ಬೆಳ್ತಂಗಡಿ, ಅ. 10: ಪಾಂಗಳ ನಿವಾಸಿ ಎಸ್ಡಿಎಂ ಕಾಲೇಜ್ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಎರಡು ವರ್ಷವಾದ ಹಿನ್ನೆಲೆಯಲ್ಲಿ ನಡೆಸಲಾದ ನವಚಂಡಿಕಾ ಯಾಗವು ಪೂರ್ಣಗೊಂಡಿದೆ.
ಪ್ರಜಾಪ್ರಭುತ್ವ ವೇದಿಕೆಯು ಈಶ ವಿಠಲದಾಸ ಸ್ವಾಮೀಜಿಗಳ ನೇತೃತ್ವದಲ್ಲಿ ಬೆಳ್ತಂಗಡಿಯ ತಾಲೂಕು ಮೈದಾನದಲ್ಲಿ ಶುಕ್ರವಾರ ನವಚಂಡಿಕಾ ಯಾಗ ಏರ್ಪಡಿಸಿತ್ತು. ಚಿಕ್ಕಮಗಳೂರಿನ ಆಧ್ಯಾತ್ಮ ಗುರು ಕೆ.ಎಸ್.ನಿತ್ಯಾನಂದ ನೇತೃತ್ವದಲ್ಲಿ ನಡೆದ ಯಾಗದಲ್ಲಿ ಸಾವಿರಾರು ಮಂದಿ ಸ್ತ್ರೀಯರು ಭಾಗವಹಿಸಿದ್ದರು.
ನವಚಂಡಿಕಾ ಯಾಗಕ್ಕಾಗಿ ತಾಲೂಕು ಮೈದಾನದಲ್ಲಿ ಸುಮಾರು 11 ಅಗ್ನಿಕುಂಡವನ್ನು ರಚಿಸಲಾಗಿತ್ತು. ಮರವೂರು ನಿತ್ಯಾನಂದಾಶ್ರಮ ಸ್ವಾಮೀಜಿ, ರಾಮಕೃಷ್ಣ ಆಶ್ರಮದ ಧರ್ಮ ವ್ರತಾನಂದ ಸ್ವಾಮೀಜಿ, ಕೊಲ್ಲೂರು ಧರ್ಮಪೀಠದ ಸ್ವಾಮೀಜಿ, ಸಾಧ್ವಿ ಗೀತಾನಂದಿನಿ, ಬಾಳೆಕೋಡಿ ಮಠದ ಶಶಿಕಾಂತ ಮಣಿ ಸ್ವಾಮೀಜಿ, ಸುಬ್ರಹ್ಮಣ್ಯದ ವಿದ್ಯಾಪ್ರಸನ್ನ ಸ್ವಾಮೀಜಿ, ಬಾಳೇಕುದ್ರುವಿನ ನರಸಿಂಹಾಶ್ರಮ ಸ್ವಾಮೀಜಿ, ಒಡಿಯೂರು ಮಠದ ಗುರುದೇವಾನಂದ ಸ್ವಾಮೀಜಿ, ಕೊಲ್ಲೂರು ದೇವಳದ ಪ್ರಧಾನ ಅರ್ಚಕ ಮಂಜುನಾಥ ಅಡಿಗ, ಕಾರಿಂಜ ಕ್ಷೇತ್ರದ ಮುಕ್ತಾನಂದ ಸ್ವಾಮೀಜಿ ಮತ್ತಿತರ ಸ್ವಾಮೀಜಿಗಳು ಯಾಗದಲ್ಲಿ ಪಾಲ್ಗೋಂಡು ಯಾಗವನ್ನು ಸಂಪೂರ್ಣಗೊಳಿಸಿದರು.
ಯಾಗಕ್ಕೆ ಸುಮಾರು 1008 ಮಂದಿ ಮುತ್ತೈದೆಯರು ಹವಿಸ್ಸನ್ನು ಅರ್ಪಿಸಿದ್ದಾರೆ. ಮುಂಜಾನೆ ಆರಂಭವಾದ ಯಾಗವು ಮಧ್ಯಾಹ್ನ ಪೂರ್ಣಗೊಂಡಿತು. ಯಾಗಕ್ಕೆ ಬಂದ ಭಕ್ತಾದಿಗಳಿಗಾಗಿ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು.

