ಅಂತರಾಷ್ಟ್ರೀಯ

ಜಪಾನ್ ನ ಅರ್ಥಿಕತೆಯನ್ನೇ ಬುಡಮೇಲು ಮಾಡಿದ ಕೋವಿಡ್‌ ವೈರಸ್‌

Pinterest LinkedIn Tumblr


ಟೋಕಿಯೋ: ಕೋವಿಡ್‌-19 ಜಗತ್ತಿನಾದ್ಯಂತ ಆರ್ಥಿಕ ಪರಿಸ್ಥಿತಿಯನ್ನು ಹದಗೆಡಿಸಿರುವುದು ಎಲ್ಲರಿಗೂ ತಿಳಿದಿರುವ ಸಂಗತಿಯೇ. ಇದಕ್ಕೆ ಜಪಾನ್‌ ಕೂಡ ಹೊರತಾಗಿಲ್ಲ. ಇಷ್ಟರ ತನಕ ಜಪಾನ್‌ ತನ್ನ ಸಂಪನ್ಮೂಲ ಮತ್ತು ಸಾಮರ್ಥ್ಯದ ಮೇಲೆ ಅಪಾರ ವಿಶ್ವಾಸ ಇರಿಸಿತ್ತು. ಆದರೆ ಕೋವಿಡ್‌ 19 ಈ ನಂಬಿಕೆಯ ಬುಡವನ್ನೇ ಅಲ್ಲಾಡಿಸತೊಡಗಿದೆ.

ಪ್ರಧಾನಿ ಶಿಂಜೊ ಅಬೆ ಜಪಾನ್‌ ಆರ್ಥಿಕತೆಗೆ ಹೊಸ ರೂಪ ನೀಡುವ ವಾಗ್ಧಾನದೊಂದಿಗೆ 2012ರಲ್ಲಿ ಆರಿಸಿ ಬಂದಿದ್ದರು. ಕೊಟ್ಟ ಮಾತಿನಂತೆ ಆರ್ಥಿಕತೆಯನ್ನು ಹೊಸ ಎತ್ತರಕ್ಕೇರಿಸಲು ಭಾರೀ ಪ್ರಯತ್ನವನ್ನೂ ಮಾಡಿದ್ದರು. ಅವರ ಆರ್ಥಿಕ ನೀತಿಗಳು ಅಬೆನಾಮಿಕ್ಸ್‌ ಎಂದೇ ಪ್ರಸಿದ್ಧವಾಗಿದ್ದವು. ಆದರೆ ಈಗ ಅಬೆನಾಮಿಕ್ಸ್‌ ಲೆಕ್ಕಾಚಾರ ಮೇಲೆ ಕೆಳಗಾಗುವ ಸಾಧ್ಯತೆ ಹೆಚ್ಚಾಗಿದೆ.

ಇದಕ್ಕೆ ಎರಡು ಕಾರಣಗಳಿವೆ. ಒಂದು ಕೋವಿಡ್‌-19 ನಿಂದ ಜಪಾನ್‌ನಲ್ಲಿ ಈ ವರ್ಷ ನಡೆಯಬೇಕಿದ್ದ ಒಲಿಂಪಿಕ್ಸ್‌ ಕ್ರೀಡಾಕೂಟ ಮುಂದೂಡಲ್ಪಟ್ಟಿರುವುದು. ಒಲಿಂಪಿಕ್ಸ್‌ಗಾಗಿ ಜಪಾನ್‌ ಸರಕಾರ ಭಾರೀ ಮೊತ್ತವನ್ನು ಹೂಡಿಕೆ ಮಾಡಿದೆ. ಕ್ರೀಡಾಕೂಟ ಮುಂದೂಡಲ್ಪಟ್ಟಿರುವುದರಿಂದ ಈ ಹೂಡಿಕೆ ಸದ್ಯಕ್ಕೆ ಯಾವುದೇ ಲಾಭವನ್ನು ತಂದುಕೊಡುತ್ತಿಲ್ಲ. ಜತೆಗೆ ಒಲಿಂಪಿಕ್ಸ್‌ನಿಂದಾಗಿ ಆಗಬಹುದಾಗಿದ್ದ ದೊಡ್ಡ ಪ್ರಮಾಣದ ಆರ್ಥಿಕ ವ್ಯವಹಾರಗಳು ಇಲ್ಲದಂತಾಗಿದೆ. ಇದಲ್ಲದೆ ಕೋವಿಡ್‌-19 ವಿರುದ್ಧ ಹೋರಾಡಲು ಜಪಾನ್‌ ದೊಡ್ಡ ಮೊತ್ತದ ಹಣವನ್ನು ವಿನಿಯೋಗಿಸುತ್ತಿದೆ. ಹೀಗಾಗಿ ಶಿಂಜೊ ಅಬೆಯ ಯಾವ ಯೋಜನೆಗಳೂ ಈಗ ಕಾರ್ಯರೂಪಕ್ಕೆ ಬರುತ್ತಿಲ್ಲ. ಇದು ಜಪಾನ್‌ ಒಂದರ ಕತೆಯಲ್ಲ. ಬಹುತೇಕ ಎಲ್ಲ ದೇಶಗಳು ಈ ಪರಿಸ್ಥಿತಿಯನ್ನು ಅನುಭವಿಸುತ್ತಿವೆ.

Comments are closed.