ಕರಾವಳಿ

ಸುಲಭದಲ್ಲಿ ಹಣಗಳಿಸುವ ಜಾಲ : ಸಾರ್ವಜನಿಕರನ್ನು ವಂಚಿಸುವ ತಂಡದ ಕಣ್ಣು ಇದೀಗ ಶ್ರೀ ಕ್ಷೇತ್ರ ಕದ್ರಿಯ ಮೇಲೆ…

Pinterest LinkedIn Tumblr

kadri_temple_pics_1

ಮಂಗಳೂರು: ಬುದ್ಧಿವಂತರ ಜಿಲ್ಲೆಯೆಂದೇ ಖ್ಯಾತಿ ಪಡೆದ ದ.ಕ.ಜಿಲ್ಲೆಯಲ್ಲಿ ಈಗ ವಂಚಕರದೇ ಕಾರುಬಾರು. ನಾನಾ ತರದ ಬಣ್ಣದ ಮಾತುಗಳಿಂದ ಸಾರ್ವಜನಿಕರನ್ನು ವಂಚಿಸುವ ಮೂಲಕ ಸುಲಭದಲ್ಲಿ ಹಣಗಳಿಸುವ ವಂಚಕರ ತಂಡ ಜಿಲ್ಲೆಯಾದ್ಯಂತ ಹಲವಾರು ಸಮಯಗಳಿಂದ ಕಾರ್ಯಾಚರಿಸುತ್ತಿದೆ. ಈ ಬಗ್ಗೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡುತ್ತಿದ್ದರೂ ವಂಚಕರ ಜಾಲಕ್ಕೆ ಬಿದ್ದು ಮೋಸ ಹೋಗುವವರ ಸಂಖ್ಯೆ ಸ್ವಲ್ಪವೂ ಕಡಿಮೆಯಾಗಲಿಲ್ಲ..

ನಕಲಿ ಡೊನೇಷನ್ ಹಾವಾಳಿ..

ದೇವಸ್ಥಾನ ನಿರ್ಮಾಣಕ್ಕೆ ದೇಣಿಗೆ. ವಿವಿಧ ರೀತಿಯ ಪೂಜೆಗಳಿಗೆ ದೇಣಿಗೆ, ಸಂಘ ಸಂಸ್ಥೆಗಳ ಹೆಸರಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ದೇಣಿಗೆ, ಕ್ರಿಕೆಟ್ ಪಂದ್ಯಾಟಕ್ಕೆ ದೇಣಿಗೆ, ಬಡ ಮಕ್ಕಳಿಗೆ ಪುಸ್ತಕ ಹಾಗೂ ಯೂನಿಫಾರ್ಮ್ ವಿತರಣೆಗೆ ದೇಣಿಗೆ, ಅಸೌಖ್ಯದಲ್ಲಿರುವವರ ಹೆಸರಲ್ಲಿ ದೇಣಿಗೆ… ಹೀಗೆ ಹಲವಾರು ರೀತಿಯಲ್ಲಿ ಸುಳ್ಳು ಹೇಳಿ ದೇಣಿಗೆ ಸಂಗ್ರಹಿಸುವವರ ತಂಡ ಒಂದೆಡೆಯಾದರೆ..
(ಈ ರೀತಿ ನಕಲಿ ಹಣ ಸಂಗ್ರಹ ಮಾಡುವ ಜಾಲದಿಂದಾಗಿ ಅಸಲಿ ಕಾರ್ಯಕ್ರಮಕ್ಕೆ ಹಣ ಸಂಗ್ರಹ ಮಾಡುವವರ ಬಗ್ಗೆ ಸಾರ್ವಜನಿಕರು ಅನುಮಾನ ಪಡುವಂತಾಗಿದೆ.)

ನೀರು ಕೇಳಲು ಬಂದು ಒಂಟಿ ಮಹಿಳೆಯರನ್ನು ದೋಚುವುದು,, ಚಿನ್ನಕ್ಕೆ ಲೇಪನ ಮಾಡುವ ಹೆಸರಲ್ಲಿ ಚಿನ್ನ ಲೂಟಿ ಮಾಡುವುದು,, ವಸ್ತುಗಳ ಮಾರಾಟಕ್ಕೆ ಬರುವ ಮೂಲಕ ಅಥವಾ ವಿಳಾಸ ಕೇಳಿಕೊಂಡು ಬರುವ ಮೂಲಕ ಮನೆಗೆ ನುಗ್ಗಿ ದರೋಡೆ,, ರಸ್ತೆಯಲ್ಲಿ ಹಣ ಬಿದ್ದಿದೆ ಎಂದು ನಂಬಿಸಿ ಹಣ ಎಗರಿಸುವುದು,,, ಮುಂದೆ ಗಲಾಟೆಯಾಗುತ್ತಿದೆ. ಅದ್ದರಿಂದ ನಿಮ್ಮ ಚಿನ್ನಾಭರಣಗಳನ್ನು ಬ್ಯಾಗ್‌ನಲ್ಲಿಟ್ಟುಕೊಂಡು ಹೋಗಿ ತಾನು ಮಪ್ತಿಯಲ್ಲಿರುವ ಪೊಲೀಸ್ ಎಂದು ಹೇಳಿ ಮಹಿಳೆಯರನ್ನು ನಂಬಿಸಿ, ಚಿನ್ನಾಭರಣ ಎಗರಿಸುವುದು, ನಿಮ್ಮ ಷರ್ಟ್ ನಲ್ಲಿ ಎನೋ ಗಲಿಜಾಗಿದೆ ಎಂದು ಹೇಳಿ ಜನರ ದಿಕ್ಕು ತಪ್ಪಿಸಿ ವಾಹನಗಳಲ್ಲಿಟ್ಟಿದ್ದ ಬ್ಯಾಗ್ ಗಳನ್ನು ಕದಿಯುವುದು,, ಹೀಗೆ ಬೇರೆ ಬೇರೆ ರೀತಿಯಲ್ಲಿ ಮೋಸ ಮಾಡಿ ವಂಚಿಸುವ ತಂಡ..

ವಿವಿಧ ಬೋಗಸ್ ಸ್ಕೀಮ್ ಗಳ ಮೂಲಕ ಜನರನ್ನು ಮರಳು ಮಾಡಿ ಹಣ ಗಳಿಸುವ ತಂಡ.. ಮೊಬೈಲ್ ಗಳಲ್ಲಿ ವಿವಿಧ ಬಹುಮಾನಗಳ ಅಮೀಷವೊಡ್ಡಿ ಹಣ ಲೂಟಿ ಮಾಡುವ ತಂಡ..

ಹೀಗೆ ಬೇರೆ ಬೇರೆ ಮಾರ್ಗಗಳ ಮೂಲಕ ಜನರನ್ನು ನಂಬಿಸಿ, ದಿಕ್ಕು ತಪ್ಪಿಸಿ, ವಂಚಿಸುವ ಮೂಲಕ ಸುಲಭದಲ್ಲಿ ಹಣ ಗಳಿಸುವ ಎಷ್ಟೋ ತಂಡಗಳು ದ.ಕ.ಜಿಲ್ಲೆಯಾದ್ಯಂತ ಕಾರ್ಯಾಚರಿಸುತ್ತಿದೆ.. ಇದೀಗ ವಂಚಕರ ಕಣ್ಣು ಕದ್ರಿ ಶ್ರೀ ಕ್ಷೇತ್ರದ ಮೇಲೆ ಬಿದ್ದಿದೆ.. ಭಕ್ತರ ನಂಬಿಕೆಯನ್ನೆ ಮೆಟ್ಟಲು ಮಾಡಿಕೊಂಡು ಸುಲಭವಾಗಿ ಹಣಗಳಿಸುವ ಹೊಸ ತಂತ್ರವೊಂದು ಆರಂಭವಾಗಿದೆ.

ಅದೆಂದರೆ… ನಗರದ ಪ್ರಸಿದ್ಧ ಧಾರ್ಮಿಕ ಕೇಂದ್ರವಾಗಿರುವ ಕದ್ರಿ ಶ್ರೀ ಮುಂಜುನಾಥ ದೇವಸ್ಥಾನದ ಹೆಸರಿನಲ್ಲಿ ಸತ್ಯನಾರಾಯಣ ಪೂಜೆ ನಡೆಯುತ್ತಿದೆ ಎಂದು ಸುಳ್ಳು ಹೇಳಿ ಕರಪತ್ರ ಮುದ್ರಿಸಿ ಚಂದಾ ವಸೂಲಿ ಆರಂಭಿಸಿದೆ.

ಈ ರೀತಿ ನಕಲಿ ತಂಡವೊಂದು ಚಂದಾ ವಸೂಲಿ ಮಾಡುತ್ತಿರುವ ಮಾಹಿತಿಯನ್ನು ಪಡೆದ ದೇವಸ್ಥಾನದ ಆಡಳಿತ ಮಂಡಳಿಯು ಈ ಬಗ್ಗೆ ಸಾರ್ವಜನಿಕರಲ್ಲಿ ಎಚ್ಚರವಿರಲು ವಿನಂತಿಸಿದೆ. ದೇವಸ್ಥಾನದ ಪರವಾಗಿ ದೇಣಿಗೆ ಸಂಗ್ರಹಿಸಲಾಗುತ್ತಿದೆ ಎಂದು ದೇವಳಕ್ಕೆ ಬಂದಿರುವ ಮಾಹಿತಿಯ ಹಿನ್ನಲೆಯಲ್ಲಿ ಸ್ಪಷ್ಟನೆ ನೀಡಿರುವ ದೇವಳದ ಆಡಳಿತ ಮಂಡಳಿ ದೇಣಿಗೆ ಸಂಗ್ರಹಿಸಲು ದೇವಸ್ಥಾನದ ವತಿಯಿಂದ ಯಾರನ್ನೂ ನೇಮಿಸಲಾಗಿಲ್ಲ. ಆದ್ದರಿಂದ ದೇವಸ್ಥಾನದ ಹೆಸರಿನಲ್ಲಿ ಅಕ್ರಮವಾಗಿ ದೇಣಿಗೆ ಸಂಗ್ರಹಿಸುವವರು ಕಂಡು ಬಂದಲ್ಲಿ ಕೂಡಲೆ ಸಮೀಪದ ಪೊಲೀಸ್ ಠಾಣೆಗೆ ದೂರು ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

ಕದ್ರಿ ಶ್ರೀ ಮಂಜುನಾಥ ದೇವಸ್ಥಾನವು ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಗೆ ಒಳಪಟ್ಟ ಒಂದು ‘ಎ’ ವರ್ಗದ ಅಧಿಸೂಚಿತ ದೇವಾಲಯವಾಗಿದೆ. ಈ ದೇವಾಲಯದಲ್ಲಿ ನಡೆಯುವ ಸೇವೆಗಳು ಆಡಳಿತ ಮಂಡಳಿಯಿಂದ ಅಂಗೀಕರಿಸಲ್ಪಟ್ಟು, ಸರಕಾರದಿಂದ ಅನುಮೋದನೆಗೊಂಡ ಸೇವೆಗಳಾಗಿರುತ್ತವೆ. ಆದರೆ ಇತ್ತೀಚೆಗೆ ಕೆಲವರು ಕದ್ರಿ ದೇವಸ್ಥಾನದಲ್ಲಿ ವಿಶೇಷ ಸತ್ಯನಾರಾಯಣ ಪೂಜೆ ನೆರೆವೇರಿಸುತ್ತಿದ್ದೇವೆಂದು ಸಾರ್ವಜನಿಕರಲ್ಲಿ ದೇಣಿಗೆ ಸ್ವೀಕರಿಸುತ್ತಿರುವುದಾಗಿ ಸಾರ್ವಜನಿಕರು ದೇವಳದ ಕಛೇರಿಗೆ ಮಾಹಿತಿ ನೀಡಿರುತ್ತಾರೆ.

ಆದುದರಿಂದ ಸತ್ಯನಾರಾಯಣ ಪೂಜೆ ನೆರವೇರುವ ಬಗ್ಗೆ ದೇವಾಲಯದ ವತಿಯಿಂದ ದೇಣಿಗೆ ಸ್ವೀಕರಿಸಲು ಯಾವುದೇ ವ್ಯಕ್ತಿಗಳನ್ನು ನೇಮಿಸಿರುವುದಿಲ್ಲ. ಆದುದರಿಂದ ಇಂತಹ ವ್ಯಕ್ತಿಗಳು ಕಂಡು ಬಂದಲ್ಲಿ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡುವಂತೆ ದೇವಸ್ಥಾನದ ಆಡಳಿತ ಸಮಿತಿಯು ಪತ್ರಿಕಾ ಪ್ರಕಟಣೆಯ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದೆ.

ವಿಶೇಷ ವರದಿ : ಸತೀಶ್ ಕಾಪಿಕಾಡ್

Write A Comment