ಕರಾವಳಿ

ಕದ್ರಿ ಹಾಗೂ ಉರ್ವಾ ಪೊಲೀಸರ ವಿಶೇಷ ಕಾರ್ಯಾಚರಣೆ : ನಗರದಲ್ಲಿ ನಡೆದ ಎರಡು ಕೊಲೆ ಪ್ರಕರಣದ ಆರೋಪಿಗಳು ಹಾಗೂ ಐವರು ಕುಖ್ಯಾತ ಹೆದ್ದಾರಿ ದರೋಡೆಕೋರರ ಸೆರೆ

Pinterest LinkedIn Tumblr
polish_press_meet_5
ಉರ್ವಾ ಪೊಲೀಸರ ವಿಶೇಷ ಕಾರ್ಯಾಚರಣೆ : ನಗರದಲ್ಲಿ ನಡೆದ ಎರಡು ಕೊಲೆ ಪ್ರಕರಣದ ಆರೋಪಿಗಳ ಬಂಧನ _ ನಗದು, ಚಿನ್ನದ ಸರ, ರಿವಾಲ್ವರ್, ಬುಲೆಟ್ ವಶ

ಮಂಗಳೂರು: ಉರ್ವಾ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯೊಂದರಲ್ಲಿ ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನೇಕ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಹಾಗೂ ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಎರಡು ಕೊಲೆ ಪ್ರಕರಣಗಳ ಆರೋಪಿಗಳನ್ನು ಬಂಧಿಸಿದ್ದಾರೆ.

ಬಿಜೈ ಚಂದ್ರಿಕಾ ಲೇಔಟ್‌ನ ನೇತಾಜಿ ಸುಭಾಶ್ಚಂದ್ರ ಬೋಸ್ ರಸ್ತೆಯ ‘ವಜ್ರ’ ಮನೆ ನಿವಾಸಿ, ಮೆಸ್ಕಾಂನ ಎಕ್ಸಿಕ್ಯೂಟಿವ್ ಎಂಜಿನಿಯರ್ ಜಗದೀಶ್ ರಾವ್ ಕೆ.(56) ಹಾಗೂ ಅಳಕೆಯ ಮನೆಯೊಂದರಲ್ಲಿ ವಾಸಿಸುತ್ತಿದ್ದ ವೃದ್ದೆ ಮಹಿಳೆಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಅವರಿಂದ ಚಿನ್ನದ ಸರ, ರಿವಾಲ್ವರ್, 16 ಬುಲೆಟ್, ಮತ್ತು ನಗದು ರೂ. 5000 ವಶಪಡಿಸಿಕೊಂಡಿದ್ದಾರೆ. ಬಂಧಿತರು ನಗರದ ವಿವಿಧ ಫೈನಾನ್ಸ್ ಸಂಸ್ಥೆಗಳಲ್ಲಿ ಅಡವಿರಿಸಿರುವ ಚಿನ್ನಾಭರಣ ವಶಪಡಿಸಿಕೊಳ್ಳಲು ಬಾಕಿಯಿದೆ ಎಂದು ಮಂಗಳೂರು ನಗರ ಪೊಲೀಸ್ ಅಯುಕ್ತ ಆರ್.ಹಿತೇಂದ್ರ ಅವರು ತಿಳಿಸಿದ್ದಾರೆ.

polish_press_meet_1

ಸೋಮವಾರ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ವಿವರ ನೀಡಿದ ಅವರು, ಬಂಧಿತರನ್ನು ಬೆಳಗಾಂ ಜಿಲ್ಲೆಯ ಸವದತ್ತಿ ತಾಲೂಕಿನ ಇನಾಂಗೋವನಕೊಪ್ಪ ನಿವಾಸಿ ಸಿದ್ದಪ್ಪ ಯಾನೆ ಸಿದ್ದು (22) ಹಾಗೂ ದಾವಣಗೆರೆ ಜಿಲ್ಲೆಯ ಸಯ್ಯದ್ ಫೀರ್ ಬಡಾವಣೆ, ನಿಟ್ಟೋಳಿ ನಿವಾಸಿ ಮುರ್ತುಜ ಖಾದ್ರಿ ಅಲಿಯಾಸ್ ರಫೀಕ್ (27) ಎಂದು ಹೆಸರಿಸಲಾಗಿದೆ. ಇವರು ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದಾಗ ಉರ್ವಾ ಠಾಣಾ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು ಈ ವೇಳೆ ನಗರದ ಅಳಕೆಯಲ್ಲಿ ನಡೆದಿದ್ದ ವೃದ್ಧೆ ಮಹಿಳೆಯ ಹಾಗೂ ಕದ್ರಿಯಲ್ಲಿ ನಡೆದಿದ್ದ ಮೆಸ್ಕಾಂ ಇಂಜಿನಿಯರ್ ಕೊಲೆಯನ್ನು ತಾವೇ ಮಾಡಿರುವುದಾಗಿ ಬಾಯ್ಬಿಟ್ಟಿದ್ದಾರೆ ಎಂದು ಹೇಳಿದರು.

ಇವರಿಬ್ಬರ ಬಂಧನದಿಂದ ನಗರದಲ್ಲಿ ನಡೆದ ಕೊಲೆ ಪ್ರಕರಣ, ಒಂದು ಶಸ್ತ್ರಾಸ್ತ್ರ ಕಳವು ಪ್ರಕರಣ, ಹಾಗೂ ಹಲವಾರು ಮನೆ ಕಳವು ಪ್ರಕರಣಗಳು ಸೇರಿದಂತೆ ನಗರದ ಬರ್ಕೆ ಠಾಣೆ, ಉರ್ವಾ ಠಾಣೆ, ಪೂರ್ವ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಹಲವಾರು ಪ್ರಕರಣಗಳು ಬೆಳಕಿಗೆ ಬಂದಿದೆ ಎಂದರು.

polish_press_meet_8

ಕೊಲೆ ಪ್ರಕರಣ – 1

ಆಗಸ್ಟ್ 1ರಂದು ಕುದ್ರೊಳಿ ಸಮೀಪದ ಅಳಕೆ ಎಂಬಲ್ಲಿ ಸುಶೀಲಾ(75) ಎಂಬ ವೃದ್ಧೆಯನ್ನು ಕತ್ತು ಸೀಳಿ ಕೊಲೆಗೈಯಲಾಗಿತ್ತು. ಈ ಪ್ರಕರಣದ ಆರೋಪಿಗಳು ಸಿಕ್ಕಿಬಿದ್ದಿರಲಿಲ್ಲ. ಪೊಲೀಸರು ತನಿಖೆ ನಡೆಸುತ್ತಿರುವಂತೆಯೇ ಸೆ.20ರಂದು ಕದ್ರಿಯ ಮೆಸ್ಕಾಂ ಆಫೀಸರ್ ಜಗದೀಶ್ ರಾವ್ ಅವರನ್ನು ಮನೆಯಲ್ಲೇ ಕತ್ತು ಸೀಳಿ ಕೊಲೆಗೈಯಲಾಗಿತ್ತು.

polish_press_meet_4

ಕೊಲೆ ಪ್ರಕರಣ – 2:

ಸೆ.20ರಂದು ಮಧ್ಯೆ ರಾತ್ರಿ 1.45ರ ಹೊತ್ತಿಗೆ ಬಿಜೈ ಚಂದ್ರಿಕಾ ಲೇಔಟ್‌ನ ನೇತಾಜಿ ಸುಭಾಶ್ಚಂದ್ರ ಬೋಸ್ ರಸ್ತೆಯ ‘ವಜ್ರ’ ಮನೆ ನಿವಾಸಿ, ಮೆಸ್ಕಾಂನ ಎಕ್ಸಿಕ್ಯೂಟಿವ್ ಎಂಜಿನಿಯರ್ ಜಗದೀಶ್ ರಾವ್ ಅವರ ಕೊಲೆ ನಡೆದಿದೆ. ಜಗದೀಶ್ ರಾವ್ ಹಾಗೂ ಪತ್ನಿ ಭಾರತೀ ಅವರು ಮಾತ್ರ ಮನೆಯಲ್ಲಿ ವಾಸಿಸುತ್ತಿದ್ದರು. ಮಧ್ಯೆ ರಾತ್ರಿ ವೇಳೆ ಪತಿ ಕಿರುಚಾಡಿರುವುದನ್ನು ಕೇಳಿ ತಕ್ಷಣ ಎಚ್ಚರಗೊಂಡ ಭಾರತೀ ಲೈಟ್ ಹಾಕಿ ನೋಡಿದರು.

ರಕ್ತದ ಮಡುವಿನಲ್ಲಿ ಪತಿ ಬಿದ್ದಿದ್ದರೆ ಇಬ್ಬರು ಅಪರಿಚಿತರು ಮೇಲಿನ ಮಹಡಿಯ ಮೂಲಕ ಓಡಿ ಹೋಗುತ್ತಿರುವುದು ಕಂಡುಬಂದಿದ್ದು, ತಕ್ಷಣ ನೆರೆಮನೆಯ ವೈದ್ಯ ಡಾ.ಗಣಪತಿ ಭಟ್ ಅವರಿಗೆ ಫೋನ್ ಮಾಡಿ ತಿಳಿಸಿದರು. ನೆರೆಮನೆಯವರು ಆಗಮಿಸುವಷ್ಟರಲ್ಲಿ ಜಗದೀಶ್ ರಾವ್ ಮೃತಪಟ್ಟಿದ್ದರು. ಹರಿತವಾದ ಚೂರಿಯಿಂದ ಕುತ್ತಿಗೆ ಬಳಿ ಇರಿದು ಜಗದೀಶ್ ಅವರ ಕೊಲೆ ಮಾಡಲಾಗಿತ್ತು. ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮೇಲ್ನೋಟಕ್ಕೆ ಎರಡೂ ಕೊಲೆಗಳನ್ನು ಒಂದೇ ತಂಡ ಮಾಡಿರಬೇಕೆಂದು ಶಂಕಿಸಿರುವ ಪೊಲೀಸರು ವಿಶೇಷ ತನಿಖೆ ಮೂಲಕ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪೊಲೀಸ್ ಅಯುಕ್ತಕರು ತಿಳಿಸಿದ್ದಾರೆ.

polish_press_meet_9

ಕಳ್ಳತನಕ್ಕೆ ಪ್ರತಿರೋಧ ತೋರಿದರೆ ಹತ್ಯೆ..!

ಬಂಧಿತ ಆರೋಪಿಗಳಲ್ಲಿ ಸಿದ್ದಪ್ಪ ಮೆಸ್ಕಾಂ ಆಫೀಸರ್ ಜಗದೀಶ್ ರಾವ್ ಅವರ ಮನೆಗೆ ಕಳ್ಳತನಕ್ಕೆ ಬಂದಿದ್ದ. ಈ ವೇಳೆ ಜಗದೀಶ್ ರಾವ್ ಎಚ್ಚರಗೊಂಡಿದ್ದು ಕಳ್ಳತನಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಅಷ್ಟರಲ್ಲಿ ಸಿದ್ದಪ್ಪ ಅವರ ಕತ್ತುಸೀಳಿ ಕೊಲೆಗೈದು ಪರಾರಿಯಾಗಿದ್ದ. ಇದೇ ರೀತಿ ಸಿದ್ದಪ್ಪ ಹಾಗೂ ರಫೀಕ್ ಉರ್ವಾ ಠಾಣಾ ವ್ಯಾಪ್ತಿಯ ಅಳಿಕೆ ನಿವಾಸಿ ಸುಶೀಲಾ ಮನೆಗೆ ರಾತ್ರಿ ವೇಳೆ ನುಗ್ಗಿದ್ದ. ಈ ವೇಳೆ ವೃದ್ಧೆ ಸುಶೀಲಾ ಪ್ರತಿರೋಧ ವ್ಯಕ್ತಪಡಿಸಿದ್ದು, ಹಂತಕರು ಅವರನ್ನು ಕೊಲೆಗೈದು ಅವರ ಮನೆಯಲ್ಲಿದ್ದ ಕಾರ್ ಸಮೇತ ಪರಾರಿಯಾಗಿದ್ದರು. ಮರುದಿನ ಕಾರನ್ನು ಬಿಜೈ ಕೆ.ಎಸ್.ಆರ್.ಟಿ.ಸಿ ಬಳಿಯ ಟಾಟಾ ಶೋರೂಂ ಬಳಿ ಪತ್ತೆಹಚ್ಚಲಾಗಿತ್ತು. ಕಳ್ಳತನಕ್ಕೆ ಹೊಂಚುಹಾಕಿ ಮನೆಮಂದಿ ಎಚ್ಚರಗೊಂಡು ಪ್ರತಿರೋಧ ವ್ಯಕ್ತಪಡಿಸಿದರೆ ಅವರನ್ನು ಕೊಂದು ಪರಾರಿಯಾಗುವುದನ್ನು ಹಂತಕರು ಕರಗತ ಮಾಡಿಕೊಂಡಿದ್ದರು ಎಂದು ಕಮಿಷನರ್ ಹೇಳಿದರು.

ಪೊಲೀಸ್ ಕಮಿಷನರ್ ಹಿತೇಂದ್ರ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಉಪ‌ಆಯುಕ್ತರಾದ ಕೆ.ವಿ.ಜಗದೀಶ್, ಎನ್.ವಿಷ್ಣುವರ್ಧನ ಮತ್ತು ಸಹಾಯಕ ಪೊಲೀಸ್ ಆಯುಕ್ತ ತಿಲಕಚಂದ್ರ ಅವರ ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಉರ್ವಾ ಪೊಲೀಸ್ ನಿರೀಕ್ಷಕ ರಾಮಚಂದ್ರ ಮಾಳೇದವರ್, ಪೊಲೀಸ್ ಉಪನಿರೀಕ್ಷಕ ಪೂವಪ್ಪ ಹೆಚ್.ಎಂ., ವಿಶಾಲಾಕ್ಷಿ, ಎ‌ಎಸ್‍ಐ ಕರುಣಾಕರ, ಸಿಬ್ಬಂದಿ ಓಂದಾಸ್, ಸುಧಾಕರ್, ಮನೋಹರ, ಸಂತೋಷ್ ಸಸಿಹಿತ್ಲು, ಪ್ರಮೋದ್ ಮೇರಿಹಿಲ್, ಕೇಶವ, ಕಿಶೋರ್, ರವಿ, ಕಾಂತರಾಜ್, ಮಂಜುನಾಥ್, ರಾಮಾಂಜನೇಯ, ನಾಗರಾಜ್ ಹಾಗೂ ಸಂತೋಷ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಕದ್ರಿ ಪೊಲೀಸರ ಮಿಂಚಿನ ಕಾರ್ಯಾಚರಣೆ : ಐವರು ಕುಖ್ಯಾತ ಹೆದ್ದಾರಿ ದರೋಡೆಕೋರರ ಸೆರೆ:

ಮಂಗಳೂರು : ಕದ್ರಿ ಪೊಲೀಸರು ನಡೆಸಿದ ಮಿಂಚಿನ ಕಾರ್ಯಾಚರಣೆಯಲ್ಲಿ ಐವರು ಕುಖ್ಯಾತ ಹೆದ್ದಾರಿ ದರೋಡೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸೋಮವಾರ ಬೆಳಿಗ್ಗೆ ಕದ್ರಿ ಠಾಣಾ ಇನ್‌ಸ್ಪೆಕ್ಟರ್ ಟಿ.ಡಿ.ನಾಗರಾಜ್, ಪಿ.ಎಸ್.ಐ ರಫೀಕ್ ಹಾಗೂ ಎಸ್.ಎಚ್. ಭಜಂತ್ರಿ ಮತ್ತು ಸಿಬ್ಬಂದಿಗಳು ಗಸ್ತು ತಿರುಗುತ್ತಿದ್ದ ಸಂದರ್ಭ ಮರೋಳಿ ಜೋಡುಕಟ್ಟೆ ಸಮೀಪ ಅನುಮಾನಾಸ್ಪದವಾಗಿ ನಿಂತಿದ್ದ ಎರಡು ಕಾರುಗಳ ಬಗ್ಗೆ ಖಚಿತ ಮಾಹಿತಿ ಪಡೆದು ಪರಿಶೀಲನೆ ನಡೆಸಿದಾಗ ಕಾರಿನಲ್ಲಿ ದರೋಡೆಗೆ ಸಂಚು ಮಾಡುತ್ತಿದ್ದ ಐವರನ್ನು ಬಂಧಿಸಿದ್ದಾರೆ.

polish_press_meet_6

ಬಂಟ್ವಾಳ ತಾಲೂಕಿನ ಫರಂಗಿಪೇಟೆ-ಪುದು ಪುಂಚಮೆ ಹೌಸ್ ನಿವಾಸಿ ಮುಹಮ್ಮದ್ ಅಜೀಂ ಯಾನೆ ದಿಲ್‍ವಾಲ (21), ಕೃಷ್ಣಾಪುರ-ಕಾಟಿಪಳ್ಳ ಏಳನೇ ಬ್ಲಾಕ್ ನಿವಾಸಿ ಅಹಮ್ಮದ್ ಸಾದಿಕ್ ಯಾನೆ ಸಾದಿಕ್ (19), ಕಾಟಿಪಳ್ಳ ಎಂಟನೇ ಬ್ಲಾಕ್ ನಿವಾಸಿ ನಿಸಾರ್ ಹುಸೇನ್ ಯಾನೆ ನಿಚ್ಚು (23), ಕಾಟಿಪಳ್ಳ ಏಳನೇ ಬ್ಲಾಕ್ ನಿವಾಸಿ ಹಸನಬ್ಬ ಯಾನೆ ನೌಶಾದ್(23) ಹಾಗೂ ಕುಂದಾಪುರ ತಾಲೂಕಿನ ತೆಗ್ಗರ್ಸೆ ನಿವಾಸಿ ಶಶಿಧರ. ವೈ(30) ಎಂಬವರೇ ಬಂಧಿತರು.

polish_press_meet_3

ಬಂಧಿತರಿಂದ ಕೆ.ಎ. 19 ಎಂ.ಬಿ. 5607 ನಂಬ್ರದ ರಿಟ್ಜ್ ಕಾರ್, ಕೆ.ಎ. 19 ಪಿ. 9160 ನಂಬ್ರದ ಕಪ್ಪು ಬಣ್ಣದ ಅಲ್ಟೋ ಕಾರ್, ಐದು ಮಚ್ಚು, ಎರಡು ಮೆಣಸಿನ ಹುಡಿ ಪ್ಯಾಕೆಟ್, ನಾಲ್ಕು ಮೊಬೈಲ್ ಫೋನ್ ಹಾಗೂ ನಗದು ರೂ. 12,750 ನ್ನು ಪಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಮಂಗಳೂರು ನಗರ ಪೊಲೀಸ ಅಯುಕ್ತಕ ಆರ್.ಹಿತೇಂದ್ರ ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

polish_press_meet_7

ಬಂಧಿತರನ್ನು ತೀವ್ರವಾಗಿ ತನಿಖೆಗೆ ಒಳಪಡಿಸಿದಾಗ ಇವರು ಮಂಗಳೂರು ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಮೂರು ಹೆದ್ದಾರಿ ಸುಲಿಗೆ ಪ್ರಕರಣ, ಉಪ್ಪಿನಂಗಡಿ ಸಮೀಪದ ಉದನೆ ಎಂಬಲ್ಲಿ ನಡೆದ ಹೆದ್ದಾರಿ ಸುಲಿಗೆ ಪ್ರಕರಣ ಹಾಗೂ ಶಿರಾಡಿ ಬಳಿ ನಡೆದಿದ್ದ ಎರಡು ಹೆದ್ದಾರಿ ಸುಲಿಗೆ ಪ್ರಕರಣ ಸೇರಿದಂತೆ ಒಟ್ಟು ಏಳು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

polish_press_meet_2

ಆರೋಪಿಗಳು ಕಾರನ್ನು ಬಾಡಿಗೆಗೆ ಪಡೆದು ಮಾರಕಾಯುಧಗಳೊಂದಿಗೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕಾದು ಕುಳಿತು ಹೊರ ರಾಜ್ಯಕ್ಕೆ ತೆರಳುವವ ಸಂದರ್ಭದಲ್ಲಿ ರಸ್ತೆ ಬದಿಯಲ್ಲಿ ತಂಗುವ ಲಾರಿ ಚಾಲಕ ಹಾಗೂ ನಿರ್ವಾಹಕರನ್ನು ಮಾರಕಾಯುಧ ತೋರಿಸಿ ಹಣ ಹಾಗೂ ಇನ್ನಿತರ ಚಿನ್ನಾಭರಣಗಳನ್ನು ದರೋಡೆ ಮಾಡುತಿದ್ದು, ಈ ಬಾರಿ ಕೂಡ ಇಂತದೆ ಒಂದು ಯೋಜನೆ ಹಾಕಿ ದರೋಡೆ ಮಾಡಲು ಸಂಚು ಮಾಡುತ್ತಿದ್ದ ಸಂದರ್ಭದಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾರೆ ಎಂದು ಪೊಲೀಸ್ ಕಮಿಷನರ್ ವಿವರ ನೀಡಿದರು..

ಪೊಲೀಸ್ ಕಮಿಷನರ್ ಹಿತೇಂದ್ರ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಉಪ‌ಆಯುಕ್ತರಾದ ಕೆ.ವಿ.ಜಗದೀಶ್, ಎನ್.ವಿಷ್ಣುವರ್ಧನ ಮತ್ತು ಸಹಾಯಕ ಪೊಲೀಸ್ ಆಯುಕ್ತ ತಿಲಕಚಂದ್ರ ಅವರ ನೇತೃತ್ವದಲ್ಲಿ ಪತ್ತೆ ಕಾರ್ಯ ನಡೆದಿದ್ದು, ತನಿಖೆ ಮುಂದುವರಿದಿದೆ.

Write A Comment