ಅಂತರಾಷ್ಟ್ರೀಯ

ಅಮೆರಿಕ ಯುದ್ಧ ನೌಕೆಯ 550 ಯೋಧರಿಗೆ ಕೊರೋನಾ ಸೋಂಕು

Pinterest LinkedIn Tumblr


ವಾಷಿಂಗ್ಟನ್ (ಅಮೆರಿಕ): ಅಮೆರಿಕದ ಪ್ರತಿಷ್ಠಿತ ಸಮರ ನೌಕೆ ಥಿಯೋಡರ್ ರೂಸ್‌ವೆಲ್ಟ್‌ನಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 550ಕ್ಕೆ ಏರಿಕೆ ಕಂಡಿದೆ. ಅಣ್ವಸ್ತ್ರ ಸಜ್ಜಿತವಾದ ಈ ಸಮರ ನೌಕೆಯಲ್ಲಿ ಕೊರೊನಾ ವೈರಸ್ ಸೋಂಕಿತರ ಚಿಕಿತ್ಸೆಗೆ ಅಮೆರಿಕ ನೌಕಾಪಡೆ ಹರಸಾಹಸ ನಡೆಸುತ್ತಿದೆ.

ಯುದ್ಧ ನೌಕೆಯ ಶೇ. 92ರಷ್ಟು ಯೋಧರಿಗೆ ಈಗಾಗಲೇ ಕೊರೊನಾ ವೈರಸ್ ಪರೀಕ್ಷೆ ನಡೆಸಲಾಗಿದೆ. ಈ ಪೈಕಿ 550 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದ್ದು, 3,673 ಮಂದಿಗೆ ನೆಗೆಟಿವ್ ಬಂದಿದೆ. ಈ ಯುದ್ಧ ನೌಕೆಯಲ್ಲಿ ಇದ್ದ 3,696 ಯೋಧರನ್ನು ಈಗಾಗಲೇ ದಡಕ್ಕೆ ತಲುಪಿಸಲಾಗಿದೆ ಎಂದು ತಿಳಿದುಬಂದಿದೆ.

ಥಿಯೋಡರ್ ರೂಸ್‌ವೆಲ್ಟ್‌ ಯುದ್ಧ ನೌಕೆಯ ಡಜನ್‌ಗಟ್ಟಲೆ ಯೋಧರಲ್ಲಿ ಕೊರೊನಾ ವೈರಸ್ ಸೋಂಕು ತಗುಲಿರೋದು ದೃಢಪಟ್ಟ ಕೂಡಲೇ ನೌಕೆಯ ಕ್ಯಾಪ್ಟನ್ ಬ್ರೆಟ್ ಕ್ರೋಝಿಯರ್ ಈ ಸಂಬಂಧ ಸರ್ಕಾರದ ಗಮನಕ್ಕೆ ತಂದಿದ್ದರು. ಆ ಸುದ್ದಿ ಅಮೆರಿಕ ಮಾತ್ರವಲ್ಲ, ವಿಶ್ವಾದ್ಯಂತ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು.

ಥಿಯೋಡರ್ ರೂಸ್‌ವೆಲ್ಟ್‌ ನೌಕೆಯ ಕ್ಯಾಪ್ಟನ್ ಬ್ರೆಟ್ ಕ್ರೋಝಿಯರ್ ತಮ್ಮ ನೌಕೆಯಲ್ಲಿ ಕೊರೊನಾ ವೈರಸ್‌ ಸೋಂಕು ಇರುವ ಬಗ್ಗೆ ಸರ್ಕಾರದ ಗಮನ ಸೆಳೆದಾಗ, ಆರಂಭದಲ್ಲಿ ಉದಾಸೀನದ ಉತ್ತರ ಬಂದಿತ್ತು. ಆಗಿನ ಅಮೆರಿಕ ನೌಕಾಪಡೆ ಕಾರ್ಯದರ್ಶಿ ಥಾಮಸ್ ಮೂಡ್ಲಿ ನೀಡಿದ್ದ ಬೇಜವಾಬ್ದಾರಿ ಉತ್ತರ, ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಕ್ಯಾಪ್ಟನ್‌ಗೆ ತರಾಟೆ ತೆಗೆದುಕೊಂಡ ಕಾರಣಕ್ಕೆ, ಮೂಡ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿಬಂದಿತ್ತು.

ಸದ್ಯ ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್ ಮಾಹಿತಿ ನೀಡಿದ್ದಾರೆ. ಒಟ್ಟಾರೆ ಅಮೆರಿಕ ನೌಕಾಪಡೆಯಲ್ಲಿ ಈವರೆಗೆ 945 ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ನಾಲ್ವರು ಜೀವಬಿಟ್ಟಿದ್ದಾರೆ.

Comments are closed.