಮಂಗಳೂರು ಹಾಗೂ ಬಂಟ್ವಾಳ ಬ್ಲಾಕ್ ನ ಎಲ್ಲಾ ಬೂತ್ ಕಮಿಟಿಗಳಲ್ಲಿ ಪಕ್ಷದ ವಿಶೇಷ ಸಭೆಗಳನ್ನು ನಡೆಸುವುದಲ್ಲದೆ ಪ್ರತಿಯೊಂದು ಬೂತಿನಲ್ಲಿ ಕನಿಷ್ಠ ೩೦ ಮಂದಿ ಸದಸ್ಯರನ್ನು ನೋಂದಾಯಿಸಿ ಕೊಳ್ಳಲು ತಿರ್ಮಾನಿಸಲಾಗಿದೆ. ಅಭಿಯಾನದ ದಿನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ರಮಾನಾಥ ರೈಯವರು ಬೂತ್‌ಗಳಿಗೆ ಭೇಟಿ ನೀಡಲಿದ್ದಾರೆ. ಕಾಂಗ್ರೇಸ್ ಪಕ್ಷವನ್ನು ಗಟ್ಟಿಗೊಳಿಸುವ ಈ ವಿಶೇಷ ಅಭಿಯಾನದಲ್ಲಿ ಪಕ್ಷದ ಕಾರ್ಯಕರ್ತರು,ವಿವಿಧ ಹಂತದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ನಾಯಕರು ಭಾಗವಹಿಸಿ ಯಶಸ್ವಿಗೊಳಿಸುವಂತೆ ಪಾಣೆಮಂಗಳೂರು ಬ್ಲಾಕ್ ಕಾಂಗ್ರೇಸ್ ಅದ್ಯಕ್ಷ ಅಬ್ಬಾಸ್ ಆಲಿ ಹಾಗೂ ಬಂಟ್ವಾಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Write A Comment