ಅಂತರಾಷ್ಟ್ರೀಯ

ಅಮೆರಿಕನ್ ವಿಜ್ಞಾನಿಗಳಿಂದ ಕೊರೊನಾ ಲಸಿಕೆಯ ಕೊನೆಯ ಪ್ರಯೋಗಕ್ಕಾಗಿ ನೈಜ ವೈರಸ್ ಅಭಿವೃದ್ಧಿ

Pinterest LinkedIn Tumblr


ವಾಷಿಂಗ್ಟನ್(ಆ. 15): ಕೊರೋನಾ ವೈರಸ್ ವಿರುದ್ಧ ಹೋರಾಡಲು ವಿಶ್ವಾದ್ಯಂತ ಲಸಿಕೆಗಳನ್ನ ತಯಾರಿಸಲಾಗುತ್ತಿದೆ. ರಷ್ಯಾ ದೇಶ ಈಗಾಗಲೇ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಅಮೆರಿಕದಲ್ಲಿ ಹಲವು ಲಸಿಕೆಗಳು ತಯಾರಾಗುತ್ತಿದ್ದು, ಅವುಗಳಲ್ಲಿ ಬಹುತೇಕವು ಅಂತಿಮ ಹಂತದ ಕ್ಲಿನಿಕಲ್ ಟ್ರಯಲ್​ಗಳಲ್ಲಿವೆ. ಇದೇ ವೇಳೆ, ವ್ಯಾಕ್ಸಿನ್ ಸಾಮರ್ಥ್ಯವನ್ನು ಕರಾರುವಾಕ್ಕಾಗಿ ಅಳೆಯಬಲ್ಲಂತಹ ಚಾಲೆಂಜಿಂಗ್ ಸ್ಟಡಿ ಹಂತಕ್ಕಾಗಿ ಅಮೆರಿಕ ಸಿದ್ದವಾಗುತ್ತಿದೆ. ಅದಕ್ಕಾಗಿ ಅಲ್ಲಿನ ವಿಜ್ಞಾನಿಗಳು ಹೊಸ ಮಾದರಿಯ ಕೊರೋನಾವೈರಸ್ (ವೈರಸ್ ಸ್ಟ್ರೈನ್) ಅನ್ನು ರೂಪಿಸುತ್ತಿದ್ದಾರೆ. ಈ ಹೊಸ ವೈರಸ್ ತಳಿಯನ್ನು ಸ್ವಯಂಸೇವಕರ ದೇಹಕ್ಕೆ ಸೇರಿಸಿ ಪರೀಕ್ಷೆ ನಡೆಸಲಾಗುತ್ತದೆ.

ಅಮೆರಿಕದ ನ್ಯಾಷನಲ್ ಇನ್ಸ್​ಟಿಟ್ಯೂಟ್ ಫಾರ್ ಅಲರ್ಜೀಸ್ ಆ್ಯಂಡ್ ಇನ್ಫೆಕ್ಷಿಯಸ್ ಡಿಸೀಸಸ್ (ಎನ್​ಐಎಐಡಿ) ಸಂಸ್ಥೆ ಈ ಸಂಗತಿಯನ್ನು ಬಹಿರಂಗಪಡಿಸಿದೆ. ಮಾನವ ಸವಾಲು ಮಾದರಿ ರೂಪಿಸಲು ಕೊರೋನಾ ವೈರಸ್​ನ ರೂಪಾಂತರ ತಳಿಯನ್ನ ರೂಪಿಸುವ ಕೆಲಸ ನಡೆಯುತ್ತಿದೆ ಎಂದು ಹೇಳಿದೆ.

ಮಾಮೂಲಿಯ ಕ್ಲಿನಿಕಲ್ ಟ್ರಯಲ್​ಗಳು ನಡೆಯುತ್ತಿರುತ್ತವೆ. ಆದರೆ, ಅತಿ ಬೇಗನೆ ಪರೀಕ್ಷೆ ನಡೆಸಿ ತುರ್ತಾಗಿ ಲಸಿಕೆ ಬಿಡುಗಡೆ ಮಾಡುವ ಅಗತ್ಯತೆ ಎದುರಾದರೆ ಹೊಸ ಕೊರೋನಾವೈರಸ್ ಮಾದರಿಯನ್ನು ಬಳಕೆ ಮಾಡಲಾಗುತ್ತದೆ. ಹಾಗೆಯೇ, ಇದು ಮನುಷ್ಯರ ಮೇಲೆ ವಾಸ್ತವಿಕವಾಗಿ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ನಿಖರವಾಗಿ ಪತ್ತೆ ಹಚ್ಚಲು ಹೆಚ್ಚು ಸಹಾಯಕವಾಗುತ್ತದೆ.

ಏನಿದೆ ವ್ಯತ್ಯಾಸ?

ಕ್ಲಿನಿಕಲ್ ಟ್ರಯಲ್​ಗಳಲ್ಲಿ ಸ್ವಯಂ ಸೇವಕರಿಗೆ ಔಷಧವನ್ನು ಕೊಟ್ಟು ತಿಂಗಳುಗಟ್ಟಲೆ ಅವರ ಆರೋಗ್ಯದ ಮೇಲೆ ನಿಗಾ ಇರಿಸಲಾಗುತ್ತದೆ. ಏರುಪೇರು ಇತ್ಯಾದಿಗಳನ್ನ ಅಧ್ಯಯನ ಮಾಡಲಾಗುತ್ತದೆ. ಆದರೆ, ಚಾಲೆಂಜಿಂಗ್ ಸ್ಟಡಿಯಲ್ಲಿ ಸ್ವಯಂಸೇವಕರಿಗೆ ಸಹಜವಾಗಿ ವೈರಾಣು ಸೋಂಕು ತಗುಲಿಸಿ ಈ ಔಷಧ ಎಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲುದು ಎಂಬುದನ್ನು ವಿಜ್ಞಾನಿಗಳು ಗಮನಿಸುತ್ತಾರೆ.

ಈ ಹಿಂದೆ ಇನ್​ಫ್ಲೂಯೆಂಜಾ, ಮಲೇರಿಯಾ, ಟೈಫಾಯ್ಡ್, ಡೆಂಗ್ಯೂ, ಕಾಲರಾ ಕಾಯಿಲೆಗಳ ಔಷಧಕ್ಕೂ ಇಂಥ ಮಾನವ ಸವಾಲು ಮಾದರಿಯನ್ನು ಅನುಸರಿಸಲಾಗಿತ್ತು. ಆದರೆ, ಕೊರೋನಾ ವೈರಸ್​ನ ಈ ಸಂದರ್ಭದಲ್ಲಿ ಹ್ಯೂಮನ್ ಚಾಲೆಂಜ್ ಹಂತ ಅವಶ್ಯಕ ಇಲ್ಲ ಎಂದು ಕೆಲ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಅಮೆರಿಕದಲ್ಲಿ ಮಾಡರ್ನಾ, ಫಿಜರ್ (Pfizer), ಆಸ್ಟ್ರಾಜೆನೆಕಾ (AstraZeneca) ಕಂಪನಿಗಳ ಕೊರೋನಾ ಲಸಿಕೆಗಳು ಕ್ಲಿನಿಕಲ್ ಟ್ರಯಲ್​ನ ಅಂತಿಮ ಹಂತ ಪ್ರವೇಶ ಮಾಡಿವೆ. ಆದರೆ, ಸಹಜ ಕ್ಲಿನಿಕಲ್ ಟ್ರಯಲ್​ಗಳ ಫಲಿತಾಂಶ ಹೊರಬರತೊಡಗಿದ ಬಳಿಕವಷ್ಟೇ ಹ್ಯೂಮನ್ ಚಾಲೆಂಜ್ ಹಂತದ ಬಗ್ಗೆ ಅಮೆರಿಕ ನಿರ್ಧರಿಸುವ ಸಾಧ್ಯತೆ ಇದೆ.

Comments are closed.