ಕರಾವಳಿ

ಅಕ್ರಮ ದನ ಸಾಗಾಟ : ಜಾನುವಾರು ಸಹಿತ ಆರೋಪಿಗಳ ಸೆರೆ

Pinterest LinkedIn Tumblr

Vitla_illigal_cattle

ವಿಟ್ಲ / ಪೂಂಜಾಲಕಟ್ಟೆ : ಸೆ.28: ಅಕ್ರಮ ದನ ಸಾಗಾಟ ನಡೆಸುತ್ತಿದ್ದ ಬಗ್ಗೆ ಮಾಹಿತಿ ಪಡೆದ ಪುತ್ತೂರು ನಗರ ಪೊಲೀಸರು ವಾಹನ, ಜಾನುವಾರು ಸಹಿತ ಚಾಲಕನನ್ನು ಕಬಕದಲ್ಲಿ ಬಂಧಿಸಿ ವಿಟ್ಲ ಪೊಲೀಸರಿಗೊಪ್ಪಿಸಿದ ಘಟನೆ ರವಿವಾರ ನಡೆದಿದೆ.

ಕಬಕ ಪಾಂಡೇಲು ನಿವಾಸಿ ರಾಮಣ್ಣ ಪೂಜಾರಿ (57) ಎಂಬಾತ ತನ್ನ ಆಪೆ ರಿಕ್ಷಾದಲ್ಲಿ ಬೈರಿಕಟ್ಟೆ ಸಮೀಪದಿಂದ ಕಬಕ ಕಡೆಗೆ ಎರಡು ಜಾನುವಾರುಗಳನ್ನು ತುಂಬಿಸಿ ಕೊಂಡು ಸಾಗಿಸುತ್ತಿದ್ದ ವೇಳೆ ಮಾಹಿತಿ ಪಡೆದ ಕಬಕ ಪರಿಸರದ ಸಂಘಪರಿವಾರದ ಕಾರ್ಯಕರ್ತರು ಪುತ್ತೂರು ನಗರ ಠಾಣೆಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಪುತ್ತೂರು ನಗರ ಠಾಣಾಧಿಕಾರಿ ಅಬ್ದುಲ್ ಖಾದರ್ ವಾಹನ ಸಹಿತ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಪೊಲೀಸರು ಕಾರ್ಯಾಚರಣೆ ನಡೆಸಿದ ಸ್ಥಳ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಗೊಳಪಟ್ಟ ಹಿನ್ನೆಲೆಯಲ್ಲಿ ಆರೋಪಿ ಸಹಿತ ಜಾನುವಾರುಗಳನ್ನು ವಿಟ್ಲ ಠಾಣೆಗೆ ಹಸ್ತಾಂತರಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ವಿಟ್ಲ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

ಪೂಂಜಾಲಕಟ್ಟೆಯಲ್ಲಿ ಇಬ್ಬರ ಬಂಧನ:

ಅಕ್ರಮ ಜಾನುವಾರು ಸಾಗಾಟ ಪ್ರಕರಣವನ್ನು ಪತ್ತೆ ಹಚ್ಚಿರುವ ಪೂಂಜಾಲಕಟ್ಟೆ ಪೊಲೀಸರು ವಾಹನ, ಜಾನುವಾರು ಸಹಿತ ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿದ ಘಟನೆ ರವಿವಾರ ಮುಂಜಾನೆ ಪೂಂಜಾಲ ಕಟ್ಟೆಯಲ್ಲಿ ನಡೆದಿದೆ.

ಬಂಧಿತ ಆರೋಪಿಗಳನ್ನು ವಿಟ್ಲ ನಿವಾಸಿಗಳಾದ ಇಕ್ಬಾಲ್ ಹಾಗೂ ರಿಯಾಝ್ ಎಂದು ಗುರುತಿಸಲಾಗಿದ್ದು, ಜಾನುವಾರು ಸಹಿತ ಸಾಗಾಟಕ್ಕೆ ಬಳಸಿದ್ದ ಪಿಕಪ್ ವಾಹನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಉಜಿರೆ-ದಿಡುಪೆ ಕಡೆಯಿಂದ ಪಿಕಪ್ ವಾಹನದಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಪೂಂಜಾಲಕಟ್ಟೆ ಠಾಣಾಧಿಕಾರಿ ಲತೇಶ್ ಕುಮಾರ್ ಸಿಬ್ಬಂದಿಯೊಂದಿಗೆ ರವಿವಾರ ಮುಂಜಾನೆ ಪೂಂಜಾಲಕಟ್ಟೆಯಲ್ಲಿ ಪೊಲೀಸ್ ಬ್ಯಾರಿಕೇಡ್ ಅಳವಡಿಸಿ ಕಾರ್ಯಚರಣೆ ನಡೆಸಿದ ಸಂದರ್ಭ ದಲ್ಲಿ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಜಾನುವಾರುಗಳನ್ನು ಖರೀದಿಸಿ ತರಲಾಗಿದೆಯೋ ಅಥವಾ ಕಳವು ಮಾಡಿ ಸಾಗಾಟ ಮಾಡಲಾಗುತ್ತಿತ್ತೋ ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ವಾಹನದಲ್ಲಿ ಜಾನುವಾರು ಸಾಗಾಟದ ಬಗ್ಗೆ ಯಾವುದೇ ದಾಖಲೆ ಪತ್ರಗಳು ಲಭ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿಗಳನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Write A Comment