ಕರಾವಳಿ

ದಲಿತ ದೌರ್ಜನ್ಯ : ರಾಜಿ ಸಂಧಾನ ಮಾಡದೇ ದೂರು ನೀಡಿ ಎಸ್ಪಿ ಕರೆ

Pinterest LinkedIn Tumblr
 scsct_comisner_sabhe_1

ಮಂಗಳೂರು, ಅ.13: ದ.ಕ.ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಜಿಲ್ಲಾ ಮಟ್ಟದ ಮಾಸಿಕ ಎಸ್ಸಿ-ಎಸ್ಟಿ ಸಭೆಯು ಜಿಲ್ಲಾ ಎಸ್ಪಿ ಕಚೇರಿಯ ಸಭಾಂಗಣದಲ್ಲಿ ರವಿವಾರ ಜರಗಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಎಸ್ಪಿ ಡಾ.ಡಿ.ಎಸ್.ಶರಣಪ್ಪ, ದಲಿತ ದೌರ್ಜನ್ಯಕ್ಕೆ ಸಂಬಂಧಿಸಿ ಯಾವುದೇ ದೂರುದಾರರು ರಾಜಿ ಸಂಧಾನಕ್ಕೆ ಮುಂದಾಗದೆ ಠಾಣೆಗೆ ತೆರಳಿ ದೂರು ನೀಡಬಹುದು ಎಂದರು.

ದಲಿತ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿ ಗಂಭೀರ ಸಾಕ್ಷಿಗಳ ಅಗತ್ಯವಿದೆ. ಸಾಕ್ಷ್ಯಾಧಾರಗಳು ಪೂರಕವಾಗಿದ್ದರೆ ಮಾತ್ರ ಆರೋಪಿಗಳಿಗೆ ಶಿಕ್ಷೆಯಾಗಲು ಸಾಧ್ಯ. ಆದರೆ ಬಹುತೇಕ ಪ್ರಕರಣಗಳಲ್ಲಿ ದೂರುದಾರರು ರಾಜಿ ಸಂಧಾನ ಮಾಡುತ್ತಿರುವುದರಿಂದ ಹಿನ್ನಡೆಯಾಗುತ್ತಿದೆ ಎಂದು ಎಸ್ಪಿ ಡಾ.ಶರಣಪ್ಪ ಅಭಿಪ್ರಾಯಪಟ್ಟರು.

scsct_comisner_sabhe_2

ಪತ್ರಿಕೆಯೊಂದರಲ್ಲಿ ಬಳಸಬಾರದ ಪದ ಬಳಸಿದ ಬಗ್ಗೆ ಏನಾಯಿತು? ಎಂದು ದಲಿತ ಮುಖಂಡ ಎಸ್.ಪಿ.ಆನಂದ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ಅಧಿಕಾರಿ ರಾಹುಲ್, ‘ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟ್‌ನಿಂದ ತಡೆಯಾಜ್ಞೆಯಿದೆ. ಬಳಸಬಾರದ ಪದದ ಬಗ್ಗೆ ಜಾಗೃತಿ ಅಭಿಯಾನಕ್ಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ’ ಎಂದರು.

ಅಜಲು ಪದ್ಧತಿಯ ಬಗ್ಗೆ ಪೊಲೀಸ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಜಂಟಿಯಾಗಿ ಜಾಗೃತಿ ಮೂಡಿಸಬೇಕು ಎಂದು ರಘು ಒತ್ತಾಯಿಸಿದರು.
ದಲಿತ ಕಾಲನಿ, ಶಾಲೆ, ವಸತಿ ನಿಲಯಗಳಿಗೆ ಪೊಲೀಸ್ ಇಲಾಖೆ ಭೇಟಿ ನೀಡಿ ನ್ಯೂನತೆ ಪರಿಶೀಲಿಸಿ ಸಂಬಂಧಪಟ್ಟ ಇಲಾಖೆಗೆ ಸೂಚನೆ ನೀಡಬೇಕು ಎಂದು ದಲಿತ ಮುಖಂಡ ಗೋಪಾಲ ಕಾಡುಮಠ ಮನವಿ ಮಾಡಿದರು.

Write A Comment