ಕುಂದಾಪುರ: ನಗರದಲ್ಲಿ ನಡೆದ ಕಾರ್ಯಕ್ರಮಕ್ಕೆಂದು ಬಂದಿದ್ದ ರಾಜ್ಯದ ಆರೋಗ್ಯ ಸಚಿವ ಯು.ಟಿ ಖಾದರ್ ದಿಢೀರನೆ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ, ಆಸ್ಪತ್ರೆಯ ವಾರ್ಡ್‌ಗಳ ಪರಿಶೀಲನೆ ನಡೆಸುತ್ತಿದ್ದ ವೇಳೆ ರೋಗಿಯೊಬ್ಬರು ಮೃತ ಪಟ್ಟಿರುವುದನ್ನು ಖುದ್ದು ಸಚಿವರೇನೋಡಿರುವ ಅಪರೂಪದ ಘಟನೆ ಶನಿವಾರ ರಾತ್ರಿ ಕುಂದಾಪುರದಲ್ಲಿ ನಡೆದಿದೆ.
ರಾತ್ರಿ ಸುಮಾರು ೮ ಗಂಟೆಯ ವೇಳೆಗೆ ಆಸ್ಪತ್ರೆಗೆ ಭೇಟಿ ನೀಡಿದ ಸಚಿವರು ಕಚೇರಿಯ ಹಾಜರಾತಿ ಪುಸ್ತಕ, ರೋಗಿಗಳ ವಾರ್ಡ್ ಹಾಗೂ ಶವಾಗಾರಗಳ ವೀಕ್ಷಣೆ ನಡೆದ ಬಳಿಕ, ಸ್ಥಳೀಯ ವಿನಂತಿಯ ಮೇರೆಗೆ ವೈದ್ಯಕೀಯ ವಾರ್ಡ್‌ಗೆ ತೆರಳಿ ರೋಗಿಗಳು ಹಾಗೂ ರೋಗಿಗಳ ಸಂಬಂಧಿಕರೊಂದಿಗೆ ಮಾತುಕತೆ ನಡೆಸುತ್ತಿದ್ದ ವೇಳೆಯಲ್ಲಿ ವಿನಾಯಕ ಕೋಡಿಯ ನಿವಾಸಿ ಸೀನ ಗಾಣಿಗ ಎನ್ನುವವರ ದೇಹ ನಿಶ್ಚಲ ಸ್ಥಿತಿಯಲ್ಲಿ ಇರುವುದನ್ನು ಗಮನಿಸಿ ಡ್ಯೂಟಿ ಡಾಕ್ಟರ್ ಹಾಗೂ ದಾದಿಯರನ್ನು ಕರೆದು ಅವರ ದೇಹ ಸ್ಥಿತಿಯ ಪರಿಶೀಲನೆ ನಡೆಸಲು ಸೂಚಿಸಿದಾಗ ವ್ಯಕ್ತಿ ಮೃತ ಪಟ್ಟಿರುವುದನ್ನು ವೈದ್ಯರು ತಿಳಿಸಿದ್ದಾರೆ.
ಸಚಿವರು ಆಸ್ಪತ್ರೆಗೆ ಬರುತ್ತಿದ್ದಾರೆ ಎನ್ನುವ ಮಾಹಿತಿ ಪಡೆದು ಬಂದಿದ್ದ ಸ್ಥಳೀಯರು ಶವಾಗಾರ, ಶೀಥೀಲಿಕರಣ ವ್ಯವಸ್ಥೆ, ಕೆಲವು ವೈದ್ಯರು ಖಾಸಗಿ ಪ್ರಾಕ್ಟೀಸ್‌ಗೆ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ, ಅಂಬುಲೆನ್ಸ್ ವ್ಯವಸ್ಥೆ ಸರಿ ಇಲ್ಲ, ವೈದ್ಯರು ಇದ್ದರೂ ಸರಿಯಾದ ರೀತಿಯ ಸೇವೆಗಳು ದೊರಕುತ್ತಿಲ್ಲ ಎನ್ನುವ ದೂರುಗಳ ಸರಮಾಲೆಯನ್ನೆ ಸಚಿವರ ಮುಂದಿಟ್ಟರು.
ಆಸ್ಪತ್ರೆಯ ವ್ಯವಸ್ಥೆಯ ಬಗ್ಗೆ ಡ್ಯೂಟಿ ಡಾಕ್ಟರ್ ಡಾ.ಸವಿತಾ ಅವರನ್ನು ಪ್ರಶ್ನಿಸಿದಾಗ ತಬ್ಬಿಬ್ಬರಾದ ಆಕೆ ಸಚಿವರ ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರ ನೀಡಲು ತಡವರಿಸಿದರು.
ಇದೆ ವೇಳೆ ಹಾಜರಾತಿ ಪುಸ್ತಕವನ್ನು ನೋಡಿ ಕೆಂಡಾ ಮಂಡಲರಾದ ಸಚಿವರು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯಿರಿ ಹಾಗೂ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ಉದಯ್‌ಶಂಕರ ಅವರುಗಳಿಗೆ ದೂರವಾಣಿ ಕರೆ ಮಾಡಿ ಮಾತನಾಡಿದರು. ಹಾಜರಾತಿ ಪುಸ್ತಕದಲ್ಲಿ ಸಹಿ ಹಾಕದೆ ಖಾಲಿ ಇರುವ ಹಾಗೂ ನಾಳೆಯ ಸಹಿಯನ್ನು ಇಂದೆ ಹಾಕುವ ಪ್ರವೃತ್ತಿಗಳಿಗೆ ಕಡಿವಾಣ ಹಾಕುವಂತೆ ಸ್ವಷ್ಟ ಮಾತುಗಳಲ್ಲಿ ಸೂಚಿಸಿದರು.
ಇದೆ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು ಸುಸಜ್ಜಿತ ಕಟ್ಟಡ ಹಾಗೂ ಬೇಕಾದಷ್ಟು ವೈದ್ಯರು ಇರುವ ಆಸ್ಪತ್ರೆ ಇದಾಗಿದ್ದರೂ, ಇಲ್ಲಿನ ಅವ್ಯವಸ್ಥೆಯ ಕುರಿತು ಜನರು ನೀಡುವ ದೂರುಗಳನ್ನು ಕೇಳುವಾಗ ಬೇಸರವಾಗುತ್ತದೆ. ಈ ಅವ್ಯವಸ್ಥೆಗಳನ್ನು ಸರಿ ಪಡಿಸಲು ಜಿಲ್ಲಾ ಆರೋಗ್ಯಾಧಿಕಾರಿಯವರಿಗೆ ಸೂಚಿಸಲಾಗಿದ್ದು, ಇಲಾಖೆ ಇಲ್ಲಿನ ಅವ್ಯವಸ್ಥೆಯನ್ನು ಸರಿ ಪಡಿಸಲು ಗಮನ ಹರಿಸಲಿದೆ ಎಂದು ತಿಳಿಸಿದರು.
ಉಡುಪಿಯ ರಕ್ತ ನಿಧಿ ಡಾ.ಶರತ್‌ಕುಮಾರ ಅವರ ಅಮಾನತು ಪ್ರಕರಣದ ಕುರಿತು ಪ್ರಾಸ್ತಾಪ ಮಾಡಿದ ಅವರು ನಾವು ಅಧಿಕಾರಕ್ಕೆ ಬರುವ ಮೊದಲೆ ಈ ಪ್ರರಕರಣ ನಡೆದಿದ್ದು, ಇದನ್ನು ಬಗೆ ಹರಿಸಲು ಸ್ವತ: ನಾನು ಆಸಕ್ತಿ ವಹಿಸಿ ಕಡತವನ್ನು ಇಲಾಖಾ ಕಾರ್ಯದರ್ಶಿಯವರಿಗೆ ಕಳುಹಿಸಿದ್ದೆ, ಈ ನಡುವೆ ಅವರು ನ್ಯಾಯಾಲಯದ ಮೊರೆ ಹೋಗಿದ್ದರಿಂದ ನಾವು ನ್ಯಾಯಾಲಯದ ಆದೇಶವನ್ನು ಕಾಯುವ ಸ್ಥಿತಿ ನಿರ್ಮಾಣವಾಗಿದೆ ಇದರಲ್ಲಿ ಸರ್ಕಾರದ ತಪ್ಪಿಲ್ಲ ಅವರ ಆತುರತೆಯಿಂದಾಗಿ ಮುಂದಿನ ಕ್ರಮ ಕೈಗೊಳ್ಳುವುದು ವಿಳಂಭವಾಗಿದೆ ಎಂದು ಸಮಜಾಯಿಕೆ ನೀಡಿದರು.
ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆ ಹಾಗೂ ಸಮಸ್ಯೆಗಳನ್ನು ನೇರವಾಗಿ ಇಲಾಖಾ ಮುಖ್ಯಸ್ಥರ ಗಮನಕ್ಕೆ ತರಲು ಅನೂಕೂಲವಾಗುವಂತೆ ದೇಶದಲ್ಲಿಯೇ ಮೊದಲ ಬಾರಿಗೆ ‘ಹೆಲ್ತ್ ಇಸನ್’ ಮೊಬೈಲ್ ಆಪ್ ಒಂದನ್ನು ಪರಿಚಯಿಸುವ ಪ್ರಾಸ್ತಾಪ ಇಲಾಖೆಯ ಮುಂದಿದ್ದು ಶೀಘ್ರದಲ್ಲಿ ಈ ಯೋಜನೆ ಜಾರಿಗೆ ಬರಲಿದೆ. ರಾಜ್ಯದ ಆರೋಗ್ಯ ಇಲಾಖೆಯಲ್ಲಿನ ಸಿಬ್ಬಂದಿಗಳ ತುಂಬಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಹೈದರ್‌ಬಾದ್-ಕರ್ನಾಟಕ ಭಾಗಕ್ಕೆ ಮೀಸಲಾತಿ ನಿಗದಿ ಪಡಿಸುವ ತೀರ್ಮಾನದಿಂದಾಗಿ ನೇಮಕಾತಿ ವಿಳಂಭವಾಗಿದ್ದು, ಇದೀಗ ನೇಮಕಾತಿಗಾಗಿ ಲೋಕಸೇವಾ ಆಯೋಗಕ್ಕೆ ಮನವಿ ಮಾಡಿಕೊಳ್ಳಲಾಗಿದೆ. ಗ್ರಾಮೀಣ ಭಾಗಗಳು ಸೇರಿದಂತೆ ರಾಜ್ಯದ ಎಲ್ಲ ಆಸ್ಪತ್ರೆಗಳಿಗೂ ವೈದ್ಯಾಧಿಕಾರಿಗಳನ್ನು ನೇಮಕ ಮಾಡಲು ಅನೂಕೂಲವಾಗುವಂತೆ ಪ್ರತಿ ವರ್ಷವೂ ವೈದ್ಯರ ನೇಮಕಾತಿ ನಡೆಸುವ ಚಿಂತನೆಗಳು ಸರ್ಕಾರದ ಮುಂದಿದೆ ಎಂದು ಸಚಿವ ಖಾದರ್ ಇದೆ ಸಂದರ್ಭದಲ್ಲಿ ತಿಳಿಸಿದರು.
ಕುಂದಾಪುರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ವಿಕಾಸ ಹೆಗ್ಡೆ, ಪುರಸಭಾ ಸದಸ್ಯ ಶ್ರೀಧರ ಶೇರುಗಾರ, ಸ್ಥಳೀಯ ಪ್ರಮುಖರಾದ ವಿನೋದ ಕ್ರಾಸ್ತಾ, ಚಂದ್ರಶೇಖರ ಶೆಟ್ಟಿ, ಶಿವರಾಮ ಪುತ್ರನ್, ಶಿವಾನಂದ, ಬಸ್ಸು ನಿರ್ವಾಹಕ ಸಂಘಟನೆಯ ಶಿವ ಮುಂತಾದವರು ಇದ್ದರು.
