ಕರಾವಳಿ

ತಲೆಂಬಿಲ: ಮಳೆಗೆ ಮನೆ ಕುಸಿತ ಪುಟ್ಟ ಸಂಸಾರಕ್ಕೆ ‘ಜಾಗರಣೆ’ ಶಿಕ್ಷೆ…!

Pinterest LinkedIn Tumblr

talabail_mane_kusitha_1

ಬಂಟ್ವಾಳ:ತಾಲ್ಲೂಕಿನ ಅಮ್ಟಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಲೆಂಬಿಲ ಮಾಣಿಜಾಲ್ ಎಂಬಲ್ಲಿ ಕಳೆದ ಒಂದು ತಿಂಗಳ ಹಿಂದೆನಿರಂತರವಾಗಿ ಸುರಿದ ಮಳೆಗೆ ಸ್ಥಳೀಯ ನಿವಾಸಿ ಗೋಪಾಲ ಪೂಜಾರಿ ಎಂಬವರ ಮನೆ ಮಾಡಿನ ಒಂದು ಭಾಗ ಕುಸಿದಿತ್ತು. ಇದರಿಂದಾಗಿ ಮನೆಯೊಳಗೆ ಅಲ್ಲಲ್ಲಿ ನೀರಿನ ಸೋರಿಕೆಗೆ ಇದ್ದ ಪಾತ್ರೆಯನ್ನೆಲ್ಲಾ ಇಟ್ಟು ದಿನ ಕಳೆಯುತ್ತಿದ್ದರು. ಇದೀಗ ಮತ್ತೆ ಕಳೆದ ವಾರ ಮನೆಯ ಬಲಭಾಗದ ಗೋಡೆ ಮತ್ತು ಮಾಡು ಸಂಪೂರ್ಣ ಕುಸಿತಗೊಂಡು ಮನೆಯೊಳಗೆ ಕೆಸರು ನೀರು ಮತ್ತು ಮಣ್ಣು ತುಂಬಿಕೊಂಡಿದೆ. ಮನೆಯೊಳಗೆ ಇರುವ ಚಿಕ್ಕ ಅಡುಗೆ ಕೋಣೆ ಮಾತ್ರ ಬೆಚ್ಚಗೆ ಉಳಿದಿರುವ ಹಿನ್ನೆಲೆಯಲ್ಲಿ ಅಲ್ಲೇ ರಾತ್ರಿ ನಿದ್ದೆ ಅನಿವಾರ್ಯವಾಗಿದೆ. ಈಗಾಗಲೇ ಟರ್ಪಾಲು ಹಾಕಿದ್ದರೂ ಮನೆಯೊಳಗೆ ಗೋಡೆಗೆ ತಾಗಿಕೊಂಡಿರುವ ದೈವದ ಮಂಚ ಸಹಿತ ಅಲ್ಲಲ್ಲಿ ನೀರು ಸೋರಿಕೆಗೆ ಇದ್ದ ಪಾತ್ರೆಯನ್ನೆಲ್ಲಾ ಸಾಲು ಸಾಲು ಇಟ್ಟರೂ ಪ್ರಯೋಜನವಿಲ್ಲದೆ ರಾತ್ರಿಯಿಡೀ ‘ಜಾಗರಣೆ’ ಮಾಡಬೇಕಿದೆ ಎಂಬ ಅಳಲು ಮನೆಯವರದ್ದು.

ತಂದೆ ದಿ.ಉಗ್ಗಪ್ಪ ಪೂಜಾರಿ ಮತ್ತು ತಾಯಿ ದಿ.ಹೊನ್ನಮ್ಮ ಪೂಜಾರಿಗೆ ಸರ್ಕಾರದಿಂದ ದೊರೆತ ೧೦ ಸೆಂಟ್ಸ್ ಜಮೀನಿನಲ್ಲಿ ಅವರು ಕಳೆದ 35 ವರ್ಷಗಳ ಹಿಂದೆ ನಿರ್ಮಿಸಿದ್ದ ಮಣ್ಣಿನ ಗೋಡೆಯ ಹೆಂಚಿನ ಮನೆ ಈಗಾಗಲೇ ಸಂಪೂರ್ಣ ಬಲಹೀನಗೊಂಡಿದೆ.ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿರುವ ಗೋಪಾಲ ಪೂಜಾರಿ ಮತ್ತು ಬೀಡಿ ಕಟ್ಟಿಕೊಂಡಿರುವ ಪತ್ನಿ ಯಶೋಧ ಇವರಿಗೆ ಮೂವರು ಪುಟ್ಟ ಮಕ್ಕಳು ಇದ್ದಾರೆ. ಈ ಪೈಕಿ ಹಿರಿಯ ಪುತ್ರ ತುಷಾರ್‌ಗೆ ರಾತ್ರಿ ವೇಳೆ ನಿದ್ರಿಸಲು ಸ್ಥಳೀಯ ಮಹಿಳೆ ಚಂದ್ರಾವತಿ ಪೂಜಾರಿ ಎಂಬವರು ಆಸರೆ ನೀಡುತ್ತಿದ್ದು, ಸ್ಥಳೀಯ ನಲ್ಕೆಮಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಾಲ್ಕನೇ ತರಗತಿ ವಿದ್ಯಾರ್ಥಿಯಾಗಿರುವ ಈತನ ಓದಿನ ಬಗ್ಗೆ ಇಲ್ಲಿನ ಮುಖ್ಯಶಿಕ್ಷಕಿ ಚಂದ್ರಾವತಿ ವಿಶೇಷ ಕಾಳಜಿ ವಹಿಸುತ್ತಿರುವುದಾಗಿ ತಿಳಿಸಿದ್ದಾರೆ.

ಮೂರೂವರೆ ವರ್ಷದ ಪುತ್ರಿ ಸಂಬಂಧಿಕರ ಮನೆಯಿಂದ ಅಂಗನವಾಡಿಗೆ ಹೋಗುತ್ತಿದ್ದಾಳೆ. ಉಳಿದಂತೆ ಒಂದೂವರೆ ವರ್ಷದ ಪುಟ್ಟ ಮಗುವಿನೊಂದಿಗೆ ಗೋಪಾಲ ಪೂಜಾರಿ ದಂಪತಿ ಕಳೆದ ಒಂದು ತಿಂಗಳಿನಿಂದ ಇದೇ ಮನೆಯಲ್ಲಿ ರಾತ್ರಿಯಿಡೀ ನಿದ್ದೆಯಿಲ್ಲದೆ ಮನೆ ಕುಸಿತದ ಭೀತಿಯಲ್ಲಿ ‘ಜಾಗರಣೆ’ ಮಾಡುತ್ತಿರುವುದಾಗಿ ಅಳಲು ತೋಡಿಕೊಂಡಿದ್ದಾರೆ.

ಇನ್ನೊಂದೆಡೆ ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಬಿತಾ ಕೋಟ್ಯಾನ್, ಸದಸ್ಯ ಜಯರಾಮ, ಗ್ರಾಮಕರಣಿಕ ಶಶಿಕುಮಾರ್ ಭೇಟಿ ನೀಡಿ, ಕಂದಾಯ ಇಲಾಖೆಯಿಂದ ತುರ್ತು ಪರಿಹಾರಧನ ದೊರಕಿಸಿಕೊಡುವ ಭರವಸೆ ನೀಡಿದ್ದಾರೆ. ಇವರಿಗೆ ‘ಬಸವ ವಸತಿ’ ಯೋಜನೆಯಡಿ ಮನೆ ನೀಡಲು ಸರ್ಕಾರ ಮುಂದಾಗಬೇಕು ಎಂಬ ಆಗ್ರಹವೂ ಕೇಳಿಬಂದಿದ್ದು, ತಾಲ್ಲೂಕಿನ ಬಿಲ್ಲವ ಸಮಾಜ ಸೇವಾ ಸಂಘವೂ ಈ ಬಗ್ಗೆ ಗಮನ ಹರಿಸಬೇಕು ಎಂಬ ಅಭಿಪ್ರಾಯ ಸ್ಥಳೀಯರಿಂದ ವ್ಯಕ್ತವಾಗಿದೆ.

Write A Comment