ಅಂತರಾಷ್ಟ್ರೀಯ

ಕೊರೋನಾ ವೈರಸ್ ಗೆ 8 ಲಸಿಕೆಗಳು ಪ್ರಯೋಗದ ಹಂತದಲ್ಲಿವೆ: WHO

Pinterest LinkedIn Tumblr


ಜಿನೀವಾ: ವಿಶ್ವದ 180ಕ್ಕೂ ಅಧಿಕ ರಾಷ್ಟ್ರಗಳನ್ನು ಪೀಡಿಸುತ್ತಿರುವ ಮಾರಕ ಕೊರೋನಾ ವೈರಸ್ ಗೆ ಲಸಿಕೆ ಸಿದ್ಧ ಪಡಿಸುವ ರೇಸ್ ನಲ್ಲಿ ಹಲವು ರಾಷ್ಟ್ರಗಳು ಪೈಪೋಟಿ ನಡೆಸುತ್ತಿವೆಯಾದರೂ, ಈ ಪೈಕಿ 8 ಸಂಸ್ಥೆಗಳ ಲಸಿಕೆಗಳು ವೈದ್ಯಕೀಯ ಪ್ರಯೋಗದ ಹಂತದಲ್ಲಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ.

ಇದಲ್ಲದೆ ವಿಶ್ವಾದ್ಯಂತ 110 ಸಂಸ್ಥೆಗಳ ಲಸಿಕೆಗಳು ವಿವಿಧ ಹಂತಗಳಲ್ಲಿ ಅಭಿವೃದ್ಧಿಯಾಗುತ್ತಿದ್ದು, ಶೀಘ್ರ ಇವುಗಳೂ ಕೂಡ ವೈದ್ಯಕೀಯ ಪ್ರಯೋಗದ ಹಂತಕ್ಕೆ ಬರುವ ನಿರೀಕ್ಷೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಮಾರಕ ಕೊರೋನಾ ಸೋಂಕಿನಿಂದ 213 ರಾಷ್ಟ್ರಗಳು ತತ್ತರಿಸಿದ್ದು, ವೈರಸ್ ನಿಯಂತ್ರಣಕ್ಕೆ ಎಲ್ಲ ದೇಶಗಳ ಸರ್ಕಾರಗಳೂ ಹರಸಾಹಸ ಪಡುತ್ತಿದೆ. ಲಾಕ್ ಡೌನ್, ರ್ಯಾಪಿಡ್ ಟೆಸ್ಟ್, ಸ್ಯಾನಿಟೈಸಿಂಗ್ ನಂತಹ ಅನೇಕ ಕ್ರಮಗಳನ್ನು ಕೈಗೊಂಡರೂ ವೈರಸ್ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಅಮೆರಿಕ, ಚೀನಾ ಮತ್ತು ಜರ್ಮನಿಯಂತಹ ರಾಷ್ಟ್ರಗಳ ವೈದ್ಯಕೀಯ ಸಂಸ್ಥೆಗಳು ವೈರಸ್ ಗೆ ಲಸಿಕೆ ಮತ್ತು ಔಷಧಿ ಕಂಡು ಹಿಡಿಯುವ ರೇಸ್ ನಲ್ಲಿ ಪ್ರಮುಖವಾಗಿವೆ. ಈ ಪೈಕಿ ಅಮೆರಿಕ ಮತ್ತು ಚೀನಾ ಈಗಾಗಲೇ ಲಸಿಕೆ ತಯಾರಿಸಿ ಬಿಡುಗಡೆ ಮಾಡುವ ದಿನಾಂಕವನ್ನೂ ಕೂಡ ಈಗಾಗಲೇ ಘೋಷಣೆ ಮಾಡಿವೆ.

ಇತ್ತೀಚೆಗಷ್ಟೇ ಇದೇ ವಿಚಾರವಾಗಿ ಮಾತನಾಡಿದ್ದ ಚೀನಾ ಆರೋಗ್ಯಾಧಿಕಾರಿ ಝ್ಯಾಂಗ್ ವೆನ್ಹಾಂಗ್ ಅವರು 2021 ಮಾರ್ಚ್ ವೇಳೆಗೆ ಕೊರೋನಾ ವೈರಸ್ ಲಸಿಕೆಯನ್ನು ಸೋಂಕಿತರಿಗೆ ನೀಡಲಾಗುತ್ತದೆ. ಲಸಿಕೆ ತಯಾರಿಕೆಯಲ್ಲಿ ಕೆಲ ಗೊಂದಲಗಳಿದ್ದು, MERS and SARS ನ ಲಕ್ಷಣಗಳೂ ಕೂಡ ಕೊರೋನಾ ಲಕ್ಷಣಗಳಂತೆಯೇ ಇವೆ. ಹೀಗಾಗಿ ಈ ಮೂರೂ ಲಕ್ಷಣಗಳನ್ನೂ ಸರಿದೂಗವು ಲಸಿಕೆಯನ್ನು ಕಂಡುಹಿಡಿಯಬೇಕಿದೆ, ಇದು ಲಸಿಕೆ ಸಂಶೋಧನೆಯ ವೇಗವನ್ನು ನಿಧಾನಗೊಳಿಸಿದೆ. ವಿಜ್ಞಾನಿಗಳು ಲಸಿಕೆ ಕಂಡು ಹಿಡಿಯುವಲ್ಲಿ ಮಗ್ನರಾಗಿದ್ದು, ಮುಂಬರುವ ಮಾರ್ಚ್ ಅಥವಾ ಜೂನ್ ವೇಳೆ ಲಸಿಕೆ ಸಿದ್ಧವಾಗಲಿದೆ ಎಂದು ಹೇಳಿದ್ದಾರೆ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈ ವರ್ಷದ ಅಂತ್ಯದಲ್ಲೇ ಲಸಿಕೆ ಸಿದ್ಧವಾಗುವ ಸಾಧ್ಯತೆ ಇದೆ ಎಂದು ಹೇಳಿದ್ದರು.

Comments are closed.