ಶೆಫೀಲ್ಡ್: ಈ ವ್ಯಕ್ತಿ ತನ್ನ ಪ್ರೇಯಸಿಗೆ ಮದುವೆ ಪ್ರಪೋಸ್ ಮಾಡಲು ಭರ್ಜರಿ ಸ್ಕೆಚ್ ಹಾಕಿದ್ದ. ಆದರೆ ನಂತರ ಅದು ದುರಂತದಲ್ಲಿ ಅಂತ್ಯವಾಯಿತು.
ಇಂಗ್ಲೆಂಡ್ನ ಶೆಫೀಲ್ಡ್ ನಗರದಲ್ಲಿ ಘಟನೆ ನಡೆದಿದೆ. ಅಬ್ಬೇಡೇಲ್ ರಸ್ತೆಯಲ್ಲಿರುವ ಫ್ಲ್ಯಾಟ್ವೊಂದರಲ್ಲಿ ವಾಸವಾಗಿದ್ದ. ಅಂದು ತನ್ನ ಪ್ರೇಯಸಿಗೆ ಮದುವೆ ಪ್ರಪೋಸ್ ಮಾಡಲು ನಿರ್ಧರಿಸಿದ್ದ. ಅದಕ್ಕಾಗಿ ಇಡೀ ಮನೆಯನ್ನೂ ಸಿಂಗರಿಸಿದ್ದ. ಕೋಣೆ, ಹಾಲ್ನಲ್ಲೆಲ್ಲ ಪುಟ್ಟಪುಟ್ಟ ಮೇಣದ ಬತ್ತಿ ಹೊತ್ತಿಸಿಟ್ಟು, ಬಲೂನ್ಗಳನ್ನೆಲ್ಲ ಕಟ್ಟಿ ಅಲಂಕಾರ ಮಾಡಿಟ್ಟಿದ್ದ.
ಪ್ರೇಯಸಿಗೆ ಖುಷಿಯಾಗಲಿ ಎಂದು ಹೀಗೆಲ್ಲ ಮಾಡಿ, ಆತ ಅವಳು ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಹೋದ. ಆಕೆಯನ್ನು ಕರೆದುಕೊಂಡು ಬರಲು ಅವನೇನೋ ಹೋದ. ಆದರೆ ಇತ್ತ ಮನೆಯಲ್ಲಿ ದೊಡ್ಡ ದುರಂತವೇ ಸಂಭಿವಿಸಿತ್ತು.
ಇಡೀ ಮನೆಯಲ್ಲಿ ಕ್ಯಾಂಡಲ್ ಹೊತ್ತಿಸಿಟ್ಟು ಹೋಗಿದ್ದೇ ದೊಡ್ಡ ಎಡವಟ್ಟಾಗಿತ್ತು. ಮನೆಗೆ ಬೆಂಕಿ ಬಿದ್ದು, ವಸ್ತುಗಳೆಲ್ಲ ಸುಟ್ಟು ಕರಕಲಾಗಿತ್ತು. ರಾತ್ರಿ ಆ ವ್ಯಕ್ತಿ ಮನೆಗೆ ವಾಪಸ್ ಬರುವಷ್ಟರಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದರು.
ಆತನ ಮನೆ, ಕೋಣೆ ಎಲ್ಲವೂ ಸುಟ್ಟಿರುವ ಫೋಟೋವನ್ನು ಅಗ್ನಿಶಾಮಕದಳದ ಸಿಬ್ಬಂದಿಯೇ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಮನೆ ತುಂಬ ಬಲೂನ್ ಇತ್ತು. ವೈನ್ ಬಾಟಲ್ ಇತ್ತು. ಯಾವುದೋ ರೊಮ್ಯಾಂಟಿಕ್ ಸಂದರ್ಭಕ್ಕಾಗಿ ಇದನ್ನೆಲ್ಲ ಸಿದ್ಧಪಡಿಸಲಾಗಿತ್ತು ಎಂದು ಮೇಲ್ನೋಟಕ್ಕೆ ಗೊತ್ತಾಗುತ್ತದೆ ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ಬರೆದುಕೊಂಡಿದ್ದಾರೆ.
ಹಾಗೇ, ವಾಪಸ್ ಬಂದ ಪ್ರೇಮಿಗಳಿಗೆ ಶಾಕ್ ಆಗಿತ್ತು. ಆದರೆ ಇಲ್ಲಿ ಯಾರನ್ನು ತಪ್ಪಿತಸ್ಥರನ್ನಾಗಿ ಮಾಡುವುದು ಹೇಳಿ? ನಂತರ ಅದೇ ಮನೆಯಲ್ಲಿ ಆ ವ್ಯಕ್ತಿ ಗರ್ಲ್ ಫ್ರೆಂಡ್ಗೆ ಪ್ರಪೋಸ್ ಮಾಡಿದ್ದಾನೆ.
ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋಗಳು, ಘಟನೆಯ ವಿವರಗಳು ವೈರಲ್ ಆಗಿ, ನೆಟ್ಟಿಗರಂತೂ ಸಿಕ್ಕಾಪಟೆ ನಕ್ಕಿದ್ದಾರೆ. ಹಾಗೇ, ಪುಣ್ಯಕ್ಕೆ ಯಾರಿಗೂ ಏನೂ ತೊಂದರೆಯಾಗಿಲ್ಲ ಎಂದು ಸಮಾಧಾನಪಟ್ಟುಕೊಂಡಿದ್ದಾರೆ.
Comments are closed.