ಕರಾವಳಿ

ಚರ್ಚ್‌ಗಳ ಮೇಲಿನ ದಾಳಿ ಪ್ರಕರಣ|ಸೋಮಶೇಖರ್ ವರದಿ ತಿರಸ್ಕೃತ | ಸಂಪುಟ ಸಭೆಯಲ್ಲಿ ತೀರ್ಮಾನ

Pinterest LinkedIn Tumblr

Mangalore_church_attack_pic

ಬೆಂಗಳೂರು, ಅ.17: ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಪ್ರಾರ್ಥನಾ ಸ್ಥಳಗಳ ಮೇಲೆ 2008ರಲ್ಲಿ ನಡೆದ ದಾಳಿ ಪ್ರಕರಣಗಳ ಕುರಿತು ತನಿಖೆಗೆ ನೇಮಿಸಲಾಗಿದ್ದ ನ್ಯಾ.ಬಿ.ಕೆ. ಸೋಮಶೇಖರ್ ನೇತೃತ್ವದ ವಿಚಾರಣಾ ಆಯೋಗ ಸಲ್ಲಿಸಿರುವ ವರದಿಯನ್ನು ಸಚಿವ ಸಂಪುಟ ಸಭೆ ತಿರಸ್ಕರಿಸಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನ್ಯಾ.ಬಿ.ಕೆ. ಸೋಮಶೇಖರ್ ವಿಚಾರಣಾ ಆಯೋಗವು ಸರಕಾರಕ್ಕೆ ಮಧ್ಯಾಂತರ ಹಾಗೂ ಅಂತಿಮ ವರದಿಗಳನ್ನು ಸಲ್ಲಿಸಿದೆ. ಆದರೆ, ಆ ಎರಡೂ ವರದಿಗಳಲ್ಲಿನ ಶಿಫಾರಸುಗಳಲ್ಲಿ ಸಾಮ್ಯ ಇಲ್ಲದ ಕಾರಣ ವರದಿಯನ್ನು ತಿರಸ್ಕರಿಸಲಾಗಿದೆ ಎಂದರು. ಆಯೋಗದ ಮಧ್ಯಾಂತರ ವರದಿಯಲ್ಲಿ ಚರ್ಚ್‌ಗಳ ಮೇಲಿನ ದಾಳಿಯಲ್ಲಿ ಹಿಂದುತ್ವ ಸಂಘಟನೆಗಳ ಪಾತ್ರವಿದೆಯೆಂದು ಆರೋಪಿಸಲಾಗಿತ್ತು. ಆದರೆ, ಅಂತಿಮ ವರದಿಯಲ್ಲಿ ಈ ಬಗ್ಗೆ ಯಾವುದೇ ಉಲ್ಲೇಖವಿಲ್ಲದಿರುವುದು ಅನುಮಾನ ಮೂಡಿಸಿದೆ ಎಂದು ಜಯಚಂದ್ರ ತಿಳಿಸಿದರು.

ಆದುದರಿಂದ, ವರದಿಯನ್ನು ತಿರಸ್ಕರಿಸಿ ನಿಷ್ಪಕ್ಷಪಾತ ತನಿಖೆಗಾಗಿ ಪ್ರಕರಣವನ್ನು ಗೃಹ ಇಲಾಖೆಗೆ ವರ್ಗಾಯಿಸಲು ನಿರ್ಧರಿಸಲಾಗಿದೆ. ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ನೀಡಿರುವ ಶಿಫಾರಸ್ಸು ಜಾರಿಗೆ ತರಲಾಗುವುದು ಎಂದು ಅವರು ಹೇಳಿದರು. ಮುಖ್ಯಮಂತ್ರಿ ಸಾಂತ್ವನ ಯೋಜನೆ: 2014-15ನೆ ಸಾಲಿನ ಬಜೆಟ್‌ನಲ್ಲಿ ಘೋಷಿಸಿರುವಂತೆ ರಸ್ತೆ ಅಪಘಾತಗಳಲ್ಲಿ ಗಾಯಗೊಂಡ ಗಾಯಾಳುಗಳ ತುರ್ತು ಚಿಕಿತ್ಸೆ ಹಾಗೂ ವೈದ್ಯಕೀಯ ಚಿಕಿತ್ಸೆಗಾಗಿ ಮುಖ್ಯಮಂತ್ರಿಗಳ ಸಾಂತ್ವನ ಯೋಜನೆಯನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ. ಈ ಸಂಬಂಧ ಅಪಘಾತಕ್ಕೊಳಗಾದವರಿಗೆ ತಕ್ಷಣ 25 ಸಾವಿರ ರೂ.ವರೆಗಿನ ಪರಿಹಾರ ಬಿಡುಗಡೆ ಮಾಡಲು 5 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ ಎಂದು ಜಯಚಂದ್ರ ತಿಳಿಸಿದರು.

ವಿಷ್ಣುವರ್ಧನ್ ಸ್ಮಾರಕ: ಹಿರಿಯ ನಟ ದಿ.ಡಾ.ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕಾಗಿ ಕೆಂಗೇರಿ ಹೋಬಳಿಯ ಮೈಲಸಂದ್ರ ಗ್ರಾಮದಲ್ಲಿ ಎರಡು ಎಕರೆ ಜಮೀನು ಮಂಜೂರು ಮಾಡಲಾಗಿದ್ದು, ಕಾಮಗಾರಿಗಾಗಿ 11 ಕೋಟಿ ರೂ.ಬಿಡುಗಡೆ ಮಾಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಅಳವೆಕೋಡಿ ಮೀನುಗಾರಿಕೆಗೆ ಇಳಿದಾಣ ಹಾಗೂ ವಿಸ್ತರಣಾ ಕಾಮಗಾರಿಯನ್ನು ಅಂದಾಜು 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು, ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಹಿಂದುಳಿದ ಫಲಾನುಭವಿಗಳಿಗೆ ಸಾಲ ಸೌಲಭ್ಯ ಒದಗಿಸಲು ರಾಷ್ಟ್ರೀಯ ಹಿಂದುಳಿದ ವರ್ಗ ಅಭಿವೃದ್ಧಿ ನಿಗಮದಿಂದ 26 ಕೋಟಿ ರೂ. ಸಾಲ ಪಡೆಯಲು ರಾಜ್ಯ ಸರಕಾರ ಖಾತ್ರಿ ನೀಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದರು.ಲೋಕಾಯುಕ್ತ ಸಂಸ್ಥೆಯಲ್ಲಿ ಅಪರ ನಿಬಂದಕರಾಗಿ ಗುತ್ತಿಗೆ ಆಧಾರದ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿರುವ ನಿವೃತ್ತ ಜಿಲ್ಲಾ ನ್ಯಾಯಾಧೀಶ ಎ.ಎಂ.ಬೆನ್ನೂರು ಅವರನ್ನು ಇನ್ನು ಒಂದು ವರ್ಷದ ಅವಧಿಗೆ ಮುಂದುವರಿಸಲು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.

ಚುನಾವಣಾ ಆಯೋಗದ ಆಯುಕ್ತ: ನಿವೃತ್ತ ಐ‌ಎ‌ಎಸ್ ಅಧಿಕಾರಿ ಪಿ.ಎನ್. ಶ್ರೀನಿವಾಸಚಾರಿ ಅವರನ್ನು ರಾಜ್ಯ ಚುನಾವಣಾ ಆಯೋಗದ ನೂತನ ಆಯುಕ್ತರನ್ನಾಗಿ ನೇಮಕ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ಜಯಚಂದ್ರ ತಿಳಿಸಿದರು.
ರಾಜ್ಯ ಗ್ರಾಹಕರು ಸಂರಕ್ಷಣಾ ಪರಿಷತ್ತಿಗೆ ಮೂರು ವಿಧಾನಸಭಾ ಹಾಗೂ ಎರಡು ವಿಧಾನಪರಿಷತ್ ಸದಸ್ಯರ ನೇಮಕಕ್ಕೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸಲಾಗುವುದು. ಬೆಂಗಳೂರು ದಕ್ಷಿಣ ತಾಲೂಕು ತಾವರೆಕೆರೆ ಹೋಬಳಿ ಚುಂಚನಗುಪ್ಪೆಗ್ರಾಮದಲ್ಲಿ ರಾಜೀವ್‌ಗಾಂಧಿ ವಸತಿ ನಿಗಮಕ್ಕೆ 15 ಎಕರೆ ಜಮೀನನ್ನು ಹಸ್ತಾಂತರಿಸುವ ಪ್ರಸ್ತಾಪಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ಅವರು ಹೇಳಿದರು.
ಅನುದಾನಿತ ಪಾಲಿಟೆಕ್ನಿಕ್ ಸಂಸ್ಥೆಗಳ ವೇತನ ಹಾಗೂ ಸೀಟುಗಳ ಹಂಚಿಕೆಯನ್ನು 2012 ಅಕ್ಟೋಬರ್‌ವರೆಗೆ ಪರಿಷ್ಕರಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ಜಯಚಂದ್ರ ತಿಳಿಸಿದರು.

15 ದಿನಗಳ ಕಾಲ ನಡೆದ ಸಚಿವಾಲಯದ ಕಡತ ವಿಲೇವಾರಿ ಅಭಿಯಾನದಲ್ಲಿ 35,018 ಕಡತಗಳನ್ನು ವಿಲೇವಾರಿ ಮಾಡಲಾಗಿತ್ತು. ಅಲ್ಲದೆ, ವಿವಿಧ ಇಲಾಖೆಗಳಲ್ಲಿ ಒಂದರಿಂದ ಮೂರು ವರ್ಷಗಳವರೆಗೆ ವಿಲೇವಾರಿಯಾಗದೆ ಉಳಿದಿದ್ದ 1.38 ಲಕ್ಷ ಕಡತಗಳ ಪೈಕಿ ಕಳೆದ ಸೆ.1ರಿಂದ 30ರವರೆಗೆ 58,258 ಕಡತಗಳನ್ನು ವಿಲೇವಾರಿ ಮಾಡಲಾಗಿದೆ. ನವೆಂಬರ್ ತಿಂಗಳಲ್ಲಿ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಕಡತ ವಿಲೇವಾರಿ ಮಾಡಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.

Write A Comment