ವಾಷಿಂಗ್ಟನ್: ಅಮೆರಿಕದಲ್ಲಿ ಹತ್ಯಾಕಾಂಡ ಮುಂದುವರಿದಿದೆ. ಇತ್ತೀಚೆಗಷ್ಟೇ ಅಟ್ಲಾಂಟಾದ ಏಷ್ಯನ್ನರ ಬ್ಯೂಟಿ ಪಾರ್ಲರ್ಗಳಲ್ಲಿ ಶೂಟೌಟ್ ನಡೆದಿತ್ತು. ಒಂದೇ ವಾರದಲ್ಲಿ ಇದೀಗ ಕೊಲರಾಡೋ ರಾಜ್ಯದದಲ್ಲಿ ಶೂಟೌಟ್ ನಡೆದಿದ್ದು ಒಬ್ಬ ಪೊಲೀಸ್ ಅಧಿಕಾರಿ ಸೇರಿದಂತೆ 10ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಕೊಲರಾಡೋ ರಾಜ್ಯದ ರಾಜಧಾನಿ ಡೆನ್ವರ್ ನಗರ ಸಮೀಪದ ಬೌಲ್ಡರ್ ಕೌಂಟಿಯ ಸೂಪರ್ ಮಾರ್ಕೆಟ್ನಲ್ಲಿ ಈ ದುರ್ಘಟನೆ ನಡೆದಿದೆ. ಪೊಲೀಸರು ಒಬ್ಬ ಶಂಕಿತ ಆರೋಪಿಯನ್ನು ಬಂಧಿಸಿರುವುದು ತಿಳಿದುಬಂದಿದೆ.
ಘಟನೆ ನಡೆದಾದ ಸ್ಥಳದಲ್ಲಿದ್ದ ಡೀನ್ ಶಿಲ್ಲರ್ ಎಂಬ ಪ್ರತ್ಯಕ್ಷದರ್ಶಿ ನೀಡಿದ ಮಾಹಿತಿ ಪ್ರಕಾರ, ಅವರು ಸೂಪರ್ ಮಾರ್ಕೆಟ್ನಿಂದ ಹೊರಗೆ ಹೋಗುವಾಗ ಗನ್ ಸಪ್ಪಳ ಕೇಳಿದ್ದಾರೆ. ಪಾರ್ಕಿಂಗ್ ಬಳಿ ಇಬ್ಬರು ಹಾಗೂ ಬಾಗಿಲ ದಾರಿಯಲ್ಲಿ ಒಬ್ಬ ಕುಸಿದುಬಿದ್ದಿರುವುದು ಕಂಡಿದ್ದಾರೆ. ಅವರು ಸತ್ತಿದ್ದರಾ ಬದುಕಿದ್ದರಾ ಗೊತ್ತಿಲ್ಲ ಎಂದಿದ್ದಾರೆ.
ಘಟನೆ ನಡೆದ ಸ್ಥಳವು ರಾಜಧಾನಿ ಡೆನ್ವರ್ ನಗರದಿಂದ 24 ಕಿಮೀ ದೂರದಲ್ಲಿದೆ. ಘಟನೆ ನಡೆದ ಕೆಲವೇ ಹೊತ್ತಲ್ಲಿ ರಕ್ಷಣಾ ಕಾರ್ಯಾಚರಣೆ ನಡೆದಿದೆ. ಮೂರಕ್ಕೂ ಹೆಚ್ಚು ಹೆಲಿಕಾಪ್ಟರ್ಗಳು ಸೂಪರ್ ಮಾರ್ಕೆಟ್ನ ಮೇಲ್ಗಡೆ ನಿಂತವು. SWAT ತಂಡಗಳು ಸೇರಿದಂತೆ ಭದ್ರತಾ ಪಡೆಗಳು ಸ್ಥಳಕ್ಕೆ ಜಮಾಯಿಸಿ ಶಂಕಿತನನ್ನು ಸುತ್ತುವರಿದಿದ್ದವು. ನಂತರದ ಕಾರ್ಯಾಚರಣೆಯಲ್ಲಿ ಶಂಕಿತ ಆರೋಪಿ ಗಾಯಗೊಂಡು ಪೊಲೀಸರಿಗೆ ಸೆರೆ ಸಿಕ್ಕಿದ್ದಾನೆ. ಆತನ ವಿಚಾರಣೆ ನಡೆದಿದೆ.
ಘಟನೆ ನಡೆಯುವ ಕೆಲ ಹೊತ್ತಿನ ಮೊದಲು ಬೌಲ್ಡರ್ ಕೌಂಟಿ ಪೊಲೀಸರು ಒಬ್ಬ ಅಪಾಯಕಾರಿ ಗನ್ ಧಾರಿ ವ್ಯಕ್ತಿಯ ಬಗ್ಗೆ ಸಾರ್ವಜನಿಕರನ್ನ ಎಚ್ಚರಿಸಿದ್ದರು. ಘಟನಾ ಸ್ಥಳದಿಂದ ಐದು ಕಿಮೀ ದೂರದ ಸ್ಥಳದಲ್ಲಿ ಶಸ್ತ್ರಧಾರಿ ವ್ಯಕ್ತಿ ಚಲಿಸುತ್ತಿದ್ದು, ಜನರು ಹುಷಾರಾಗಿ ಇರಬೇಕೆಂದು ಎಚ್ಚರಿಸಿದ್ದರು. ಬಳಿಕ ಆ ಎಚ್ಚರಿಕೆಯನ್ನು ಹಿಂಪಡೆದು ಹೋಗಿದ್ದರು. ಅದಾದ ಬಳಿಕ ಸೂಪರ್ ಮಾರ್ಕೆಟ್ನಲ್ಲಿ ಶೂಟೌಟ್ ನಡೆದಿದೆ. ಅದೇ ಗನ್ಧಾರಿ ವ್ಯಕ್ತಿಯಿಂದಲೇ ಈ ಕೃತ್ಯ ನಡೆದಿದೆಯಾ ಎಂಬುದು ತಿಳಿದುಬಂದಿಲ್ಲ.
ಮಾರ್ಚ್ 16ರಂದು ಅಟ್ಲಾಂಟಾ ರಾಜ್ಯದ ಜಾರ್ಜಿಯಾ ನಗರದ ಮೂರು ಬ್ಯೂಟಿ ಪಾರ್ಲರ್ಗಳ ಮೇಲೆ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದರು. ಆ ಘಟನೆಯಲ್ಲಿ ಬಲಿಯಾಗಿದ್ದ ಎಂಟು ಮಂದಿ ಪೈಕಿ ಹೆಚ್ಚಿನವರು ಏಷ್ಯನ್ನರಾಗಿದ್ದರು. ಇದು ಜನಾಂಗೀಯ ದಾಳಿ ಎಂದೇ ಕೆಲವರು ಬಣ್ಣಿಸಿದ್ದರು.