ಉಡುಪಿ: ರೈತರು, ಕೂಲಿ ಕಾರ್ಮಿಕರನ್ನು ಒಕ್ಕಲೆಬ್ಬಿಸಲು ಮುಂದಾದರೆ ಇದಕ್ಕೆ ಕಾರಣವಾದ ಕಾಂಗ್ರೆಸ್ ಸರಕಾರವನ್ನೇ ಒಕ್ಕಲೆಬ್ಬಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಕುರ್ಚಿಯಿಂದ ಕೆಳಗಿಳಿಸುತ್ತೇವೆಂದು ವಿಪಕ್ಷ ನಾಯಕ ಜಗದೀಶ ಶೆಟ್ಟರ್ ಎಚ್ಚರಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಸತ್ಯಾಗ್ರಹ ಕಟ್ಟೆಯಲ್ಲಿ ಮಂಗಳವಾರ ರೈತರ ಒಕ್ಕಲೆಬ್ಬಿಸುವಿಕೆ ವಿರುದ್ಧ ಜಿಲ್ಲಾ ಬಿಜೆಪಿ ಆಯೋಜಿಸಿದ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಕಂದಾಯ ಭೂಮಿಯಲ್ಲಿ 45 ಲಕ್ಷ, ಅರಣ್ಯ ಭೂಮಿಯಲ್ಲಿ 2 ಲಕ್ಷ ಅಕ್ರಮ ವಾಸಿಗಳಿದ್ದು ಇವರನ್ನು ತೆರವುಗೊಳಿಸುತ್ತೇವೆಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳು, ಅಡ್ವೊಕೇಟ್ ಜನರಲ್ ಅವರು ಉಚ್ಚ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಿದರೂ ಮುಖ್ಯಮಂತ್ರಿಗಳು ತಮಗೇನೂ ಗೊತ್ತಿಲ್ಲದಂತೆ ಮಾಡುತ್ತಿದ್ದಾರೆ. ಈಗ ರೈತರಿಗೆ ನೋಟಿಸ್ ಬರುತ್ತಿವೆ ನಾವು ಸರಕಾರದ ಈ ವಿಚಾರದ ವಿರುದ್ಧ ಹೋರಾಡುತ್ತೇವೆ ಎಂದು ಹೇಳಿದರು.
ಅಕ್ರಮ ಸಕ್ರಮಗೊಳಿಸಲು ತಮ್ಮ ಸರಕಾರ ಕ್ರಮ ವಹಿಸಿದ್ದರೂ ರಾಜ್ಯಪಾಲರ ಮೂಲಕ ಕಾಂಗ್ರೆಸ್ ತಡೆಯೊಡ್ಡಿತು. ಕಾಂಗ್ರೆಸ್ ಸರಕಾರ ದಲಿತ ವಿರೋಧಿಯಾಗಿದ್ದು ಸರಕಾರದ ಈ ಕಾನೂನು ಜಾರಿಗೊಂಡರೆ ಸಾವಿರಾರು ಜನರು ಬೀದಿ ಪಾಲಾಗುತ್ತಾರೆ. 8-10 ಲಕ್ಷ ಕಾರ್ಡುಗಳನ್ನು ರದ್ದುಪಡಿಸಲಾಗಿದೆ. ಸರಕಾರದ ಒಕ್ಕಲೆಬ್ಬಿಸುವ ಕ್ರಮದ ವಿರುದ್ಧ ಕೋಲಾರ, ಹುಬ್ಬಳ್ಳಿ ಮೊದಲಾದೆಡೆ ಹೋರಾಟವನ್ನು ಸಂಘಟಿಸಲಾಗುತ್ತಿದೆ.
ಇತ್ತೀಚೆಗೆ ಮುಖ್ಯಮಂತ್ರಿಗಳು ನಡೆಸಿದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಕಾರ್ಡುದಾರರ ಸಮಸ್ಯೆ, ಒಕ್ಕಲೆಬ್ಬಿಸುವ ಸಮಸ್ಯೆ, ಮಹಿಳಾ ದೌರ್ಜನ್ಯ ಕುರಿತು ಪ್ರಸ್ತಾವಿಸಿದರೆ ಮುಖ್ಯಮಂತ್ರಿಗಳ ಉತ್ತರ ತೀರಾ ನಿರಾಶಾದಾಯಕ. ಯಾವುದೇ ಅನುದಾನ, ಪರಿಹಾರವನ್ನು ಘೋಷಿಸದೆ ಹಿಂದಿರುಗಿದರು ಎಂದು ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಸುನಿಲ್ ಕುಮಾರ್ ಟೀಕಿಸಿದರು. ಮುಂದಿನ ಅಧಿವೇಶನದಲ್ಲಿ ಈ ವಿಷಯವನ್ನು ತೆಗೆದುಕೊಂಡು ಹೋರಾಟ ನಡೆಸಲಾಗುವುದು ಸುನಿಲ್ ಕುಮಾರ್ ಹೇಳಿದರು.
ಜಿ.ಪಂ. ಅಧ್ಯಕ್ಷೆ ಸವಿತಾ ಶಿವಾನಂದ ಕೋಟ್ಯಾನ್, ನಾಯಕರಾದ ಶ್ಯಾಮಲಾ ಕುಂದರ್, ಉದಯಕುಮಾರ ಶೆಟ್ಟಿ, ಮಟ್ಟಾರ್ ರತ್ನಾಕರ ಹೆಗ್ಡೆ, ಗೀತಾಂಜಲಿ ಸುವರ್ಣ, ಕಿರಣ್ ಕುಮಾರ್, ಕೆ.ಸುರೇಶ ನಾಯಕ್, ಬಿ.ಎಂ. ಸುಕುಮಾರ ಶೆಟ್ಟಿ, ಎಂ. ಸೋಮಶೇಖರ ಭಟ್, ಕಟಪಾಡಿ ಶಂಕರ ಪೂಜಾರಿ ಮೊದಲಾದವರು ಪಾಲ್ಗೊಂಡಿದ್ದರು.
ಮಾಜಿ ಶಾಸಕ ಕೆ. ರಘುಪತಿ ಭಟ್ ಪ್ರಸ್ತಾವಿಕ ಮಾತುಗಳನ್ನಾಡಿದರು. ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
