ಕರಾವಳಿ

ವಿವಿಧ ಹಬ್ಬಗಳ ಆಚರಣೆಯ ಮುಂಜಾಗ್ರತೆಗಾಗಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶಾಂತಿ ಸಭೆ.

Pinterest LinkedIn Tumblr

dc_rai_santhisabhe_1

ಮಂಗಳೂರು, ಸೆ.30: ಸಮಾಜದ ಸ್ವಾಸ್ಥ ಕೆಡಿಸಲು ಯಾರೇ ಕಾನೂನನ್ನು ಕೈಗೆತ್ತಿಕೊಂಡರೂ ಕೂಡ ನಿರ್ದಾಕ್ಷಿಣ್ಯ ಕ್ರಮ ಜರಗಿಸಬೇಕು ಎಂದು ಪೊಲೀಸ್ ಇಲಾಖೆಗೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಸೂಚಿಸಿದರು.

ವಿಜಯದಶಮಿ, ಆಯುಧಪೂಜೆ, ದೀಪಾವಳಿ, ಅಂಗಡಿ ಪೂಜೆ, ತುಳಸಿ ಪೂಜೆ, ಬಕ್ರೀದ್, ಮೊಹರ್ರಂ, ಕ್ರಿಸ್ಮಸ್, ಹೊಸ ವರ್ಷ ಇತ್ಯಾದಿಯಾಗಿ ವಿವಿಧ ಧರ್ಮಗಳ ಆಚರಣೆ, ಹಬ್ಬಗಳು ಸಮೀಪಿಸುತ್ತಿರುವ ವೇಳೆ ದ.ಕ. ಜಿಲ್ಲೆಯಲ್ಲಿ ಶಾಂತಿ ಕಾಪಾಡುವ ಉದ್ದೇಶದಲ್ಲಿ ಮಂಗಳವಾರ ಜಿಲ್ಲಾಧಿಕಾರಿಯ ಕಚೇರಿ ಸಭಾಂಗಣದಲ್ಲಿ ನಡೆದ ಶಾಂತಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡುತ್ತಿದ್ದರು.

dc_rai_santhisabhe_2 dc_rai_santhisabhe_3 dc_rai_santhisabhe_4

ನೈತಿಕ ಪೊಲೀಸ್‌ಗಿರಿಗೆ ಪೊಲೀಸ್ ಇಲಾಖೆ ಅವಕಾಶ ಮಾಡಿ ಕೊಡಬಾರದು. ಪ್ರಕರಣಗಳಿಗೆ ಸಂಬಂಧಿಸಿದಂತೆ ತಪ್ಪಿತಸ್ಥ ಹೌದೋ, ಅಲ್ಲವೋ ಎಂಬುದನ್ನು ಅರಿತುಕೊಳ್ಳಬೇಕು. ಯಾರನ್ನಾದರೂ ವಶಕ್ಕೆ ತೆಗೆದುಕೊಂಡ ತಕ್ಷಣ ಠಾಣೆಗೆ ಮುತ್ತಿಗೆ ಹಾಕುವ ವಿದ್ಯಮಾನ ನಡೆಯುತ್ತಿದೆ. ಇದು ಪೊಲೀಸ್ ಇಲಾಖೆಗೆ ಸವಾಲಿನ ಪ್ರಶ್ನೆಯಾಗಿದ್ದು, ಇದನ್ನು ಆರಂಭದಲ್ಲೇ ಹದ್ದುಬಸ್ತಿನಲ್ಲಿಡಬೇಕು ಎಂದು ಸಚಿವ ರೈ ತಿಳಿಸಿದರು.

ಬಕ್ರೀದ್ ಹಬ್ಬದ ಸಂದರ್ಭ ಮುಸ್ಲಿ ಮರು ‘ಕುರ್ಬಾನಿ’ (ಪ್ರಾಣಿ ಬಲಿ) ಮಾಡುತ್ತಾರೆ. ಇದಕ್ಕೆ ಅವಕಾಶ ನೀಡುವುದರ ಜೊತೆಗೆ ಆ ವೇಳೆ ಯಾವುದೇ ಅಶಾಂತಿ ಸೃಷ್ಟಿಯಾಗದಂತೆ ನೋಡಿ ಕೊಳ್ಳಬೇಕು ಎಂದು ಮುಸ್ಲಿಂ ಸೆಂಟ್ರಲ್ ಕಮಿಟಿಯ ಉಪಾಧ್ಯಕ್ಷ ಇಬ್ರಾಹೀಂ ಕೋಡಿಜಾಲ್ ಒತ್ತಾಯಿಸಿದರು.

ಅಕ್ರಮ ಜಾನುವಾರು ಸಾಗಾಟ ಮತ್ತು ಯುವತಿಯರ ಚುಡಾವಣೆ ಗಲಭೆಗೆ ಹೇತುವಾಗುತ್ತದೆ. ಪೊಲೀಸ್ ಇಲಾಖೆ ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಇದನ್ನು ನಿಯಂತ್ರಿಸಬೇಕು. ಅದಲ್ಲದೆ ಸಾರ್ವಜನಿಕವಾಗಿ ಪ್ರಾಣಿಬಲಿ ನೀಡುವುದಕ್ಕೆ ಅವಕಾಶ ನೀಡಬಾರದು ಎಂದು ವಿ‌ಎಚ್‌ಪಿ ಪ್ರಮುಖ ಎಂ.ಬಿ. ಪುರಾಣಿಕ್ ಒತ್ತಾಯಿಸಿದರು. ದಿನೇಶ್ ಪೈ ಕಟೀಲ್ ಇದಕ್ಕೆ ಧ್ವನಿಗೂಡಿಸಿದರು.

ಇಸ್ಲಾಮ್ ಧರ್ಮದ ಪ್ರಕಾರ ಪ್ರಾಣಿಬಲಿ ಮಾಡುವುದು ಅನಿವಾರ್ಯ. ಜಾನುವಾರು ಸಾಗಾಟ ಮಾಡುವವರ ಮೇಲೆ ಹಲ್ಲೆ ಮಾಡಿದರೆ ಸಹಿಸಲು ಸಾಧ್ಯವಿಲ್ಲ. ಆದರೆ, ಅಕ್ರಮ ಸಾಗಾಟ ಮಾಡಿದರೆ ಪೊಲೀಸ್ ಇಲಾಖೆ ಕ್ರಮ ಜರಗಿಸಲಿ ಎಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಮುಹಮ್ಮದ್ ಮಸೂದ್ ನುಡಿದರು. ಪಿ‌ಎಫ್‌ಐ ಜಿಲ್ಲಾ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಇದಕ್ಕೆ ಧ್ವನಿಗೂಡಿಸಿದರು.

dc_rai_santhisabhe_5 dc_rai_santhisabhe_6

ಇನ್ನೊಬ್ಬರ ಹಕ್ಕುಗಳನ್ನು ಕಸಿಯುವ ಪ್ರಯತ್ನವನ್ನು ಯಾರೂ ಮಾಡುವುದು ಬೇಡ. ನಿಷೇಧದ ಕುರಿತು ಕಾನೂನಿನ ಚೌಕಟ್ಟಿನಲ್ಲಿ ಚರ್ಚೆಯಾಗಲಿ ಎಂದು ಮಾನವ ಹಕ್ಕು ಸಂಘಟನೆಯ ಬಾಲಕೃಷ್ಣ ರೈ ತಿಳಿಸಿದರು.

ಅಪರೂಪಕ್ಕೊಮ್ಮೆ ಶಾಂತಿ ಸಭೆ ಕರೆದರೆ ಪ್ರಯೋಜನವಿಲ್ಲ. ಪ್ರತೀ 3 ತಿಂಗಳಿಗೊಮ್ಮೆ ಠಾಣಾ ಮಟ್ಟ ದಲ್ಲೂ ಶಾಂತಿ ಸಭೆ ನಡೆಸಬೇಕು. ಶಾಂತಿ ಸಭೆಯಲ್ಲಿ ಗೋಹತ್ಯೆ ನಿಷೇಧದ ಬಗ್ಗೆ ಚರ್ಚಿಸುವ ಬದಲು ಹಿಂದೂ ಮುಸ್ಲಿಮರು ಪರಸ್ಪರ ಸೌಹಾರ್ದದಿಂದ ಹಬ್ಬ ಆಚರಿಸುವ ಬಗ್ಗೆ ಹಾಜರಿರುವ ನಾಯಕರು ಸಭೆಗೆ ಭರವಸೆ ನೀಡಬೇಕು ಎಂದು ನಾಗರಿಕ ಸಮಿತಿಯ ಹನುಮಂತ ಕಾಮತ್ ಹೇಳಿದರು. ಹಬ್ಬದ ಸಂದರ್ಭಗಳಲ್ಲಿ ಕಿಡಿಗೇಡಿಗಳ ಕೃತ್ಯವನ್ನು ಪತ್ತೆಹಚ್ಚಲು ಸಿಸಿ ಕ್ಯಾಮೆರಾ ಅಳವಡಿಸಬೇಕು ಎಂದು ರಘುವೀರ್ ಒತ್ತಾಯಿಸಿದರು. ಸಾಮಾಜಿಕ ಕಾರ್ಯಕರ್ತ ಸುರೇಶ್ ಶೆಟ್ಟಿ, ಮಹೇಶ್ ಶೆಟ್ಟಿ ತಿಮರೋಡಿ, ಮೊಗವೀರ ಸಮಾಜದ ಮುಖಂಡ ಯತೀಶ್ ಬೈಕಂಪಾಡಿ, ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿದರು.

dc_rai_santhisabhe_8 dc_rai_santhisabhe_7

ವೇದಿಕೆಯಲ್ಲಿ ಶಾಸಕರಾದ ಮೊಯ್ದಿನ್ ಬಾವ, ಐವನ್ ಡಿಸೋಜ, ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ, ನಗರ ಪೊಲೀಸ್ ಆಯುಕ್ತ ಆರ್. ಹಿತೇಂದ್ರ, ಜಿಲ್ಲಾ ಎಸ್ಪಿ ಡಾ.ಶರಣಪ್ಪ, ಜಿ.ಪಂ. ಸಿ‌ಇ‌ಒ ತುಳಸಿ ಮದ್ದಿನೇನಿ, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಉಪಸ್ಥಿತರಿದ್ದರು. ಶಾಂತಿ ಸಭೆಗೂ ಮುನ್ನ ಸಚಿವ ಬಿ.ರಮಾನಾಥ ರೈ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಯ ಜೊತೆ ಸಭೆ ನಡೆಸಿ ಶಾಂತಿ ಸುವ್ಯವಸ್ಥೆ ಕುರಿತು ಚರ್ಚಿಸಿದರು.

Write A Comment