ಅಂತರಾಷ್ಟ್ರೀಯ

ಚೀನಾದಲ್ಲಿ ಕೊರೊನಾ ಸೋಂಕಿನ ಮೂಲ ಕುರಿತು ಡಬ್ಲ್ಯುಎಚ್‌ಒ ತನಿಖೆ

Pinterest LinkedIn Tumblr


ಬೀಜಿಂಗ್‌: ಜಗತ್ತಿನಾದ್ಯಂತ ತಲ್ಲಣ ಸೃಷ್ಟಿಸಿರುವ ಕೊರೊನಾ ಸೋಂಕಿನ ಮೂಲ ಪತ್ತೆಗಾಗಿ ವಿವಿಶ್ವ ಆರೋಗ್ಯ ಸಂಸ್ಥೆಯ  ಇಬ್ಬರು ತಜ್ಞರು ಚೀನಾಕ್ಕೆ ಭೇಟಿ ನೀಡುತ್ತಿದ್ದು, ಮುಂದಿನ ಎರಡು ದಿನಗಳ ಕಾಲ ಅವರು ಅಲ್ಲಿಯೇ ಇದ್ದುಕೊಂಡ ಸಂಪೂರ್ಣ ಪರಿಶೀಲನೆ ನಡೆಸಲಿದ್ದಾರೆ.

ಇಬ್ಬರು ತಜ್ಞರ ಪೈಕಿ ಒಬ್ಬರು ಪ್ರಾಣಿ ಆರೋಗ್ಯ ತಜ್ಞರಾಗಿದ್ದು ಮತ್ತೊಬ್ಬರು ಸಾಂಕ್ರಾಮಿಕ ರೋಗ ಶಾಸ್ತ್ರಜ್ಞರಾಗಿದ್ದಾರೆ. ಪ್ರಾಣಿಗಳಿಂದ ಕೊರೊನಾ ವೈರಾಣು ಮನುಷ್ಯರಿಗೆ ಹರಡಿದ್ದು ಹೇಗೆ ಎನ್ನುವ ಬಗ್ಗೆ ಅವರ ಅಧ್ಯಯನ ಕೇಂದ್ರೀಕೃತವಾಗಿರಲಿದೆ. ಜತೆಗೆ ಭವಿಷ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಅಗತ್ಯ ಕ್ರಮಗಳ ಬಗ್ಗೆಯೂ ಅವರು ಭೇಟಿ ವೇಳೆ ಗಮನಹರಿಸಿ ತಮ್ಮ ವರದಿಯನ್ನು ವಿಶ್ವ ಆರೋಗ್ಯ ಸಂಸ್ಥೆಗೆ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ. ಇಬ್ಬರೂ ಮೊದಲು ಕಾಣಿಸಿಕೊಂಡ ವುಹಾನ್‌ ನಗರಕ್ಕೂ ಭೇಟಿ ನೀಡಲಿದ್ದಾರೆ.

ಕಳೆದ ಮೇನಲ್ಲಿ ನಡೆದ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ) ಸಭೆಯಲ್ಲಿ 120ಕ್ಕೂ ಹೆಚ್ಚು ಸದಸ್ಯ ರಾಷ್ಟ್ರಗಳು ಕೊರೊನಾ ವೈರಾಣು ಮೂಲದ ಬಗ್ಗೆ ಪತ್ತೆ ಹಚ್ಚಲು ಆಗ್ರಹಿಸಿದ್ದವು. ಜತೆಗೆ ಚೀನಾ ವೈರಾಣು ರಚನೆ ನಕ್ಷೆಯನ್ನು ಬಿಡುಗಡೆಗೊಳಿಸುವಲ್ಲಿ ಉದ್ದೇಶಪೂರ್ವಕ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿದ್ದವು. ಇದಕ್ಕೆ ಪ್ರತಿಕ್ರಿಯಿಸಿದ್ದ ಚೀನಾ, ತನ್ನ ನೆಲದಲ್ಲಿ ಸಾಂಕ್ರಾಮಿಕ ತಣ್ಣಗಾಗುವ ತನಕ ಭೇಟಿ ಬೇಡ ಎಂದಿತ್ತು. ಇದಕ್ಕೆ ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿದ್ದವು.

ಡಬ್ಲುಎಚ್‌ಒ ಮುಖ್ಯಸ್ಥರು ಚೀನಾ ಪರವಾಗಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್‌ ಮತ್ತು ಕೆನಡಾ ಪ್ರತಿನಿಧಿಗಳು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು. ಈ ಹಿನ್ನೆಲೆಯಲ್ಲಿ ತಜ್ಞರ ಭೇಟಿ ಮತ್ತು ಅವರು ನೀಡುವ ವರದಿ ಮಹತ್ವದ್ದಾಗಿದೆ.

Comments are closed.