ಬಂಟ್ವಾಳ: ಸಾಮಾಜಿಕ ಅಭಿವೃದ್ದಿಯಲ್ಲಿ ಗುತ್ತಿಗೆದಾರರ ಕೊಡುಗೆಯು ಅಪಾರವಾಗಿದ್ದು, ಕಾಮಗಾರಿಯ ಗುಣಮಟ್ಟದಲ್ಲಿ ಎಂದೂ ರಾಜಿ ಮಾಡಬೇಡಿ ಎಂದು ಜಿಲ್ಲಾ ಲೋಕಪಯೋಗಿ ಇಲಾಖೆಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆ.ರಾಧಾಕೃಷ್ಣ ನಾಯಕ್ ಕರೆ ನೀಡಿದರು. ಅವರು ಮಂಗಳವಾರ ಬಿ.ಸಿ.ರೋಡಿನಲ್ಲಿ ನಡೆದ ಬಂಟ್ವಾಳ ತಾಲೂಕು ಪಿ.ಡಬ್ಲ್ಯೂ .ಡಿ ಮತ್ತು ಜಿಲ್ಲಾ ಪಂಚಾಯತ್ ಗುತ್ತಿಗೆದಾರರ ಸಂಘದ ಮಹಾಸಭೆಯ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಗುತ್ತಿಗೆದಾರರು ಕಾಮಗಾರಿ ನಡೆಸುವ ಇತ್ತೀಚಿನ ದಿನಗಳಲ್ಲಿ ಮರಳು ಸಮಸ್ಯೆ ಅತಿಯಾಗಿ ಕಾಡುತ್ತಿದ್ದು, ಈ ಬಗ್ಗೆ ಸಂಘದ ಮೂಲಕ ಜಿಲ್ಲಾಧಿಕಾರಿಗೆ ಮನವಿ ಮಾಡುವ ಬಗ್ಗೆ ನಿರ್ಣಯಿಸಲಾಗಿದೆ ಎಂದ ಅವರು ಗುತ್ತಿಗೆದಾರರು ಸಂಘಟನಾತ್ಮಕವಾಗಿ ಪರಸ್ಪರ ಹೊಂದಾಣಿಕೆಯಿಂದ ಕಾಮಗಾರಿಯನ್ನು ನಿರ್ವಹಿಸುವುದು ಹೆಚ್ಚು ಸೂಕ್ತ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಗುತ್ತಿಗೆದಾರರ ಅಧ್ಯಕ್ಷ ಬಿ.ಲೋಹಿತಾಕ್ಷ ವಹಿಸಿದ್ದರು. ವೇದಿಕೆಯಲ್ಲಿ ಜಿ.ಪಂ.ಗುತ್ತಿಗೆದಾರರ ಸಂಘದ ಅಧ್ಯಕ್ಷ ವಿಶ್ವನಾಥ ಸೆಟ್ಟಿ ಕಿನ್ನಿಗೋಳಿ, ಜಿಲ್ಲಾ ಲೋಕಪಯೋಗಿ ಇಲಾಖೆಯ ಗುತ್ತಿಗೆದಾರರ ಸಂಘದ ಕಾರ್ಯದರ್ಶಿ ಕೆ.ಕೆ.ನಾಸಿರ್, ಮಂಚಿ,ಪುತ್ತೂರು ತಾ.ಸಮಿತಿ ಅಧ್ಯಕ್ಷ ಗುರುಪ್ರಸಾದ್ ರೈ, ಬೆಳ್ತಂಗಡಿ ತಾ.ಸಮಿತಿ ಅಧ್ಯಕ್ಷ ಗಿರಿರಾಜ್, ಜಿಲ್ಲಾ ಕೋಶಾಧಿಕಾರಿ ಬಿ.ಸಿ.ಆನಂದ ಮತ್ತು ತಾ.ಸಮಿತಿ ಗೌರವಾಧ್ಯಕ್ಷ ಅಬ್ದುಲ್ ಖಾದರ್ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೂ ಮುನ್ನ ಸರ್.ಎಂ.ವಿಶ್ವೇಶ್ವರಯ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.
ಜಿಲ್ಲಾ ಪಂಚಾಯತ್ ಗುತ್ತಿಗೆದಾರರ ಸಂಘದ ಕಾರ್ಯದರ್ಶಿ ಯಸ್.ಇಬ್ರಾಹಿಂ ಸ್ವಾಗತಿಸಿ, ತಾ.ಕಾರ್ಯದರ್ಶಿ ಚಿತ್ತರಂಜನ್ ವಂದಿಸಿದರು. ಬಾಲಕೃಷ್ಣ ಸೆರ್ಕಳ ಕಾರ್ಯಕ್ರಮ ನಿರೂಪಿಸಿದರು.

