ಕರಾವಳಿ

ಕಾಸರಗೋಡು: ರೈಲಿನಿಂದ ಬಿದ್ದು ವಿದ್ಯಾರ್ಥಿ ಮೃತ್ಯು

Pinterest LinkedIn Tumblr

shabeeb-3

ಕಾಸರಗೋಡು, ಅ.8: ರೈಲಿನಿಂದ ಬಿದ್ದು ವಿದ್ಯಾರ್ಥಿಯೋರ್ವ ಮೃತಪಟ್ಟ ದಾರುಣ ಘಟನೆ ಕುಂಬಳೆಯಲ್ಲಿ ಮಂಗಳವಾರ ಸಂಜೆ ನಡೆದಿದ್ದು, ಮೃತದೇಹ ಇಂದು ಬೆಳಗ್ಗೆ ಪತ್ತೆಯಾಗಿದೆ. ಮೃತ ವಿದ್ಯಾರ್ಥಿಯನ್ನು ಕೊರಕ್ಕೋಡು ಬಿಲಾಲ್ ಮಸೀದಿ ಸಮೀಪದ ಶಿಫಾ ಲ್ಯಾಂಡ್‌ನ ಅಹ್ಮದ್ ಶಬೀಬ್ (20) ಎಂದು ಗುರುತಿಸಲಾಗಿದೆ. ಈತ ಮಂಗಳೂರು ಶ್ರೀದೇವಿ ಕಾಲೇಜಿನ ಪ್ರಥಮ ವರ್ಷ ಇಂಟೀರಿಯಲ್ ಡಿಸೈನಿಂಗ್ ವಿದ್ಯಾರ್ಥಿ ಯಾಗಿದ್ದರು.

ಮಂಗಳವಾರ ಸಂಜೆ 4:30ರ ಸುಮಾರಿಗೆ ಈ ಘಟನೆ ನಡೆದಿತ್ತು. ಮಂಗಳೂರಿನಿಂದ ಕಾಸರಗೋಡಿಗೆ ಸಹಪಾಠಿಗಳ ಜೊತೆ ಚೆನ್ನೈಮೈಲ್ ರೈಲಿನಲ್ಲಿ ಬರುತ್ತಿದ್ದಾಗ ಆಕಸ್ಮಿಕವಾಗಿ ಬಿದ್ದು ಈ ದುರಂತ ಸಂಭವಿಸಿದೆನ್ನಲಾಗಿದೆ. ಉಪ್ಪಳ ತಲುಪಿದಾಗ ಮುಖತೊಳೆ ಯಲೆಂದು ತೆರಳಿದ್ದ ಶಬೀಬ್ ಹಲವು ಸಮಯ ಕಳೆದರೂ ಮರಳದಿದ್ದುದರಿಂದ ಸ್ನೇಹಿತರು ರೈಲಿನಲ್ಲಿ ಶೋಧ ನಡೆಸಿದರೂ ನಾಪತ್ತೆಯಾಗಿದ್ದರು.

ಈ ಸಂದರ್ಭದಲ್ಲಿ ಓರ್ವ ರೈಲಿನಿಂದ ಬಿದ್ದಿರುವುದನ್ನು ತಾನು ಗಮನಿಸಿರುವು ದಾಗಿ ಪ್ರಯಾಣಿಕನೋರ್ವ ತಿಳಿಸಿದ್ದು, ಅಷ್ಟಾಗಲೇ ರೈಲು ಕಾಸರಗೋಡು ನಿಲ್ದಾಣಕ್ಕೆ ತಲುಪಿತ್ತು. ಕಾಸರಗೋಡಿನಲ್ಲಿ ಇಳಿದ ಸಹಪಾಠಿಗಳು ಹಾಗೂ ಸ್ನೇಹಿತರು ರೈಲು ಹಳಿಯಲ್ಲಿ ಶೋಧ ನಡೆಸಿದ್ದರು. ಪೊಲೀಸರು ಹಾಗೂ ಅಗ್ನಿ ಶಾಮಕದಳದವರಿಗೆ ಮಾಹಿತಿ ನೀಡಲಾಗಿತ್ತು. ಕುಂಬಳೆ, ಶಿರಿಯಾ, ಮುಟ್ಟಂ ಮತ್ತು ಪೆರುವಾಡ್ ಮೊದಲಾದೆಡೆ ರೈಲು ಹಳಿ ಹಾಗೂ ಸಮೀಪದ ಪೊದೆ ಅಲ್ಲದೆ ಕುಂಬಳೆ, ಶಿರಿಯಾ, ಮೊಗ್ರಾಲ್ ಹೊಳೆಯಲ್ಲೂ ಶೋಧ ಕಾರ್ಯ ನಡೆಸಲಾಗಿತ್ತು. ಸುಮಾರು 300 ನಾಗರಿಕರು ಅಲ್ಲದೆ ಪೊಲೀಸರು, ಅಗ್ನಿ ಶಾಮಕದಳದವರು ಮುಂಜಾನೆ 4 ಗಂಟೆಯ ತನಕ ಶೋಧ ಕಾರ್ಯ ನಡೆಸಿದ್ದರು. ಈ ನಡುವೆ ಇಂದು ಮುಂಜಾನೆ 6:30ರ ಸುಮಾರಿಗೆ ಸ್ಥಳೀಯ ಮೀನುಗಾರರೋರ್ವರು ಮೃತದೇಹ ಪೊದೆಯಲ್ಲಿ ಸಿಲುಕಿರುವುದನ್ನು ಗಮನಿಸಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದರು.

ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಮೇಲಕ್ಕೆತ್ತಿ ಮಹಜರು ನಡೆಸಿದರು. ಬಳಿಕ ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ತಲೆ ಮತ್ತು ಕೈಗೆ ಗಂಭೀರ ಸ್ವರೂಪದ ಗಾಯ ಕಂಡುಬಂದಿದೆ. ಬಕ್ರೀದ್ ಕಳೆದು ಮಂಗಳವಾರವಷ್ಟೇ ಶಬೀಬ್ ಕಾಲೇಜಿಗೆ ತೆರಳಿದ್ದರು. ಮೃತ ಶಬೀಬ್ ತಂದೆ ತಾಯಿ ಹಾಗೂ ಸಹೋದರ ಸಹೋದರಿಯನ್ನು ಅಗಲಿದ್ದಾರೆ.

Write A Comment