ಕರಾವಳಿ

ಪಂಚಾಯತ್‌ರಾಜ್ ಕಾಯ್ದೆ ತಿದ್ದುಪಡಿ ಮೂಲಕ ಪಂಚಾಯತ್ ಆಡಳಿತವನ್ನು ಗಟ್ಟಿಗೊಳಿಸಲು ನಿರ್ಧಾರ: ಸಚಿವ ಎಚ್.ಕೆ. ಪಾಟೀಲ್

Pinterest LinkedIn Tumblr

ಕುಂದಾಪುರ: ಉಡುಪಿ ಜಿಲ್ಲೆಯ 30ಕ್ಕೂ ಹೆಚ್ಚು ಪಂಚಾಯತ್‌ಗಳಲ್ಲಿ ಸಂಪೂರ್ಣ ಶೌಚಾಲಯ ವ್ಯವಸ್ಥೆ ಇಲ್ಲ. ಆದ್ದರಿಂದ ಮುಂದಿನ ನಾಲ್ಕು ತಿಂಗಳಲ್ಲಿ ಈ ಕುರಿತು ಕಾರ್‍ಯಪ್ರವೃತ್ತರಾಗಿ ಜ.26 ರೊಳಗೆ ಉಡುಪಿ ಜಿಲ್ಲೆ ಸಂಪೂರ್ಣ ಶೌಚಾಲಯ ಹೊಂದಿದ ಜಿಲ್ಲೆಯಾಗಬೇಕು. ಈ ಮೂಲಕವಾಗಿ ಬಯಲು ಶೌಚಾಲಯ ಕೊನೆಗೊಳ್ಳಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.

ಅವರು ಅ.7 ರಂದು ಕೋಟ ಕಾರಂತ ಥೀಂ ಪಾರ್ಕನಲ್ಲಿ, ಕೋಟತಟ್ಟು ಗ್ರಾ.ಪಂ. ಡಾ.ಶಿವರಾಮ ಕಾರಂತ ಟ್ರಸ್ಟ್ ಮತ್ತು ಅನೇಕ ಸಂಘ ಸಂಸ್ಥೆಗಳ ವತಿಯಿಂದ ನಡೆಯುತ್ತಿರುವ ಕಾರಂತ ಹುಟ್ಟೂರು ಪ್ರಶಸ್ತಿ ಪ್ರಧಾನ ಕಾರ್ಯಕ್ರಮದ 7ನೇ ದಿನ ಅ.7ರಂದು ನಡೆದ ಪಂಚಾಯತ್ ಹಬ್ಬ “ಸುರಾಜ್ಯ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

H.K. Patil visit Kota

ಪಂಚಾಯತ್ ಆಡಳಿತವನ್ನು ಜನಪರಗೊಳಿಸಲು ಗ್ರಾಮಪಂಚಾಯತ್ ಅಧ್ಯಕ್ಷರಿಗೆ ಪಿ.ಡಿ.ಓಗಳ ಕಾರ್‍ಯನಿರ್ವಹಣೆ ಕುರಿತು ವರದಿ ತಯಾರಿಸುವ ಹಾಗೂ ತಾ.ಪಂ, ಜಿ.ಪಂ ಅಧ್ಯಕ್ಷರಿಗೆ ಅವರ ಮುಖ್ಯಾಧಿಕಾರಿಗಳ ಕಾರ್‍ಯ ನಿರ್ವಹಣೆ ಕುರಿತು ವರದಿ ತಯಾರಿಸುವ ಮಹತ್ವದ ಹೊಣೆಗಾರಿಕೆ ನೀಡಲಾಗುವುದು, ಪಂಚಾಯತ್ ಸದಸ್ಯರಿಗೆ ಗೌರವಧನ ಬಾಕಿ ಇದ್ದು, ನವೆಂಬರ್ ಅಂತ್ಯದೊಳಗೆ ಅದನ್ನು ಸರಕಾರ ಜಾರಿಗೊಳಿಸಿದ ಹೆಚ್ಚುವರಿ ಗೌರವಧನ ಸಹಿತ ಪಾವತಿಸಲಾಗುವುದು ಎಂದರು.

ಪಂಚಾಯತ್‌ರಾಜ್ ಕಾಯ್ದೆ ತಿದ್ದುಪಡಿ ಮೂಲಕ ಪಂಚಾಯತ್ ಆಡಳಿತವನ್ನು ಗಟ್ಟಿಗೊಳಿಸಲು ನಿರ್ಧರಿಸಿದ್ದು, ಗಾಂಧಿ ಕನಸಿನ ಗ್ರಾಮ ಸ್ವರಾಜ್ಯಕ್ಕಾಗಿ ತ್ಯಾಜ್ಯ ಮುಕ್ತ, ವ್ಯಸನ ಮುಕ್ತ ಗ್ರಾಮ ನಿರ್ಮಿಸಬೇಕಿದೆ ಎಂದರು.

ಕೋಟತಟ್ಟು ಗ್ರಾ.ಪಂ ಅಧ್ಯಕ್ಷೆ ಶೋಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸವಿತಾ ಶಿವಾನಂದ ಕೋಟ್ಯಾನ್, ತಾ.ಪಂ ಅಧ್ಯಕ್ಷೆ ಸುನಿತಾ ನಾಯ್ಕ್, ಉಡುಪಿ ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕನಗವಲ್ಲಿ, ಕುಂದಾಪುರ ತಾ.ಪಂ ಅಧ್ಯಕ್ಷ ಭಾಸ್ಕರ್ ಬಿಲ್ಲವ, ಜಯ ಕುಮಾರ್, ಕಾಂಗ್ರೆಸ್ ಮುಖಂಡ ಎಂ.ಎ ಗಪೂರ್, ಮಾಜಿ ಜಿ.ಪಂ ಸದಸ್ಯ ಶಂಕರ್ ಕುಂದರ್, ಪಂಚಾಯತ್ ಸಿಬಂದಿಗಳಾದ ಉಮೇಶ, ಶ್ರೀಧರ ಗಾಣಿಗ, ಬಾಬು ಶ್ರೀಯಾನ್, ರವಿ, ಶೈಲಜಾ,ಜಯಲಕ್ಷ್ಮೀ ಉಪಸ್ಥಿತರಿದ್ದರು.

ದ.ಕ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಅತ್ಯುತ್ತಮ ಪರಿಣಾಮಕಾರಿ ಆಡಳಿತ ನೀಡಿದ ಸುಳ್ಯ ತಾಲೂಕಿನ ಐರ್ವನಾಡು, ಬೆಳ್ತಂಗಡಿ ತಾಲೂಕಿನ ಲಾಯಿಲ, ಉಡುಪಿ ತಾಲೂಕು ತೆಂಕ ಗ್ರಾ.ಪಂ, ಕುಂದಾಪುರ ತಾಲೂಕಿನ ತಲ್ಲೂರು ಗ್ರಾ.ಪಂ, ಕುಂದಾಪುರ ತಾಲೂಕು ಮರವಂತೆ ಗ್ರಾ.ಪಂಗಳಿಗೆ ಸಮಗ್ರ ಆಡಳಿತ, ಘನತ್ಯಾಜ್ಯ ವಿಲೇವಾರಿ, ಸಮಗ್ರ ಆಡಳಿತದ ನೆಲೆಯಲ್ಲಿ ಅತ್ಯುತ್ತಮ ಗ್ರಾ.ಪಂ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರಾಸ್ತಾವಿಕ ಮಾತನಾಡಿ, ಪ್ರತಿಷ್ಠಾನದ ಕಾರ್ಯಧ್ಯಕ್ಷ ಆನಂದ್ ಸಿ.ಕುಂದರ್ ಸ್ವಾಗತಿಸಿ, ಡಾ.ಸೂರ್‍ಯನಾರಯಣ ಉಪಾದ್ಯ ನಿರೂಪಿಸಿ, ಪಿ.ಡಿ.ಓ ಜಯರಾಮ್ ಶೆಟ್ಟಿ ವಂದಿಸಿದರು.

Write A Comment