ಅಂತರಾಷ್ಟ್ರೀಯ

ಪಾಕ್ ನಲ್ಲಿ ಹಿಂದೂ ದೇವಾಲಯ ಧ್ವಂಸ

Pinterest LinkedIn Tumblr


ಪಾಕಿಸ್ತಾನ: ಪಾಕ್ ನ ಸಿಂಧ್ ಪ್ರಾಂತ್ಯದಲ್ಲಿ ಹಿಂದೂ ದೇವಾಲಯವನ್ನು ಧ್ವಂಸ ಮಾಡಿದ ಪ್ರಕರಣ ನಡೆದಿರುವುದು ವರದಿಯಾಗಿದೆ.

ಈ ಘಟನೆ ಮೊನ್ನೆ ಶನಿವಾರ ನಡೆದಿದ್ದು ಪೊಲೀಸರು ಕೇಸು ದಾಖಲಿಸಿ ಓರ್ವನನ್ನು ಬಂಧಿಸಿದ್ದಾರೆ ಎಂದು ಅಲ್ಲಿನ ಪತ್ರಿಕೆ ದಿ ಎಕ್ಸ್ ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.

ಸಿಂಧ್ ಪ್ರಾಂತ್ಯದ ಬದಿನ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಇರುವ ಹಿಂದೂ ದೇವಾಲಯದ ಮೂರ್ತಿಗಳನ್ನು ಮೊಹಮ್ಮದ್ ಇಸ್ಮಾಯಿಲ್ ಎಂಬ ವ್ಯಕ್ತಿ ಧ್ವಂಸ ಮಾಡಿದ್ದಾರೆ ಎಂದು ಅಶೋಕ್ ಕುಮಾರ್ ಎಂಬುವವರು ಪೊಲೀಸರಿಗೆ ದೂರು ನೀಡಿದ್ದಾರೆ.

ದೂರು ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಬದಿನ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಮಾನಸಿಕ ಸ್ಥಿರತೆ ಇರುವವನೇ, ಉದ್ದೇಶಪೂರ್ವಕವಾಗಿ ದೇವರ ಮೂರ್ತಿಗಳನ್ನು ಧ್ವಂಸ ಮಾಡಿದ್ದಾನೆಯೇ ಎಂದು ಪೊಲೀಸರು ತನಿಖೆ ಮಾಡುತ್ತಿದ್ದಾರೆ.

ಈ ಮಧ್ಯೆ, ಬದಿನ್ ಹಿರಿಯ ಎಸ್ಪಿ ಶಬೀರ್ ಸೆತರ್, ಘಟನೆ ಬಗ್ಗೆ ವರದಿ ಕೇಳಿದ್ದಾರೆ. ಪಾಕಿಸ್ತಾನದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದು ಅಲ್ಲಿ ಅಧಿಕೃತ ಮಾಹಿತಿ ಪ್ರಕಾರ, 75 ಲಕ್ಷ ಹಿಂದೂಗಳು ನೆಲೆಸಿದ್ದಾರೆ. ಅವರಲ್ಲಿ ಬಹುತೇಕರು ಇರುವುದು ಸಿಂಧ್ ಪ್ರಾಂತ್ಯದಲ್ಲಿ.

ಸಿಂಧ್ ಪ್ರಾಂತ್ಯದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು ಹಿಂದೂಗಳ ಮೇಲೆ ಆಗಾಗ ದಾಳಿಗಳು ನಡೆಯುತ್ತಲೇ ಇವೆ.

Comments are closed.