ಕರಾವಳಿ

ನೆತ್ತರಕೆರೆ ಅರಳಿ ಮರದ ಗೆಲ್ಲು ಮುರಿದು ಬಿದ್ದು ಶಾಲಾ ಬಾಲಕರಿಬ್ಬರಿಗೆ ಗಾಯ

Pinterest LinkedIn Tumblr

tree_fall_boy_sericis

ಬಂಟ್ವಾಳ: ಕಳ್ಳಿಗೆ ಗ್ರಾಮ ನೆತ್ತರಕೆರೆ ಹಿ.ಪ್ರಾ.ಶಾಲಾ ಅಂಗಳದಲ್ಲಿದ್ದ ಕಟ್ಟೆಯ ಅರಳಿ ಮರದ ಗೆಲ್ಲು ಮುರಿದು ಬಿದ್ದು ಗಾಯಗೊಂಡಿದ್ದ ಇಬ್ಬರು ಬಾಲಕರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.ಗಾಯಾಳುಗಳನ್ನು ಆರನೇ ತರಗತಿ ವಿದ್ಯಾರ್ಥಿಗಳಾದ ಕೊಡ್ಮಾಣ್ ನಿವಾಸಿ ಅಬ್ದುಲ್ ಲತೀಫ್ ರವರ ಪುತ್ರ ಹಸನಬ್ಬ (12) ಮತ್ತು ಕಳ್ಳಿಗೆ ಗ್ರಾಮದ ಬೆಂಜನಪದವು ನಿವಾಸಿ ಪರಮೇಶ್ವರ ಪೂಜಾರಿ ಅವರ ಪುತ್ರ ಯತೀಶ್(12) ಎಂದು ಹೆಸರಿಸಲಾಗಿದೆ.

ಗಾಯಾಳುಗಳ ಪೈಕಿ ವಿದ್ಯಾರ್ಥಿ ಹಸನಬ್ಬಗೆ ಗಂಭೀರ ಸ್ವರೂಪದ ಗಾಯಗೊಂಡಿದ್ದು ತಕ್ಷಣ ತುಂಬೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದಲ್ಲಿ ದಾಖಲಿಸಲಾಗಿದೆ. ಮರದ ಗೆಲ್ಲು ಬಿದ್ದ ರಭಸಕ್ಕೆ ಅದರ ಅಡಿಗೆ ಸಿಲುಕಿದ ಪರಿಣಾಮ ಆತನ ಬಲದ ಕೈ ಭುಜದಿಂದಲೇ ಮುರಿತಕ್ಕೋಳಗಾಗಿದ್ದು, ಆಸ್ಪತ್ರೆಯಲ್ಲಿ ಕೈಯನ್ನು ಕತ್ತರಿಸಿ ತೆಗೆಯುವ ಮೂಲಕ ಆತನ ಜೀವ ಉಳಿಸುವ ಪ್ರಯತ್ನ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

tree_fallan_on_boyA

ಗಾಯಾಳು ಮಕ್ಕಳಿಬ್ಬರ ಕುಟುಂಬ ತೀರಾ ಬಡವರಾಗಿದ್ದು, ಇವರ ತಂದೆ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದರೆ ತಾಯಿ ಬೀಡಿ ಕಟ್ಟುವ ಮೂಲಕ ಜೀವನ ಸಾಗಿಸುತ್ತಿದ್ದರು. ಯತೀಶ್‌ನಿಗೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು ಶುಕ್ರವಾರ ಆಸ್ಪತ್ರೆಯಿಂದ ಆತನನ್ನು ಬಿಡುಗಡೆ ಮಾಡಲಾಗಿದೆ. ಗುರುವಾರ ಮಧ್ಯಾಹ್ನದ ವಿದ್ಯಾರ್ಥಿಗಳು ಊಟ ಮಾಡಿ ಶಾಲೆಯ ಎದುರಿನ ಅಂಗಳಲ್ಲಿ ಇದ್ದಂತಹ ಅರಳಿ ಕಟ್ಟೆಯಲ್ಲಿ ಓದುತ್ತಿದ್ದಾಗ ದುರ್ಘಟನೆ ನಡೆದಿತ್ತು.

tree_fallan_on_boy

ಈ ಸಂದರ್ಭದಲ್ಲಿ ಬೀಸಿದ ಭಾರೀ ಗಾಳಿಗೆ ಮರದ ಗೆಲ್ಲು ಮುರಿಯುವ ಶಬ್ಧ ಕೇಳುತ್ತಿದ್ದಂತೆ ವಿದ್ಯಾರ್ಥಿಗಳು ಅಲ್ಲಿಂದ ಸುರಕ್ಷಿತ ಸ್ಥಳಕ್ಕೆ ಓಡಿದ್ದರು. ಆದರೆ ಮುರಿದ ಗೆಲ್ಲು ಹಸನಬ್ಬ ಮತ್ತು ಯತೀಶ್ ಹಾಗೂ ಇವರ ಜೊತೆಗಿದ್ದ ನಸೀಮಾಳಿಗೂ ಗಾಯಗಳಾಗಿತ್ತು. ನಸೀಮಾಳಿಗೆ ಸ್ವಲ್ಪ ಮಟ್ಟಿನ ತರಚು ಗಾಯ ಆಗಿದ್ದು ಹೆಚ್ಚಿನ ಅಪಾಯ ಉಂಟಾಗಿಲ್ಲ. ಇದನ್ನು ಗಮನಿಸಿದ ಶಾಲಾ ಮುಖ್ಯಶಿಕ್ಷಕಿ ಲೀನಾ ಡಿ’ಸೋಜ ಮತ್ತು ಸಹಶಿಕ್ಷಕಿಯರು ಸ್ಥಳಕ್ಕೆ ಧಾವಿಸಿ ಗಾಯಾಳು ವಿಧ್ಯಾರ್ಥಿಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲು ಕ್ರಮ ಕೈಗೊಂಡರು. ಸುದ್ದಿ ತಿಳಿದ ಸ್ಥಳೀಯರು ಹಾಗೂ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಭಾಸ್ಕರ ನೆತ್ತರಕೆರೆ, ತುಂಬೆ ಪಂಚಾಯತ್ ಸದಸ್ಯ ಪುರುಷ ಯನ್. ಸಾಲ್ಯಾನ್, ದಾಮೋದರ ನೆತ್ತರಕೆರೆ, ಸುಬ್ರಹ್ಮಣ್ಯ ಭಟ್, ನಾರಾಯಣ ಮೂಲ್ಯ, ಪುದು ಗ್ರಾ.ಪಂ.ಸದಸ್ಯ ಜಗದೀಶ, ತುಂಬೆ ಗ್ರಾ.ಪಂ. ಅಧಕ್ಷ ಮಹಮ್ಮದ್ ವಳವೂರು, ನಿವೃತ್ತ ಮುಖ್ಯಶಿಕ್ಷಕ ಟಿ. ಸೇಸಪ್ಪ ಮೂಲ್ಯ, ನವೋದಯ ಮಿತ್ರ ಕಲಾವೃಂದ ಸದಸ್ಯರು ಸಹಿತ ಅನೇಕ ಮಂದಿ ಸ್ಥಳಕ್ಕೆ ಧಾವಿಸಿ ಮಕ್ಕಳಿಬ್ಬರ ರಕ್ಷಣೆಗಾಗಿ ತುರ್ತು ಕ್ರಮಕ್ಕೆ ನೆರವಿತ್ತರು.

ಬಂಟ್ವಾಳ ತಹಶೀಲ್ದಾರ್ ಬಿ.ಎಸ್. ಮಲ್ಲೇಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ ಶುಕ್ರವಾರ ಶಾಲೆಗೆ ತೆರಳಿ ಮಾಹಿತಿ ಪಡೆದರು. ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ಘಟನೆಯನ್ನು ಪ್ರಾಕೃತಿಕ ವಿಕೋಪವಾಗಿ ಪರಿಗಣಿಸಿ ಕಡು ಬಡವರಾದ ಹೆತ್ತವರಿಗೆ ಪರಿಹಾರ ನೀಡುವಂತೆ ಸ್ಥಳೀಯರು, ಸಂಘಟನೆಗಳು ಸಚಿವರು ಮತ್ತು ಸಂಸದರಿಗೆ ಮನವಿ ಮಾಡಿದ್ದಾರೆ. ಕಂದಾಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

Write A Comment