ಕರಾವಳಿ

ಡ್ರಗ್ಸ್ ಹಾವಳಿ: ಮುನ್ನೆಚ್ಚರಿಕೆ ವಹಿಸಲು ಶೈಕ್ಷಣಿಕ ಸಂಸ್ಥೆಗಳಿಗೆ ಮೇಯರ್ ಕರೆ

Pinterest LinkedIn Tumblr

drugs_reducse_meyor_1

ಮಂಗಳೂರು, ಸೆ.20: ಇತ್ತೀಚಿನ ದಿನಗಳಲ್ಲಿ ಮಾದಕ ವಸ್ತುಗಳಿಗೆ ವಿದ್ಯಾರ್ಥಿಗಳೇ ಬಲಿಯಾಗುತ್ತಿರುವ ಪ್ರಕರಣಗಳು ಕಂಡುಬರುತ್ತಿದ್ದು, ಈ ನಿಟ್ಟಿನಲ್ಲಿ ಶೈಕ್ಷಣಿಕ ಸಂಸ್ಥೆಗಳೇ ಇದರ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಮಂಗಳೂರು ಮಹಾನಗರಪಾಲಿಕೆ ಮೇಯರ್ ಮಹಾಬಲ ಮಾರ್ಲ ಕರೆ ನೀಡಿದ್ದಾರೆ.

ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಬೆಂಗಳೂರು ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಶನಿವಾರ ಗೋಕರ್ಣನಾಥ ಕಾಲೇಜು ಸಭಾಂಗಣದಲ್ಲಿ ನಡೆದ ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮ ಕುರಿತು ಆಯೋಜಿಸಿದ್ದ ವಿಚಾರಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಹಿಂದೆ ಚಟಗಳಿಗೆ ಅನಕ್ಷರಸ್ಥರೇ ಬಲಿಯಾಗುತ್ತಿದ್ದರು. ಆದರೆ, ಈಗ ಉನ್ನತ ಶಿಕ್ಷಣ ಪಡೆದವರೂ ಡ್ರಗ್ಸ್ ಹಿಂದೆ ಬೀಳುತ್ತಿರುವುದು ಆತಂಕಕಾರಿಯಾಗಿದೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆಯೊಂದಿಗೆ ತಾನು ಈಗಾಗಲೇ ಚರ್ಚೆ ನಡೆಸಿದ್ದು, ಮಂಗಳೂರು ನಗರದಲ್ಲಿ ಡ್ರಗ್ಸ್ ಹಾವಳಿಗೆ ಕಡಿವಾಣ ಹಾಕಬೇಕಾಗಿದೆ ಎಂದು ಅವರು ಹೇಳಿದರು.

ಡ್ರಗ್ಸ್ ಹಾವಳಿಯ ಮಾಹಿತಿ ದೊರೆತವರು ತಕ್ಷಣವೇ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಬೇಕು. ನಗರದ ಕೆಲವು ನಿರ್ಜನ ಪ್ರದೇಶಗಳಲ್ಲಿ ರಾತ್ರಿ ವೇಳೆ ಡ್ರಗ್ಸ್ ಸೇವನೆಗೆ ಬಳಕೆಯಾಗುತ್ತಿವೆ. ಇದಲ್ಲದೆ, ಇದರ ಜಾಲ ಒಂದೇ ಕಡೆ ಇರದೆ, ಬೇರೆ ಬೇರೆ ಪ್ರದೇಶಗಳಲ್ಲಿ ಹರಡುತ್ತಿವೆ. ಮಾದಕ ವಸ್ತುಗಳ ಅಪಾಯದ ಅರಿವಿಲ್ಲದ ಹದಿಹರೆಯದ ಯುವಕರು ಸುಲಭವಾಗಿ ಇದರ ದಾಸರಾಗುತ್ತಿದ್ದಾರೆ ಎಂದು ಹೇಳಿದ ಮಹಾಬಲ ಮಾರ್ಲ, ಇಂತಹ ವಿಚಾರಸಂಕಿರಣಗಳಿಂದ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಲು ಸಹಕಾರಿಯಾಗಲಿದೆ ಎಂದು ಹೇಳಿದರು.

ಉಪನ್ಯಾಸ ನೀಡಿದ ಆರೋಗ್ಯ ಇಲಾಖೆ ಶಿಕ್ಷಣಾಧಿಕಾರಿ ಜಯರಾಂ ಪೂಜಾರಿ ಅವರು ಮಾತನಾಡಿ, ಮಾದಕ ವಸ್ತುಗಳಿಗೆ ದಾಸರಾದವರಿಗೆ ಸಾಮಾಜಿಕವಾಗಿ ಮತ್ತು ಕುಟುಂಬದಲ್ಲಿಯೂ ಗೌರವ ಇರುವುದಿಲ್ಲ. ಅಲ್ಲದೆ, ಸಮಾಜಘಾತುಕ ಪ್ರಕರಣಗಳಲ್ಲಿಯೂ ಇವರ ಸಂಖ್ಯೆ ಹೆಚ್ಚಾಗಿ ಕಂಡುಬರುತ್ತಿದೆ. ಇಂದು ಕಂಡುಬರುವ ಕ್ಯಾನ್ಸರ್ ರೋಗಗಳಲ್ಲಿ ಶೇಕಡಾ ೯೦ರಷ್ಟು ಪ್ರಕರಣಗಳು ಗುಟ್ಕಾದಿಂದ ಹರಡುತ್ತಿವೆ. ಈ ನಿಟ್ಟಿನಲ್ಲಿ ನಾಗರೀಕರು ವಿಶೇಷವಾಗಿ ವಿದ್ಯಾರ್ಥಿಗಳು ಮದ್ಯ ಮತ್ತು ಮಾದಕವಸ್ತುಗಳಿಂದ ದೂರವಿರಬೇಕು ಎಂದು ಹೇಳಿದರು.

ವಿದ್ಯಾರ್ಥಿಗಳು ನಿರಂತರವಾಗಿ ಮೊಬೈಲ್ ಮತ್ತು ಟಿವಿ ವೀಕ್ಷಣೆಯಲ್ಲಿ ಕಾಲ ಕಳೆಯುವುದು ಅಪಾಯಕಾರಿಯಾಗಿದ್ದು, ಇದು ಇತರ ಚಟಗಳಿಗೆ ಕಾರಣವಾಗುತ್ತಿವೆ. ಈ ನಿಟ್ಟಿನಲ್ಲಿ ಪಾಲಕರು ಹೆಚ್ಚು ಗಮನಹರಿಸಬೇಕು. ಮಕ್ಕಳನ್ನು ಆರೋಗ್ಯಪೂರ್ಣ ಹಾಗೂ ಧಾರ್ಮಿಕ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಗೋಕರ್ಣನಾಥ ಕಾಲೇಜಿನ ಪ್ರಾಂಶುಪಾಲ ಗಂಗಾಧರ ಅವರು ಅಧ್ಯಕ್ಷತೆ ವಹಿಸಿದ್ದರು. ವಾರ್ತಾಧಿಕಾರಿ ಬಿ.ಎ. ಖಾದರ್ ಶಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಎನ್.ಎಸ್.ಎಸ್. ಅಧಿಕಾರಿ ಸುಜಯಾ ಸುವರ್ಣ ವಂದಿಸಿ, ಫ್ರಾನ್ಸಿಸ್ ಲೂಯಿಸ್ ನಿರೂಪಿಸಿದರು.

ಕಾರ್ಯಕ್ರಮದ ಬಳಿಕ, ಹಾಸನದ ಕಲಾವಿದ ಗುಂಡೂರಾಜ್ ತಂಡದವರಿಂದ ಸಾಮಾಜಿಕ ಸಂದೇಶ ಬೀರುವ ತೊಗಲು ಗೊಂಬೆ ಕಲಾ ಪ್ರದರ್ಶನ ನಡೆಯಿತು.

Write A Comment