ಅಂತರಾಷ್ಟ್ರೀಯ

ಮಲೇರಿಯಾ ಮಾತ್ರೆ ಅಮೆರಿಕಕ್ಕೆ ಕಳುಹಿಸದಿದ್ದರೆ ಪ್ರತೀಕಾರ; ಭಾರತದ ವಿರುದ್ಧ ಟ್ರಂಪ್ ಬೆದರಿಕೆ

Pinterest LinkedIn Tumblr

ವಾಷಿಂಗ್ಟನ್: ಅಮೆರಿಕ-ಭಾರತದ ನಡುವೆ ಅತ್ಯಂತ ಸುಮಧುರ ಸಂಬಂಧ ಇದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ತಮ್ಮ ಅತ್ಯಂತ ಪ್ರೀಯ ಮಿತ್ರ ಎಂದೆಲ್ಲಾ ಮಾತನಾಡುತ್ತಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೀಗ ಮಲೇರಿಯಾ ಮಾತ್ರೆಗಾಗಿ ಭಾರತಕ್ಕೆ ಬೆದರಿಕೆ ಹಾಕಿರುವುದು ತೀವ್ರ ಖಂಡನೀಯ.

ಭಾರತ ತಾನು ಕೇಳುತ್ತಿರುವ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ಅಮೆರಿಕಕ್ಕೆ ರಫ್ತು ಮಾಡದಿದ್ದರೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆ ಅಮೆರಿಕದ ಸದ್ಯದ ತುರ್ತು ಅವಶ್ಯಕತೆಯಾಗಿದ್ದು, ಭಾರತ ಇದನ್ನು ರಫ್ತು ಮಾಡಲೇಬೇಕು ಎಂದು ಟ್ರಂಪ್ ಪಟ್ಟು ಹಿಡಿದಿದ್ದಾರೆ.

ಈ ಕುರಿತು ಶ್ವೇತಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಟ್ರಂಪ್, ಅಮೆರಿಕ ಹಾಗೂ ಭಾರತ ಮಿತ್ರ ರಾಷ್ಟ್ರಗಳು ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಸಂಕಷ್ಟದ ಘಳಿಗೆಯಲ್ಲಿ ನೆರವಿಗೆ ಬಾರದಿದ್ದರೆ ಪ್ರತೀಕಾರದ ಕ್ರಮ ಅನಿವಾರ್ಯ ಎಂದು ಎಚ್ಚರಿಕೆ ನೀಡಿದ್ದಾರೆ.

ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ರಫ್ತು ಮಾಡದಿರುವುದು ಪ್ರಧಾನಿ ಮೋದಿ ನಿರ್ಧಾರವಾಗಿರಲಿಕ್ಕಿಲ್ಲ. ಬಹುಶ: ಇತರ ರಾಷ್ಟ್ರಗಳಿಗೆ ಮಾತ್ರ ರಫ್ತು ಮಾಡದಿರುವ ನಿರ್ಧಾರ ಕೈಗೊಂಡಿರಬಹುದು. ಆದರೆ ಭಾರತ ಖಂಡಿತವಾಗಿಯೂ ಅಮೆರಿಕಕ್ಕೆ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ರಫ್ತು ಮಾಡಲಿದೆ ಎಂದು ಟ್ರಂಪ್ ಭರವಸೆ ವ್ಯಕ್ತಪಡಿಸಿದರು.

ಭಾರತ ದಶಕಗಳಿಂದ ಅಮೆರಿಕದೊಂದಿಗಿನ ವ್ಯಾಪಾರದಿಂದಾಗಿ ಲಾಭ ಗಳಿಸಿದೆ. ದ್ವಿಪಕ್ಷೀಯ ವ್ಯಾಪಾರ ನೀತಿಯಲ್ಲಿ ಹಲವು ರಿಯಾಯ್ತಿಗಳನ್ನು ಪಡೆಯುವ ಮೂಲಕ ಭಾರತ ಅಪರಾ ಲಾಭ ಗಳಿಸಿದೆ. ಇದಕ್ಕೆ ಪ್ರತಿಯಾಗಿ ಸಂಕಷ್ಟದಲ್ಲಿರುವ ನಮಗೆ ಸಹಾಯ ಮಾಡದಿದ್ದರೆ ಪ್ರತೀಕಾರ ಕಟ್ಟಿಟ್ಟ ಬುತ್ತಿ ಎಂದು ಟ್ರಂಪ್ ಬೆದರಿಕೆಯೊಡ್ಡಿದ್ದಾರೆ.

ಅಮೆರಿಕದಲ್ಲಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮಲೇರಿಯಾ ರೋಗಕ್ಕೆ ಬಳಸುವ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ಭಾರೀ ಪ್ರಮಾಣದಲ್ಲಿ ಅಮೆರಿಕಕ್ಕೆ ರಫ್ತು ಮಾಡುವಂತೆ ಡೊನಾಲ್ಡ್ ಟ್ರಂಪ್ ಪ್ರಧಾನಿ ಮೋದಿ ಅವರಲ್ಲಿ ಮನವಿ ಮಾಡಿದ್ದರು.

Comments are closed.