ಕರಾವಳಿ

ರಾಜ್ಯ ಸರಕಾರದಿಂದ ಬೀದಿ ಬದಿ ವ್ಯಾಪಾರಿಗಳ ಅಧಿನಿಯಮ ಅನುಷ್ಠಾನ :ಸಚಿವ ವಿನಯ ಕುಮಾರ್ ಸೊರಕೆ

Pinterest LinkedIn Tumblr

Beedi_vyapari_workshop

ಮಂಗಳೂರು: ಬೀದಿ ಬದಿ ವ್ಯಾಪಾರಿಗಳ ಅಧಿನಿಯಮ ಅನುಷ್ಠಾನವನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಿ ಈಗಾಗಲೇ 56 ಸಾವಿರ ಬೀದಿಬದಿ ವ್ಯಾಪಾರಸ್ಥರನ್ನು ಗುರುತಿಸುವ ಕಾರ್ಯ ನಡೆದಿದೆ ಎಂದು ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ಬೀದಿ ಬದಿ ವ್ಯಾಪಾರಿಗಳ ಅಧಿನಿಯಮ ಕುರಿತು ನಡೆದ ಕಾರ್ಯಾಗಾರ ಉದ್ಘಾಟಿಸಿ ಅವರು ಶನಿವಾರ ಮಾತನಾಡಿದರು.

mcc_news_photo_1 mcc_news_photo_2

ರಾಜ್ಯದಲ್ಲಿರುವ ಶೇ.30ರಷ್ಟು ಮಂದಿ ಬೀದಿ ಬದಿ ವ್ಯಾಪಾರಸ್ಥರು, ಸ್ಲಂ ನಿವಾಸಿಗಳು, ಆರ್ಥಿಕವಾಗಿ ಹಿಂದುಳಿದವರ ಅಭಿವೃದ್ಧಿಯಾದರೆ ಮಾತ್ರ ಸರ್ವೋತೋಮುಖ ಬೆಳವಣಿಗೆ ಸಾಧ್ಯ ಎಂದು ಅವರು ಹೇಳಿದರು.

ನರ್ಮ್ ಯೋಜನೆ ಮೂಲಕ ಕೌಶಲ್ಯಾಭಿವೃದ್ಧಿ, ವಸತಿ ಮುಂತಾದ ಸೌಲಭ್ಯ ನೀಡಿ ಅಭಿವೃದ್ಧಿಯತ್ತ ಹೆಜ್ಜೆ ಇಡುವಲ್ಲಿ ರಾಜ್ಯ ಪ್ರಥಮವಾಗಿದೆ. ಬೀದಿಬದಿ ವ್ಯಾಪಾರಸ್ಥರಿಗೆ ಗುರುತುಪತ್ರ ನೀಡುವ ಕಾರ್ಯ ಚಾಲ್ತಿಯಲ್ಲಿದೆ ಎಂದರು.

mcc_news_photo_3 mcc_news_photo_4

ರೈಲ್ವೆ ಸಂಪರ್ಕಕ್ಕೆ ಪ್ರಸ್ತಾವನೆ: ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳಿಂದ ಪ್ರತಿನಿತ್ಯ ಆಗಮಿಸಿ ಬೀದಿ ಬದಿ ವ್ಯಾಪಾರ ನಡೆಸಿ ಹಿಂದಿರುಗುವ 25 ಲಕ್ಷ ಮಂದಿಗೆ ಅನುಕೂಲವಾಗುವಂತೆ ರೈಲ್ವೇ ಸಂಪರ್ಕ ಕಲ್ಪಿಸಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶಿವಮೊಗ್ಗದಲ್ಲಿ ಕೊಳಚೆ ಪ್ರದೇಶಗಳನ್ನು ಬೀದಿಬದಿ ವ್ಯಾಪಾರಸ್ಥರೇ ಅಭಿವೃದ್ಧಿಗೊಳಿಸಿ ಉತ್ತಮ ರೀತಿಯಲ್ಲಿ ವ್ಯಾಪಾರ ನಡೆಸಿ ಮಾದರಿಯಾಗಿದ್ದಾರೆ ಎಂದು ಅವರು ತಿಳಿಸಿದರು.

ಮಾನವೀಯತೆಯಿರಲಿ: ಶಾಸಕ ಜೆ.ಆರ್.ಲೋಬೋ ಮಾತನಾಡಿ, ನಗರ ಬೆಳೆಯುತ್ತಿರುವಂತೆಯೇ ಬೀದಿಬದಿ ವ್ಯಾಪಾರಸ್ಥರ ಸಮಸ್ಯೆ ಜಟಿಲವಾಗಿದ್ದರೂ ಕೂಡಾ ಮಾನವೀಯತೆಯಿಂದ ಸ್ಪಂದಿಸಬೇಕು ಎಂದರು.

ಶೇ. 50 ಮಂದಿಗೆ ಗುರುತು ಚೀಟಿ: ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕಿ ಡಾ.ಎನ್.ಮಂಜುಳಾ ಮಾತನಾಡಿ, ಅಧಿನಿಯಮ ಕುರಿತು ರಾಜ್ಯದಲ್ಲೇ ಪ್ರಥಮವಾಗಿ ಮಂಗಳೂರಿನಲ್ಲಿ ಪ್ರಥಮ ಕಾರ್ಯಾಗಾರ ನಡೆಸಲಾಗುತ್ತಿದೆ ಎಂದರು.

mcc_news_photo_6 mcc_news_photo_5

ರಾಜ್ಯದಲ್ಲಿರುವ 213 ನಗರ ಸ್ಥಳೀಯಾಡಳಿತೆಯಲ್ಲಿ ನಗರ ಬೀದಿಬದಿ ವ್ಯಾಪಾರಸ್ಥರ ಸಮಿತಿ ರಚಿಸಿ ಆ ಮೂಲಕ ಗುರುತಿಸಲಾದ ಬೀದಿಬದಿ ವ್ಯಾಪಾರಸ್ಥರಿಗೆ ಶೇ.50ರಷ್ಟು ಗುರುತುಚೀಟಿ ನೀಡಲಾಗಿದೆ ಎಂದು ಅವರು ಹೇಳಿದರು.

ಬೀದಿ ವ್ಯಾಪಾರಿಗಳಿಗೆ ಅಪಾರ ಬೇಡಿಕೆ: ಹೊಸದಿಲ್ಲಿ ನ್ಯಾಶನಲ್ ಅಸೋಸಿಯೇಶನ್ ಆಫ್ ಸ್ಟ್ರೀಟ್ ವೆಂಡರ್ಸ್‌ ಆಫ್ ಇಂಡಿಯಾದ ಸಂಚಾಲಕ ಅರವಿಂದ ಸಿಂಗ್ ದಿಕ್ಸೂಚಿ ಭಾಷಣ ಮಾಡಿ, ಬೀದಿಬದಿ ವ್ಯಾಪಾರಸ್ಥರಿಗೆ ಪ್ರತಿಯೊಂದು ನಗರದಲ್ಲೂ ಬಹಳಷ್ಟು ಬೇಡಿಕೆಯಿರುವ ಕಾರಣ ನಿಯಂತ್ರಿತವಾಗಿ ವ್ಯಾಪಾರ ನಡೆಯುವ ಅವಶ್ಯಕತೆಯಿದೆ ಎಂದರು. ಈ ಸಂದರ್ಭ ಶೇ.22.75 ನಿಧಿ ಅನ್ವಯ ಅಡುಗೆ ಅನಿಲ ಸಂಪರ್ಕ ಕಲ್ಪಿಸಲಾದ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಲಾಯಿತು.

mcc_news_photo_7

ಮೇಯರ್ ಮಹಾಬಲ ಮಾರ್ಲ, ಶಾಸಕ ಮೊಹಿಯುದ್ದೀನ್ ಬಾವ, ಉಪಮೇಯರ್ ಕವಿತಾ, ದ.ಕ. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ, ಜಂಟಿ ಆಯುಕ್ತ ಗೋಕುಲ್‌ದಾಸ್ ನಾಯಕ್ ಉಪಸ್ಥಿತರಿದ್ದರು.

ಬೆಂಗಳೂರು ಪೌರಾಡಳಿತ ನಿರ್ದೇಶನಾಲಯ, ಮಂಗಳೂರು ಮಹಾನಗರ ಪಾಲಿಕೆ, ಹೊಸದಿಲ್ಲಿ ನ್ಯಾಶನಲ್ ಅಸೋಸಿಯೇಶನ್ ಆಫ್ ಸ್ಟ್ರೀಟ್ ವೆಂಡರ್ಸ್‌ ಆಫ್ ಇಂಡಿಯಾ ವತಿಯಿಂದ ಕಾರ್ಯಾಗಾರ ಆಯೋಜಿಸಲಾಗಿತ್ತು.

Write A Comment