ಮಂಗಳೂರು : ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮ ಚಿನ್ನ ಸಾಗಾಟ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ದುಬಾಯಿಯಿಂದ ಬರುವ ಯಾನಿಗಳಲ್ಲಿ ಅಕ್ರಮ ಚಿನ್ನ ಸಾಗಾಟಕ್ಕೆ ಸಮ್ಮಂದಿಸಿದಂತೆ ದಿನಕೊಬ್ಬ ಆರೋಪಿಗಳನ್ನು ಬಂಧಿಸಲಾಗುತ್ತಿದೆ. ಮೂರು ದಿನಗಳ ಹಿಂದೆಯಷ್ಟೇ ನಡೆಸಿದ್ದ ಎರಡು ಪ್ರತ್ಯೇಕ ಕಾರ್ಯಾಚರಣೆಯಲ್ಲಿ ದುಬೈಯಿಂದ ಬಂದ ಇಬ್ಬರು ವಿಮಾನ ಯಾನಿಗಳಿಂದ ಒಟ್ಟು 878 ಗ್ರಾಂ ತೂಕದ 23.48 ಲಕ್ಷ ರೂ. ಮೌಲ್ಯದ ಚಿನ್ನವನ್ನು ವಶಕ್ಕೆ ಪಡೆಯಲಾಗಿತ್ತು.
ಇದೀಗ ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಇಲಾಖೆಯ ಅಧಿಕಾರಿಗಳು ಸೋಮವಾರ ರಾತ್ರಿ ನಡೆಸಿದ ಕಾರ್ಯಾಚರಣೆಯಲ್ಲಿ ಚಿನ್ನ ಸಾಗಾಟದ ಮತ್ತೊಂದು ಪ್ರಕರಣವನ್ನು ಪತ್ತೆಹಚ್ಚಿದ್ದಾರೆ. ಈಗಾಗಲೇ ಅಕ್ರಮ ಚಿನ್ನಾಭರಣ ಸಾಗಿಸಲು ನಾನಾ ದಾರಿಯನ್ನು ಬಳಸಲಾಗುತ್ತಿದ್ದು, ಈ ಬಾರಿ ಈ ವ್ಯಕ್ತಿ ತನ್ನ ದೇಹದ ಗುದ ಭಾಗದಲ್ಲಿ ಚಿನ್ನವನ್ನು ಬಚ್ಚಿಟ್ಟುಕೊಂಡು ಕಳ್ಳ ಸಾಗಾಟ ಮಾಡುವಗ ಸಿಕ್ಕಿಬಿದ್ದಿದ್ದಾನೆ.
ಬಂಧಿತ ಆರೋಪಿಯನ್ನು ಕಾಸರಗೋಡು ಜಿಲ್ಲೆಯ ತೆಕ್ಕಿಲ್ ಬೆಂದಿಚ್ಚಾಲ್ ಕೊರಕುನ್ನಿಲ್ ನಿವಾಸಿ ಅಬ್ದುಲ್ ರಹೀಮಾನ್ ಸುಲೇಮಾನ್ (43) ಎಂದು ಗುರುತಿಸಲಾಗಿದೆ. ಈತ ದುಬೈಯಿಂದ ಮಂಗಳವಾರ ರಾತ್ರಿ 10.15ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಏರ್ ಇಂಡಿಯಾ ವಿಮಾನದಲ್ಲಿ ಬಂದಿಳಿದ ಸಂದರ್ಭ ಅನುಮಾನದಿಂದ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ತನಿಖೆ ಸಂದರ್ಭ ತಾನು ಚಿನ್ನ ಬಚ್ಚಿಟ್ಟುಕೊಂಡ ಸ್ಥಳವನ್ನು ಬಾಯಿಯಿಟ್ಟ ಆರೋಪಿಯಿಂದ ಸುಮಾರು 18.75 ಲಕ್ಷ ರೂ. ಮೌಲ್ಯದ 699 ಗ್ರಾಂ. ಚಿನ್ನದ ಬಿಲ್ಲೆಗಳನ್ನು ವಶಕ್ಕೆ ಪಡೆಯಲಾಗಿದೆ.
ಈತ ಒಟ್ಟು ಆರು ಚಿನ್ನದ ಬಿಲ್ಲೆಗಳನ್ನು ಅಕ್ರಮವಾಗಿ ಸಾಗಿಸಲು ಯತ್ನಿಸಿ ಸಿಕ್ಕಿಬಿದ್ದಿದ್ದಾನೆ. ಕಸ್ಟಮ್ಸ್‌ನ ಸಹಾಯಕ ಆಯುಕ್ತ ಪ್ರವೀಣ್ ವಿನೋದ್ ನೇತೃತ್ವದಲ್ಲಿ ಕಸ್ಟಮ್ಸ್ ಅಧೀಕ್ಷಕರಾದ ಎಚ್.ಬಿ. ವೆಂಕಟೇಶ್, ಅಧಿಕಾರಿಗಳಾದ ಆರ್.ಎಸ್. ವೆಂಕಟರಾಮ್, ಮಾರ್ಕಸ್ ಪಿರೇರಾ, ಆರ್. ಜಿ. ಗಾಂವ್ಕರ್, ಇನ್‌ಸ್ಪೆಕ್ಟರ್‌ಗಳಾದ ಜೈ ಶಂಕರ್, ರಾಮಕೃಷ್ಣ, ಸುಭೇಂದು ರಾಜನ್ ಬೆಹೆರ, ಕಮಲೇಶ್ ಕುಮಾರ್ ಮೀನಾ, ಹವಲ್ದಾರ್ ಕೆ. ರಮಾನಿ ಮತ್ತು ಡಿಆರ್‌ಐ ಅಧಿಕಾರಿಗಳಾದ ಪಿ. ವಿಜಯನ್ ಹಾಗೂ ಗಣಪತಿ ಹೆಗ್ಡೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.
