ಅಂತರಾಷ್ಟ್ರೀಯ

ಕೊರೊನಾ ಗೆದ್ದು ಬಂದ ಬ್ರಿಟನ್‌ ಪ್ರಧಾನಿ ಬೋರಿಸ್‌

Pinterest LinkedIn Tumblr


ಲಂಡನ್‌: ಕೊರೊನಾ ವೈರಸ್ ಸೋಂಕು ತೀವ್ರಗೊಂಡು ಐಸಿಯುನಲ್ಲಿ ದಾಖಲಾಗಿ ಬಳಿಕ ಚಿಕಿತ್ಸೆ ಪಡೆದು ಸುಧಾರಿಸಿಕೊಂಡ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರು ಭಾನುವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದಾರೆ. ”ನನ್ನನ್ನು ಸಾವಿನ ದವಡೆಯಿಂದ ಪಾರುಮಾಡಿದ ವೈದ್ಯರು ಮತ್ತು ನರ್ಸ್‌ಗಳಿಗೆ ನನ್ನ ಜೀವವನ್ನೇ ಮುಡಿಪಾಗಿ ಇರಿಸಲು ಸಿದ್ಧ. ಅವರ ಸೇವೆಯನ್ನು ಎಂದಿಗೂ ಮರೆಯಲ್ಲ,” ಎಂದು ಜಾನ್ಸನ್‌ ಧನ್ಯವಾದ ಸಲ್ಲಿಸಿದ್ದಾರೆ.

55 ವರ್ಷದ ಜಾನ್ಸನ್‌ ಅವರನ್ನು ಕಳೆದವಾರ ಸೇಂಟ್‌ ಥಾಮಸ್‌ ಆಸ್ಪತ್ರೆಯ ಐಸಿಯುಗೆ ದಾಖಲಿಸಲಾಗಿತ್ತು. ಆಗ ಅವರಿಗೆ ಉಸಿರಾಟದ ಸಮಸ್ಯೆ ತೀವ್ರವಾಗಿತ್ತು. ಸೂಕ್ತ ಚಿಕಿತ್ಸೆ ಬಳಿಕ ಅವರನ್ನು ಜನರಲ್‌ ವಾರ್ಡ್‌ಗೆ ವರ್ಗಾಯಿಸಲಾಗಿದ್ದು ಆರೋಗ್ಯ ಸ್ಥಿತಿ ಸುಧಾರಿಸಿದೆ. ಹೀಗಾಗಿ ಭಾನುವಾರ ಸಂಜೆ ಮನೆಗೆ ಕಳುಹಿಸಲಾಗಿದೆ. ವಾರ್ಡ್‌ನಲ್ಲಿದ್ದಾಗ ಕೆಲವು ಸಿನಿಮಾಗಳನ್ನು ನೋಡುವಷ್ಟು ಅವರು ಚೇತರಿಕೆ ಕಂಡಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯ ಪ್ರಕಟಣೆಯಲ್ಲಿ ಹೇಳಿದೆ.

ಗರ್ಭದಲ್ಲಿ ಮಗುವಿನ ಸ್ಕ್ಯಾ‌ನ್‌ ಕಳಿಸಿದ ಭಾವೀ ಪತ್ನಿ: ಜಾನ್ಸನ್‌ ವರಿಸಲಿರುವ ಕ್ಯಾರ್ರಿ ಸೈಮಂಡ್ಸ್‌ ಸದ್ಯ ಗರ್ಭಿಣಿ. ಅವರು ತಮ್ಮ ಮಗುವಿನ ಸ್ಕ್ಯಾ‌ನ್‌ ಪ್ರತಿಗಳನ್ನು ಆಸ್ಪತ್ರೆಯಲ್ಲಿದ್ದ ಜಾನ್ಸನ್‌ ಅವರಿಗೆ ಆಗಾಗ್ಗೆ ಕಳುಹಿಸಿ ಅವರಲ್ಲಿ ಆತ್ಮಸ್ಥೈರ್ಯ ಮತ್ತು ಮಗುವಿನ ಬಗ್ಗೆ ಆಸೆಯನ್ನು ಮೂಡಿಸುತ್ತಿದ್ದರು. ಇದರಿಂದ ಜಾನ್ಸನ್‌ ಅವರು ಮನೋಸ್ಥೈರ್ಯ ಹೆಚ್ಚಿಸಿಕೊಂಡು ಕೊರೊನಾವನ್ನು ಮಣಿಸಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

Comments are closed.