ಕರಾವಳಿ

ದೇಶದ 25 ಸಾವಿರ ಅಂಚೆ ಕಚೇರಿಗಳು ಶೀಘ್ರದಲ್ಲೇ ಕಂಪ್ಯೂಟರೀಕರಣ : ಟಿ.ಎಸ್.ಆರ್.ಸುಬ್ರಹ್ಮಣ್ಯನ್

Pinterest LinkedIn Tumblr

DC_metting_bck_1

ಮಂಗಳೂರು,ಸೆ.29: ದೇಶದ ಅಂಚೆ ಕಚೇರಿಗಳನ್ನು ಕಂಪ್ಯೂಟರೀಕರಣ ಗೊಳಿಸುವ ಮೂಲಕ ನವೀಕರಿಸಲಾಗುವುದು. ದೇಶದಲ್ಲಿರುವ 1.60 ಲಕ್ಷ ಅಂಚೆ ಕಚೇರಿಗಳ ಪೈಕಿ 25 ಸಾವಿರ ಅಂಚೆ ಕಚೇರಿಗಳನ್ನು ಮುಂದಿನ ವರ್ಷ ಕಂಪ್ಯೂಟರೀಕರಣ ಮಾಡಲಾಗುವುದು ಎಂದು ಅಂಚೆ ಇಲಾಖೆಯ ನವೀಕರಣ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರಕಾರದಿಂದ ನಿಯೋಜಿತ ಕಾರ್ಯಪಡೆಯ ಅಧ್ಯಕ್ಷ ಟಿ.ಎಸ್.ಆರ್.ಸುಬ್ರಹ್ಮಣ್ಯನ್ ತಿಳಿಸಿದರು.

ಅವರು ದ.ಕ ಜಿಲ್ಲಾಧಿಕಾರಿಯ ಸಭಾಂಗಣದಲ್ಲಿ ರವಿವಾರ ನಡೆದ ಅಂಚೆ ಇಲಾಖೆ ಕಾರ್ಯಪಡೆಯ ಸಾರ್ವಜನಿಕ ಅಹವಾಲು ಸ್ವೀಕಾರ ಸಭೆಯಲ್ಲಿ ಈ ವಿಷಯ ತಿಳಿಸಿದರು. ನಗರ ಕೇಂದ್ರಿತ ಕಚೇರಿಗಳಲ್ಲಿ ಸಿಗುತ್ತಿರುವ ಸೌಲಭ್ಯಗಳು ಗ್ರಾಮೀಣ ಭಾಗದ ಅಂಚೆ ಕಚೇರಿಗಳಲ್ಲಿ ಸಿಗುತ್ತಿಲ್ಲ. ಇದನ್ನು ಸಮಿತಿ ಗಂಭೀರವಾಗಿ ಪರಿಗಣಿಸಿದೆ. ಈ ನಿಟ್ಟಿನಲ್ಲಿ ಖಾಸಗಿ ಸಂಸ್ಥೆಗಳು ಒಡ್ಡುವ ಸವಾಲುಗಳನ್ನು ಎದುರಿಸಲು ಅಂಚೆ ಇಲಾಖೆಗೆ ಕಾಯಕಲ್ಪ ಮಾಡಬೇಕಾಗಿದೆ ಎಂದು ಟಿ‌ಎಸ್‌ಆರ್ ಸುಬ್ರಹ್ಮಣ್ಯನ್ ತಿಳಿಸಿದರು.

ಕೇಂದ್ರ ಮತ್ತು ರಾಜ್ಯ ಸರಕಾರದ ವಿವಿಧ ಯೋಜನೆಗಳನ್ನು ಸುಸೂತ್ರವಾಗಿ ಹಾಗೂ ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸಲು ಗ್ರಾಮ ಮಟ್ಟದ ವರೆಗೆ ಹರಡಿರುವ ಅಂಚೆ ಇಲಾಖೆಯ ಬೃಹತ್ ಜಾಲವನ್ನು ಸಂಪೂರ್ಣವಾಗಿ ಸಾರ್ವಜನಿಕ ಸೇವೆಗೆ ಬಳಸಿಕೊಳ್ಳುವ ಅವಕಾಶವಿದೆ. ಅಲ್ಲಿ ಇಂಟರ್‌ನೆಟ್ ಅಳವಡಿಸುವ ಮೂಲಕ ಕ್ಷಣಾರ್ಧದಲ್ಲಿ ಸಂವಹನ ಸಾಧಿಸುವ ಪ್ರಯತ್ನ ನಡೆಯುತ್ತಿದೆ. ನುರಿತ ತಂತ್ರಜ್ಞರನ್ನು ಬಳಸಿಕೊಂಡು ಅವನತಿಯತ್ತ ಸಾಗುವ ಅಂಚೆ ಕಚೇರಿಗಳಿಗೆ ಜೀವ ತುಂಬಲಾಗುವುದು. ಅಂಚೆ ಕಚೇರಿ ಮತ್ತು ಸಾರ್ವಜನಿಕರ ಮಧ್ಯೆ ಮತ್ತೆ ಸಂಬಂಧ ಕಲ್ಪಿಸಲು ಸಹಕಾರಿಯಾಗುವ ನಿಟ್ಟಿನಲ್ಲಿ 20ಕ್ಕೂ ಅಧಿಕ ಖಾಸಗಿ ಸಂಸ್ಥೆಗಳ ಜತೆ ಮಾತುಕತೆ ನಡೆಸಲಾಗುವುದು. ಸಕಾಲಕ್ಕೆ ಅಂಚೆ ಸಹಿತ ವಸ್ತುಗಳ ಸರಬರಾಜು, ವ್ಯವಹಾರ ವೃದ್ಧಿ, ಲೆಕ್ಕಪತ್ರಗಳನ್ನು ಸಮರ್ಪಕವಾಗಿ ನಿರ್ವಹಣೆಗೊಳಿಸುವುದಕ್ಕಾಗಿ ಪ್ರಯತ್ನ ನಡೆಯುತ್ತಿದೆ ಎಂದು ಸುಬ್ರಹ್ಮಣ್ಯನ್ ಹೇಳಿದರು.

ಆಧಾರ್ ನೋಂದಣಿ ಕೇಂದ್ರಗಳನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಅಂಚೆ ಕಚೇರಿಗಳಲ್ಲೇ ಸ್ಥಾಪಿಸಲು ಪ್ರಯತ್ನ ನಡೆಸಬೇಕು. ಇದರಿಂದ ನಿರಂತರವಾಗಿ ನಡೆಯಬೇಕಾಗಿರುವ ಆಧಾರ್ ನೋಂದಣಿ ಮಾಡಿಸಿಕೊಳ್ಳಲು ಸಾರ್ವಜನಿಕರಿಗೆ ಹೆಚ್ಚು ಅನುಕೂಲ ಕಲ್ಪಿಸಿದಂತಾಗುತ್ತದೆ ಎಂದು ದ.ಕ. ಜಿಪಂ ಸಿ‌ಇ‌ಒ ತುಳಸಿ ಮದ್ದಿನೇನಿ ಸಲಹೆ ನೀಡಿದರು.

ರಶೀದ್ ಬೋಳಾರ, ಪ್ರಕಾಶ್ ಭಟ್, ಲಕ್ಷ್ಮಣ ಪ್ರಭು, ಸುಧೀರ್ ಭಟ್, ಅನಿಲ್, ಇಸ್ಮಾಯೀಲ್ ಸೋಮೇಶ್ವರ, ಜಿ.ಎನ್.ಅಶೋಕ ವರ್ಧನ್, ಪದ್ಮನಾಭ ಉಳ್ಳಾಲ್ ಮತ್ತಿತರರು ಸಾರ್ವಜನಿಕರ ಪರವಾಗಿ ಸಮಿತಿಯ ಎದುರು ಅಹವಾಲು, ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

Write A Comment