ಅಂತರಾಷ್ಟ್ರೀಯ

ಉತ್ತರ ಕೊರಿಯಾದಲ್ಲಿ ಪ್ರಥಮ ಕರೊನಾ ಶಂಕಿತ ಪ್ರಕರಣ!

Pinterest LinkedIn Tumblr


ಪ್ಯೊಂಗ್ಯಾಂಗ್(ಉತ್ತರ ಕೊರಿಯಾ): ಚೀನಾದಲ್ಲಿ ಸ್ಪೋಟಗೊಂಡ ಮಹಾಮಾರಿ ಕರೊನಾ ವೈರಸ್​ ಇಡೀ ಜಗತ್ತನ್ನೇ ಆವರಿಸಿದ್ರೂ ಪಕ್ಕದಲ್ಲೇ ಇರುವ ಉತ್ತರ ಕೊರಿಯಾಗೆ ಇಷ್ಟು ದಿನವಾದ್ರು ಸೋಂಕು ತಗುಲದೇ ಇರುವುದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿತ್ತು. ಇದೀಗ ಕೊರಿಯಾದಲ್ಲಿ ಮೊದಲ ಶಂಕಿತ ಪ್ರಕರಣ ಕಾಣಿಸಿಕೊಂಡಿರುವುದಾಗಿ ಅಲ್ಲಿನ ಆಡಳಿತ ಮಂಡಳಿ ಹೇಳಿಕೊಂಡಿದ್ದು, ಮುನ್ನೆಚ್ಛರಿಕಾ ಕ್ರಮವಾಗಿ ರಾಜ್ಯ ತುರ್ತು ಪರಿಸ್ಥಿಯನ್ನು ಘೋಷಿಸಿಕೊಂಡಿದೆ.

ಉತ್ತರ ಕೊರಿಯಾದ ಗಡಿ ನಗರ ಕೈಸೊಂಗ್​ನಲ್ಲಿ ಲಾಕ್​ಡೌನ್​ ಘೋಷಿಸಲಾಗಿದೆ. ಸರ್ವಾಧಿಕಾರಿ ಕಿಮ್​ ಜಾಂಗ್​ ಉನ್​ ಶನಿವಾರ ಉನ್ನತ ಅಧಿಕಾರಿಗಳ ಸಭೆ ನಡೆಸಿದ್ದು, ಕರೊನಾ ಹರಡದಂತೆ ತಡೆಯಲು ಗರಿಷ್ಠ ತುರ್ತು ವ್ಯವಸ್ಥೆ ಮತ್ತು ದೇಶಾದ್ಯಂತ ಎಚ್ಚರಿಕೆ ಗಂಟೆಯನ್ನು ಘೋಷಿಸುವಂತೆ ತಿಳಿಸಿದ್ದಾರೆ.

ಅಂದಹಾಗೆ ಸೋಂಕು ಇನ್ನು ದೃಢಪಟ್ಟಿಲ್ಲ. ಒಂದು ವೇಳೆ ಸೋಂಕು ಖಚಿತವಾದರೆ, ಕೊರಿಯಾದ ಮೊದಲ ಪ್ರಕರಣ ಇದೇ ಆಗಲಿದೆ. ಇನ್ನು ಯಾವುದೇ ಸಾಂಕ್ರಾಮಿಕ ರೋಗವನ್ನು ಎದುರಿಸಲು ವೈದ್ಯಕೀಯ ಮೂಲಸೌಕರ್ಯವು ಶೋಚನೀಯವಾಗಿರುವಂತಹ ಕೊರಿಯಾದಲ್ಲಿ ಕರೊನಾ ಎದುರಿಸುವುದು ಕಷ್ಟವಾಗುವ ಸಾಧ್ಯತೆ ಇರುವುದರಿಂದ ಕಠಿಣ ಮುಂಜಾಗ್ರತಾ ಕ್ರಮಗಳಿಗೆ ಮುಂದಾಗಿದೆ.

ಮೂರು ವರ್ಷಗಳ ಹಿಂದೆ ಕೊರಿಯಾ ಬಿಟ್ಟಿದ್ದ ವ್ಯಕ್ತಿಯೊಬ್ಬ ಜುಲೈ 19ರಂದು ಮರಳಿ ಅಕ್ರಮವಾಗಿ ಒಳನುಸುಳಿರುವುದರಿಂದ ಸೋಂಕಿನ ಶಂಕೆ ವ್ಯಕ್ತವಾಗಿದೆ. ಇನ್ನು ಗಡಿ ವಿಚಾರದಲ್ಲಿ ತುಂಬಾ ಭದ್ರತೆಯನ್ನು ಹೊಂದಿರುವ ರಾಷ್ಟ್ರದಲ್ಲಿ ಯಾರೊಬ್ಬರು ಗಡಿ ದಾಟಿ ಹೋಗಲು ಸಾಧ್ಯವಾಗದೇ ಇರುವುದರಿಂದ ಕೊರಿಯಾ ಮೇಲೆಯೇ ಅನುಮಾನ ಮೂಡುವಂತಾಗಿದೆ.

ಇಡೀ ಜಗತ್ತಿಗೆ ಸೋಂಕು ಪಸರಿಸುತ್ತಿದ್ದರೆ ನಮ್ಮಲ್ಲಿ ಒಂದೇ ಒಂದು ಸೋಂಕು ಪತ್ತೆಯಾಗಿಲ್ಲ ಎಂದು ಈ ಹಿಂದಿನಿಂದಲೂ ಉತ್ತರ ಕೊರಿಯಾ ಹೇಳಿಕೊಂಡು ಬರುತ್ತಿತ್ತು. ಇದೀಗ ದಕ್ಷಿಣ ಮತ್ತು ಉತ್ತರ ಕೊರಿಯಾ ಗಡಿ ನಗರ ಕೈಸೊಂಗ್​ನಲ್ಲಿ ಕರೊನಾ ರೋಗಿ ಪತ್ತೆಯಾಗಿದ್ದು, ಆತನನ್ನು ಕಠಿಣ ಕ್ವಾರಂಟೈನ್​ನಲ್ಲಿ ಇಡಲಾಗಿದೆ. ಅಲ್ಲದೆ, ಆತನ ಸಂಪರ್ಕದಲ್ಲಿರುವವರ ಮೇಲೂ ಶಿಸ್ತು ಕ್ರಮ ತೆಗೆದುಕೊಳ್ಳಲಾಗಿದೆ.

ಕೆಟ್ಟ ವೈರಸ್ ದೇಶವನ್ನು ಪ್ರವೇಶಿಸಿದೆ ಎಂದು ಹೇಳಲಾಗಿದೆ. ಅಧಿಕಾರಿಗಳು ಶುಕ್ರವಾರ ಕೈಸೊಂಗ್ ನಗರವನ್ನು ಸಂಪೂರ್ಣವಾಗಿ ನಿರ್ಬಂಧಿಸುವ ಪೂರ್ವಭಾವಿ ಕ್ರಮವನ್ನು ತೆಗೆದುಕೊಂಡಿದ್ದಾರೆ ಎಂದು ಕಿಮ್ ಹೇಳಿಕೆ ನೀಡಿದ್ದಾರೆ.

ಚೀನಾದಲ್ಲಿ ವೈರಸ್​ ಸ್ಪೋಟಗೊಂಡ ಬೆನ್ನಲ್ಲೇ ಜನವರಿಯಲ್ಲೇ ಉತ್ತರ ಕೊರಿಯಾ ತನ್ನ ಗಡಿಗಳನ್ನು ಮುಚ್ಚಿತ್ತು. ಈ ಕಾರಣದಿಂದಾಗಿಯೇ ಕೊರಿಯಾದಲ್ಲಿ ಸೋಂಕು ತಗುಲಲಿಲ್ಲ ಎನ್ನಲಾಗಿದೆ. ಇನ್ನೊಂದೆಡೆ ಯಾವುದೇ ಮಾಹಿತಿಗಳನ್ನು ಕೊರಿಯಾ ಬಿಟ್ಟು ಕೊಡುತ್ತಿಲ್ಲ ಎಂಬ ಆರೋಪವು ಇದೆ.

Comments are closed.