ಕರಾವಳಿ

ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಕೆ.ರಮೇಶ್ ನಾಯಕ್ ರಾಯಿ ಅವರಿಗೆ ಸನ್ಮಾನ.

Pinterest LinkedIn Tumblr

bntwl_sammana_photo_1

ಬಂಟ್ವಾಳ: ತಾ|ರಾಯಿ ದೈಲ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಸಂಘ ಮತ್ತು ಶ್ರೀ ಮಹಾಲಿಂಗೇಶ್ವರ ಭಜನ ಮಂಡಳಿ ಹಾಗೂ ಚೈತನ್ಯ ಮಹಿಳಾ ಮಂಡಳಿ ಮತ್ತಿತರ ಸಂಘಗಳ ಸಹಭಾಗಿತ್ವದಲ್ಲಿ ಸಿದ್ಧಕಟ್ಟೆ ದಿ|ಚೆನ್ನಪ್ಪ ಶೆಟ್ಟಿ ಅವರ ಸಂಸ್ಮರಣೆ ಹಾಗೂ ಯಕ್ಷಗಾನ ತಾಳಮದ್ದಳೆ ಮತ್ತು ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಕೆ.ರಮೇಶ್ ನಾಯಕ್ ರಾಯಿ ಅವರಿಗೆ ಸಮ್ಮಾನ ಕಾರ್ಯಕ್ರಮ ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಮೃತ ಕಲಾ ಮಂಟಪದಲ್ಲಿ ಜರಗಿತು.

ದೇವಸ್ಥಾನದ ಆಡಳಿತ ಮೊಕ್ತೇಸರ ರಮೇಶ್ ಭಟ್ ಮಾದೇರಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟಿ ಅವರು ಬೇರೆ ಊರಲ್ಲಿದ್ದರೂ ಹುಟ್ಟೂರು ರಾಯಿಯಲ್ಲಿ ಅಪಾರ ಅಭಿಮಾನ ಹೊಂದಿದ್ದರು. ಊರಿನ ಯಾವುದೇ ಕಾರ್ಯಕ್ರಮದಲ್ಲೂ ಭಾಗಿಯಾಗುವ ಪ್ರೀತಿ ಹೊಂದಿದ್ದರು. ಒಡನಾಡಿಗಳಲ್ಲಿ ಪ್ರೀತಿ – ವಿಶ್ವಾಸವಿರಿಸಿದ ಮಹಾನ್ ಗೆಳೆಯರಾಗಿದ್ದರು ಎಂದು ಹೇಳಿದರು. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಕೆ.ರಮೇಶ್ ನಾಯಕ್ ರಾಯಿ ಅವರಿಂದ ಊರಿನ ಹೆಸರು ರಾಷ್ಟ್ರ ಮಟ್ಟಕ್ಕೇರಿದ ಹೆಮ್ಮೆ ನಮ್ಮದು. ಅದಕ್ಕಾಗಿ ಅವರಿಗೆ ಕೃತಜ್ಞರಾಗಿದ್ದೇವೆ ಎಂದು ನುಡಿದರು.

ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟಿ ಅವರ ಸಂಸ್ಮರಣೆ ಮಾಡಿ ಮಾತನಾಡಿದ ಯಕ್ಷಗಾನ ಕಲಾವಿದ ದಿನೇಶ್ ಶೆಟ್ಟಿ ಕಾವಳಕಟ್ಟೆ ಅವರು ಚೆನ್ನಪ್ಪ ಶೆಟ್ಟಿ ಅವರು ಸದಾ ಹೊಸತನವನ್ನು ಹುಡುಕುವ ಅನ್ವೇಷಕರಾಗಿದ್ದು ಯಕ್ಷಗಾನದಲ್ಲಿ ಮತ್ತು ತಾಳಮದ್ದಳೆಯಲ್ಲಿ ನೂತನ ಪ್ರಯೋಗಕ್ಕೆ ತನ್ನನ್ನು ಒಡ್ಡಿದ್ದರು. ನಿರ್ದಿಷ್ಟ ಪದ ಬಳಕೆಗೆ ಒತ್ತು ನೀಡಿ ಭಾಷಾ ಶೈಲಿಗೆ ಹೊಸ ಭಾಷ್ಯವನ್ನು ಬರೆದು ತನ್ನ ವಾಕ್ಚಾತುರ್ಯದಿಂದ ಕಲಾರಸಿಕರ ಮನ ಗೆದ್ದವರು. ನಿಷ್ಟಾವಂತ ಪ್ರಾಮಾಣಿಕತೆಯಿಂದ ತನ್ನ ಸಂಸ್ಥೆಗೆ ಯಾವುದೇ ಕಳಂಕ ಬಾರದ ರೀತಿಯಲ್ಲಿ ನಿರ್ವಹಿಸಿದವರು ಎಂದು ನುಡಿನಮನ ಸಲ್ಲಿಸಿದರು. ಈ ವೇಳೆ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಕೆ.ರಮೇಶ್ ನಾಯಕ್ ರಾಯಿ ಅವರನ್ನು ಸಮ್ಮಾನಿಸಲಾಯಿತು.

ತನ್ನೂರ ಸಮ್ಮಾನಕ್ಕೆ ಪ್ರತಿಕ್ರಿಯಿಸಿದ ಕೆ.ರಮೇಶ್ ನಾಯಕ್ ಅವರು ರಾಯಿ ಹಾಗೂ ಕೆದ್ದಳಿಕೆ ಸಹಿತ ತಾನು ಕರ್ತವ್ಯ ಸಲ್ಲಿಸಿದ ಶಾಲೆಗಳ ಊರವರ ಸಹಕಾರದಿಂದ ಉತ್ತಮ ಸೇವೆ ಸಲ್ಲಿಸಲು ಅವಕಾಶವಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧ್ಯತೆಗಳನ್ನು ಅವಿಷ್ಕರಿಸಲು ಇದರಿಂದ ಸಾಧ್ಯವಾಗಿದೆ ಎಂದು ಹೇಳಿದರು. ಗ್ರಾ.ಪಂ. ಅಧ್ಯಕ್ಷೆ ಇಂದಿರಾ ಮಧುಕರ ಬಂಗೇರ ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟಿ ಅವರ ಪುತ್ರ ಭೂಷಣ್, ಭಜನ ಮಂಡಳಿ ಅಧ್ಯಕ್ಷ ಹೇಮಚಂದ್ರ ಶೆಟ್ಟಿಗಾರ್, ಕಾರ್ಯಕ್ರಮ ಸಂಘಟಕ ಹರಿಪ್ರಸಾದ್ ರಾವ್, ಗ್ರಾ.ಪಂ.ಮಾಜಿ ಅಧ್ಯಕ್ಷ ಹರೀಶ್ ಆಚಾರ್ಯ, ಭಜನ ಮಂಡಳಿ ಸದಸ್ಯರಾದ ಸದಾನಂದ ಗೌಡ, ರವಿಶಂಕರ್ ಭಟ್, ಚಂದ್ರಶೇಖರ್ ಕಾರಂಬಡೆ, ರಾಜೇಶ್ ಗೌಡ, ಚಂದ್ರಶೇಖರ ಮತ್ತಾವು, ರಾಜರಾಮ್ ಭಟ್ ಮತ್ತಿತರರು ಉಪಸ್ಥಿತರಿದ್ದರು.

ಗಣೇಶ್ ಭಟ್ ಅವರು ಸ್ವಾಗತಿಸಿದರು. ರಾಮಚಂದ್ರ ಭಟ್ ವಂದಿಸಿದರು.ದಿನೇಶ್ ಕುದ್ಕೋಳಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ಇಂದ್ರ ಕೀಲಕ, ಊರ್ವಶಿ ಶಾಪ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಿತು.

Write A Comment