ಮಂಗಳೂರು, ಅ.18: ಪ್ರಗತಿಪರರು ಎಂದು ಹೇಳಿಕೊಳ್ಳುವವರು ವೇಶ್ಯಾ ವಾಟಿಕೆಯನ್ನು ಕಾನೂನು ಬದ್ಧಗೊಳಿಸಬೇಕು ಎಂಬ ಸಲಹೆಗಳನ್ನು ನೀಡುತ್ತಿದ್ದಾರೆ. ಆದರೆ ಯಾವನೇ ಒಬ್ಬ ತನ್ನ ಸಹೋದರಿ ವೇಶ್ಯಾವಾಟಿಕೆ ಮಾಡುವುದನ್ನು ಇಷ್ಟಪಡಲಾರ. ಅಲ್ಲದೆ ಇದು ನಾಗರಿಕ ಸಮಾಜಕ್ಕೆ ಮಾಡುವ ಅಪಮಾನ ಎಂದು ನ್ಯಾಷನಲ್ ವಿಮೆನ್ಸ್ ಫ್ರಂಟ್(ಎನ್‌ಡಬ್ಲುಎಫ್) ನ ರಾಷ್ಟ್ರೀಯ ಅಧ್ಯಕ್ಷೆ ಶಾಹಿದಾ ಅಸ್ಲಮ್ ಅಭಿಪ್ರಾಯಪಟ್ಟರು.
‘ಎದ್ದೇಳಿ! ಮಹಿಳಾ ಹಕ್ಕುಗಳಿಗಾಗಿ ಎಚ್ಚೆತ್ತುಕೊಳ್ಳಿ’ ಎಂಬ ಧ್ಯೇಯ ವಾಕ್ಯದೊಂದಿಗೆ ಕೋಯಮತ್ತೂರಿನಲ್ಲಿ ನವೆಂಬರ್‌ನಲ್ಲಿ ನಡೆಯಲಿರುವ ಎನ್‌ಡಬ್ಲುಎಫ್ ರಾಷ್ಟ್ರೀಯ ಮಹಿಳಾ ಸಮಾವೇಶದ ಪ್ರಚಾರ ಅಭಿಯಾನವನ್ನು ನಗರದ ಲೊಯೊಲಾ ಸಭಾಂಗಣದಲ್ಲಿ ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮಹಿಳೆ ವ್ಯಾಪಾರಿ ಸರಕು ಅಲ್ಲ. ಆದರೆ ಆಕೆಯನ್ನು ವ್ಯಾಪಾರಿ ಸರಕನ್ನಾಗಿಸುವ ಪ್ರಯತ್ನ ನಡೆಯುತ್ತಿದೆ. ಜತೆಗೆ ಆಕೆಯ ಮೇಲೆ ನಡೆಯುವ ದೌರ್ಜನ್ಯ ಹಲವು ರೂಪಗಳಾಗಿ ಬದಲಾಗುತ್ತಿದೆ. ಇದಕ್ಕೆ ಕಾನೂನು ಒಂದೇ ಪರಿಹಾರವಲ್ಲ. ಮಹಿಳಾ ವರ್ಗ ಎಚ್ಚೆತ್ತುಕೊಂಡು ತನ್ನ ಹಕ್ಕುಗಳ ರಕ್ಷಣೆಗೆ ಹೋರಾಟ ಮಾಡಬೇಕಾಗಿದೆ ಎಂದು ಶಾಹಿದಾ ಅಸ್ಲಮ್ ತಿಳಿಸಿದರು.
ಬಹುಸಂಖ್ಯಾತ ಮಹಿಳೆಯರ ಮೇಲೂ ದೌರ್ಜನ್ಯ ದೇಶದಲ್ಲಿ ಅಲ್ಪಸಂಖ್ಯಾತ, ದಲಿತ ಮಹಿಳೆಯರ ಮೇಲೆ ಮಾತ್ರವಲ್ಲ, ಬಹುಸಂಖ್ಯಾತ ಮಹಿಳೆಯರ ಮೇಲೂ ದೌರ್ಜನ್ಯ ನಡೆಯುತ್ತಿದೆ. ಕರಾವಳಿ ತೀರದಲ್ಲಿ ಘಟಿಸಿದ ಪದ್ಮಪ್ರಿಯಾ, ಸೌಜನ್ಯಾ ಪ್ರಕರಣಗಳು ಸಾಮಾಜಿಕ ದುರಂತವಾಗಿ ಪರಿಣಮಿಸಿದೆ. ಈ ನಿಟ್ಟಿನಲ್ಲಿ ಮಹಿಳಾ ಸಮಾಜ ಜಾಗೃತಗೊಳ್ಳಬೇಕಾಗಿದೆ. ಅದಕ್ಕಾಗಿ ಪುರುಷ ವರ್ಗವೂ ಕೈ ಜೋಡಿಸಬೇಕಾಗಿದೆ ಎಂದು ಕವಯತ್ರಿ ಜ್ಯೋತಿ ಗುರುಪ್ರಸಾದ್ ಅತಿಥಿ ಭಾಷಣದಲ್ಲಿ ತಿಳಿಸಿದರು.
ಎನ್‌ಡಬ್ಲುಎಫ್ ರಾಜ್ಯಾಧ್ಯಕ್ಷೆ ಫಾತಿಮಾ ನಸೀಮಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಎನ್‌ಡಬ್ಲುಎಫ್ ರಾಷ್ಟ್ರೀಯ ಸಮಿತಿಯ ಸದಸ್ಯೆ ಶಾಹಿದಾ ತಸ್ನೀಮ್ ದಿಕ್ಸೂಚಿ ಭಾಷಣ ಮಾಡಿದರು. ಬ್ಯಾರಿ ಸಾಹಿತ್ಯ ಅಕಾಡಮಿಯ ಸದಸ್ಯೆ ರೊಹರಾ ಅಬ್ಬಾಸ್, ಕೆಥೊಲಿಕ್ ಸಭಾದ ಅಧ್ಯಕ್ಷೆ ಫ್ಲೇವಿಯಾ ಡಿಸೋಜ, ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದ ಸಂಶೋಧಕಿ ಪದ್ಮಶ್ರೀ ಟಿ., ಎನ್‌ಡಬ್ಲುಎಫ್ ಕೇರಳ ರಾಜ್ಯಾಧ್ಯಕ್ಷೆ ರಮ್ಲಾ ಟೀಚರ್, ತಮಿಳುನಾಡು ರಾಜ್ಯಾಧ್ಯಕ್ಷೆ ರಝಿಯಾ ಮಾತನಾಡಿದರು. ಶಿಕ್ಷಣ, ಸಾಹಿತ್ಯ, ಸಮಾಜ ಸೇವೆ ಯಲ್ಲಿ ಸಾಧನೆಗೈದ ಕೋರ್ರಿನ್ ರಸ್ಕಿನ್ಹೊ, ಮರ್ಯಮ್ ಇಸ್ಮಾಯೀಲ್, ಸಮೀರಾ, ಫೌಝಿಯಾರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ರಾಷ್ಟ್ರೀಯ ಸಮಿತಿಯ ಸದಸ್ಯೆ ನೌಶೀರಾ, ಶಿಫಾ, ಅಲೀಮಾ, ಸಫಿಯಾ, ರಾಜ್ಯ ಉಪಾಧ್ಯಕ್ಷೆ ತರನ್ನುಂ ಮೈಸೂರು ಉಪಸ್ಥಿತರಿದ್ದರು. ಎನ್‌ಡಬ್ಲುಎಫ್ ದ.ಕ.ಜಿಲ್ಲಾಧ್ಯಕ್ಷೆ ನಝೀಫಾ ಸ್ವಾಗತಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಲುಬ್ನಾ ಮಿನಾಝ್ ವಂದಿಸಿದರು. ರಾಜ್ಯ ಸಮಿತಿಯ ಸದಸ್ಯೆ ದಿಲ್‌ದಾರ್ ಭಟ್ಕಳ ಕಾರ್ಯಕ್ರಮ ನಿರೂಪಿಸಿದರು.









