ಕರಾವಳಿ

ಮಾದಕ ವಸ್ತುಗಳಿಗೆ ಮಕ್ಕಳ ಗುರಿ: ಮಲ್ಲಿಪಟ್ಣ ಆತಂಕ

Pinterest LinkedIn Tumblr

vichar_sankiran_photo_1

ಮಂಗಳೂರು, ಸೆ.25:  ಇತ್ತೀಚಿನ ದಿನಗಳಲ್ಲಿ ಮಾದಕ ವಸ್ತುಗಳು ವಿವಿಧ ರೂಪಗಳಲ್ಲಿ ಹದಿಹರೆಯದ ಬಾಲಕರ ಕೈಗೆ ತಲುಪುವಂತಹ ವಾತಾವರಣ ಉಂಟಾಗುತ್ತಿದ್ದು, ಇದರ ವಿರುದ್ಧ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ವಿಶ್ವವಿದ್ಯಾಲಯ ಕಾಲೇಜಿನ ಪ್ರಾಂಶುಪಾಲರಾದ ಡಾ.ಸತ್ಯನಾರಯಣ ಮಲ್ಲಿಪಟ್ಣ ಹೇಳಿದ್ದಾರೆ.

ಅವರು ಗುರುವಾರ ಕಾಲೇಜಿನ ಡಾ. ಶಿವರಾಮಕಾರಂತ ವೇದಿಕೆಯಲ್ಲಿ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಬೆಂಗಳೂರು ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಡೆದ ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮ ಕುರಿತು ಆಯೋಜಿಸಿದ್ದ ವಿಚಾರಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದೈನಂದಿನ ಜೀವನದಲ್ಲಿ ಬಳಕೆಯಾಗುವ ವಿವಿಧ ವಸ್ತುಗಳ ಮೂಲಕ ಅಮಲು ಪದಾರ್ಥ ಗಳನ್ನು ಸೇವಿಸುವಂತಹ ಪ್ರಕರಣಗಳು ವರದಿಯಾಗುತ್ತಿವೆ. ಭವಿಷ್ಯದಲ್ಲಿ ಉತ್ತಮ ಜೀವನ ನಡೆಸಬೇಕಾದ ಎಳೆಯ ಜೀವಗಳು ಆರಂಭದಲ್ಲೇ ಅಡ್ಡದಾರಿ ಹಿಡಿದು ಕಮರಿ ಹೋಗುವಂತಾಗುವುದು ಕಳವಳಕರಿಯಾಗಿದೆ. ಸ್ಥಿಮಿತ ಕಳೆದುಕೊಂಡ ವ್ಯಕ್ತಿಯು ಎಂತಹದ್ದೇ ಕೃತ್ಯ ಮಾಡಲು ಹಿಂಜರಿಯುವುದಿಲ್ಲ ಎಂದು ಅವರು ಹೇಳಿದರು.

ಶೈಕ್ಷಣಿಕ ಸಂಸ್ಥೆಗಳಲ್ಲಿ ಮದ್ಯ ಮತ್ತು ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸುತ್ತಿರುವುದು ಸಂತಸದ ವಿಷಯ. ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜೀವನದಲ್ಲಿ ಜೀವನದ ಮೌಲ್ಯ ವೃದ್ಧಿಸುವಂತಹ ಚಟುವಟಿಕೆಗಳಲ್ಲಿ ತೊಡಗಿಸಬೇಕು ಎಂದು ಡಾ.ಸತ್ಯನಾರಯಣ ಮಲ್ಲಿಪಟ್ಣ ಕರೆ ನೀಡಿದರು.

ಉಪನ್ಯಾಸ ನೀಡಿದ ಆರೋಗ್ಯ ಇಲಾಖೆ ಶಿಕ್ಷಣಾಧಿಕಾರಿ ಜಯರಾಂ ಪೂಜಾರಿ, ಇಂದಿನ ಅಭಿವೃದ್ಧಿ ಮತ್ತು ಬೆಳವಣಿಗೆಗಳಿಂದಾಗಿ ಪ್ರತಿಯೊಬ್ಬ ವ್ಯಕ್ತಿಯೂ ಉತ್ತಮ ಸಂಪಾದನೆ ಮಾಡುತ್ತಿದ್ದಾರೆ. ಆದರೆ, ದುಶ್ಚಟಗಳಿಗೆ ಸಂಪಾದನೆಯು ಹೋಗುತ್ತಿರುವುದರಿಂದ ಬಡತನವು ಹಾಗೆಯೇ ಮುಂದುವರಿಯುತ್ತಿದೆ. ಇದರಿಂದ ದೇಶದ ಆರ್ಥಿಕತೆಗೂ ಹೊಡೆತವಾಗುತ್ತಿದೆ ಎಂದು ಹೇಳಿದರು.

ಜಿಲ್ಲಾ ವಾರ್ತಾಧಿಕಾರಿ ಬಿ.ಎ. ಖಾದರ್ ಶಾ ಪ್ರಾಸ್ತಾವಿವಾಗಿ ಮಾತನಡಿದರು. ವಿಶ್ವವಿದ್ಯಾಲಯ ಕಾಲೇಜಿನ ಲಲಿತಕಲಾ ಸಂಘದ ಮುಖ್ಯಸ್ಥೆ ಡಾ. ನಾಗರತ್ನ ರಾವ್ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಯುವ ರೆಡ್‌ಕ್ರಾಸ್ ಸೊಸೈಟಿಯ ಮುಖ್ಯಸ್ಥ ಡಾ.ಗಣಪತಿ ಗೌಡ ಅವರು ಕಾರ್ಯಕ್ರಮ ನಿರೂಪಿಸಿ, ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿ ಡಾ. ದಯಾನಂದ ನಾಯಕ್ ವಂದಿಸಿದರು.

Write A Comment