ಮಂಗಳೂರು: ಶಕ್ತಿನಗರದ ಬಳಿ ಇತ್ತೀಚಿಗೆ ಬರ್ಬರವಾಗಿ ಹತ್ಯೆಗೀಡಾದ ಸ್ವಯಂ ಘೋಷಿತ ಡಾನ್ ಹಮೀದ್ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ನಾಗುರಿಯ ಮನೋಜ್ ಹಾಗೂ ಅಭಿಷೇಕ್ ಎಂಬವರನ್ನು ಈ ಕೊಲೆ ಕೃತ್ಯಕ್ಕೆ ಸಂಬಧಿಸಿದಂತೆ ಬಂಧಿಸಲಾಗಿದೆ. ಹಾಗೂ ಈ ಕೊಲೆ ಪ್ರಕರಣದ ಪ್ರಮುಖ ಆರೋಪಿ ಮರೋಳಿಯ ಹರೀಶ್ ಎಂಬಾತ ತಲೆಮರೆಸಿಕೊಂಡಿದ್ದಾನೆ ಎನ್ನಲಾಗುತ್ತಿದೆ.
ಅಕ್ಟೋಬರ್ 7ರಂದು ಹಮೀದ್ನನ್ನು ಶಕ್ತಿನಗರದ ವೈದ್ಯನಾಥ ದೇವಸ್ಥಾನದ ಬಳಿಯ ಜೋಕುಲ್ಸಾನ ಎಂಬಲ್ಲಿ ರಾತ್ರಿ 8.30ರ ಸುಮಾರಿಗೆ ಕರುಳು ಕಿತ್ತುಬರುವಂತೆ ಕೊಚ್ಚಿ ಹತ್ಯೆ ಮಾಡಲಾಗಿತ್ತು. ಹಮೀದ್ ಹಾಗೂ ಹರೀಶನ ನಡುವೆ ನಡೆದ 40ಲಕ್ಷದ ವ್ಯವಹಾರಕ್ಕೆ ಸಂಬಂಧಿಸಿದಂತೆ ಈ ಹತ್ಯೆ ನಡೆದಿತ್ತು ಎನ್ನಲಾಗಿದೆ.
ಹರೀಶನಲ್ಲಿ ಹಮೀದ್ ಲಕ್ಷಾಂತರ ರೂ. ಸಾಲ ಮಾಡಿದ್ದು, ಇದನ್ನು ವಾಪಾಸು ಕೇಳಲು ಹೋದಾಗ ಹಮೀದ್ ಹಣ ವಾಪಾಸು ಕೊಡುವುದಿಲ್ಲ ಎಂದಿದ್ದು ಮಾತ್ರವಲ್ಲದೆ ಹರೀಶನ ಜಾತಿ ನಿಂದನೆ ಮಾಡಿ ಜೀವ ಬೆದರಿಕೆಯನ್ನೂ ಒಡ್ಡಿದ್ದ. ಈ ಅಂಶವೇ ಡಾನ್ ಹಮೀದನ ಹತ್ಯೆಗೆ ಪ್ರಮುಖ ಕಾರಣವಾಗಿತ್ತು.
ಹತ್ಯೆ ಮಾಡಿದ ತಂಡ ನಗರದಲ್ಲೇ ತಿರುಗಾಡಿಕೊಂಡಿತ್ತು. ಪೊಲೀಸರು ಹತ್ಯೆ ನಡೆದ ಎರಡು ದಿನದ ಬಳಿಕ ಅಭಿಷೇಕ್ ಮತ್ತು ಮತ್ತೋರ್ವನನ್ನು ಬಂಧಿಸುವಲ್ಲಿ ಕಂಕನಾಡಿ ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಖಚಿತ ಮಾಹಿತಿಯಿಂದ ತಿಳಿದು ಬಂದಿದೆ. ಆದರೆ ಆರೋಪಿಗಳ ಬಂಧನದ ಬಗ್ಗೆ ಪೊಲೀಸರು ಯಾವೂದೇ ಮಾಹಿತಿಯನ್ನು ಇನ್ನೂ ಖಚಿತ ಪಡಿಸಿಲ್ಲ.
