ಕರಾವಳಿ

ಸಂಘಟನೆ ಕಾರ್ಯಕರ್ತನ ಹಲ್ಲೆ ಪ್ರಕರಣ : ಕಾವೂರು ಎಸ್ ಐ ಅಮಾನತು

Pinterest LinkedIn Tumblr

yedurappa_visited_kavoor_4a

( ಅಣುಕು ಚಿತ್ರ )

ಮಂಗಳೂರು: ಹಿಂದೂ ಸಂಘಟನೆ ಕಾರ್ಯಕರ್ತ ಮೂಡುಶೆಡ್ಡೆ ನಿವಾಸಿ ಚರಣ್ ಎಂಬವರಿಗೆ ಹಲ್ಲೆ ನಡೆಸಿದ ಆರೋಪಿದಲ್ಲಿ ಕಾವೂರು ಎಸ್‌ಐ ಉಮೇಶ್‌ಕುಮಾರ್ ಅವರನ್ನು ಸೇವೆಯಿಂದ ಅಮಾನತುಗೊಳಿ ಮಂಗಳೂರು ಕಮಿಷನರ್ ಆರ್.ಹಿತೇಂದ್ರ ಆದೇಶ ಸೋಮವಾರ ಹೊರಡಿಸಿದ್ದಾರೆ.

ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಚರಣ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಚರಣ್ ನ್ಯಾಯಾಲಯದಿಂದ ಜಾಮೀನು ಪಡೆದಿದ್ದರು. ಆ ಬಳಿಕವೂ ಎಸ್‌ಐ ಚರಣ್‌ನನ್ನು ಠಾಣೆಗೆ ಕರೆದೊಯ್ದು ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿತ್ತು.

ಎಸ್‌ಐ ಹಲ್ಲೆಯಿಂದ ಗಂಭೀರ ಗಾಯಗೊಂಡಿದ್ದ ಚರಣ್ ವೆನ್‌ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಅಲ್ಲದೆ ಎಸ್‌ಐ ವಿರುದ್ಧ ಕಾವೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಅ.9ರಂದು ಉಮೇಶ್ ಕುಮಾರ್ ವಿರುದ್ಧ ಪ್ರಕರಣ ದಾಖಲಾಗಿತ್ತು.

ಆದರೆ ಗಂಭೀರ ಸ್ವರೂಪದ ಹಲ್ಲೆ ನಡೆಸಿದ ಎಸ್‌ಐಯನ್ನು ಅಮಾನತು ಮಾಡಬೇಕೆಂದು ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಮಂಗಳೂರು ಕಮಿಷನರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿತ್ತು. ಆದರೆ ಯಾವುದೇ ಕ್ರಮ ಕೈಗೊಳ್ಳದ ಕಾರಣ ಮೂರು ದಿನಗಳ ಕಾಲ ಕಾವೂರು ಠಾಣೆ ಎದುರು ರಸ್ತೆ ತಡೆ ನಡೆಸಿ ಅಮಾನತಿಗೆ ಪಟ್ಟು ಹಿಡಿದಿದ್ದರು.

ಇದೇ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಂಸದ ನಳಿನ್ ಕುಮಾರ್ ಮತ್ತಿತರರು ಕಾವೂರು ಠಾಣೆಗೆ ಭೇಟಿ ನೀಡಿ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಎಸ್.ಐ ಅಮಾನಿತಿಗೆ ಆಗ್ರಹಿಸಿದ್ದಾರೆ. ಜೊತೆಗೆ ಮಂಗಳೂರಿಗೆ ಆಗಮಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ಕೂಡ ಹಿಂದೂ ಸಂಘಟನೆಯ ಯುವಕನ ಮೇಲೆ ದೌರ್ಜನ್ಯ ನಡೆಸಿದ ಕಾವೂರು ಎಸ್.ಐಯನ್ನು ಅಮಾನತುಗೊಳಿಸಬೇಕೆಂದು ಪಟ್ಟು ಹಿಡಿದಿದ್ದರು.

ಪ್ರಕರಣ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ಕಮಿಷನರ್ ತನಿಖೆ ನಡೆಸಲು ಮೂಡುಬಿದಿರೆ ಇನ್‌ಸ್ಪೆಕ್ಟರ್ ಅನಂತಪದ್ಮನಾಭ ಅವರಿಗೆ ಸೂಚನೆ ನೀಡಿದ್ದರು. ಅವರು ಡಿಸಿಪಿ ವಿಷ್ಣುವರ್ಧನ ಜತೆಯಲ್ಲಿ ತನಿಖೆ ನಡೆಸಿ ಹಲ್ಲೆ ಪ್ರಕರಣದಲ್ಲಿ ಸತ್ಯಾಂಶ ಇದೆ ಎಂದು ಕಮಿಷನರ್‌ಗೆ ವರದಿ ನೀಡಿದ್ದರು. ಈ ಆಧಾರದಲ್ಲಿ ಎಸ್‌ಐ ಉಮೇಶ್ ಕುಮಾರ್ ಅವರನ್ನು ಅಮಾನತುಪಡಿಸಲಾಗಿದೆ.

Write A Comment