
ವಾಷಿಂಗ್ಟನ್: ಇಡೀ ವಿಶ್ವವೇ ಕೊರೊನಾ ವೈರಸ್ ಆತಂಕದಲ್ಲಿ ಮುಳುಗಿರುವ ಸಂದರ್ಭದಲ್ಲಿ ಕೊಂಚ ಸಮಾಧಾನದ ಸುದ್ದಿಯೊಂದು ಹೊರಬಿದ್ದಿದೆ. ನೊವೆಲ್ ಕೊರೊನಾ ವೈರಾಣುವನ್ನು ಕೊಲ್ಲುವ ಲಸಿಕೆಯನ್ನು ಇಲಿಯ ಮೇಲೆ ಪ್ರಯೋಗಿಸಿ ಯಶಸ್ವಿಯಾಗಿರುವುದಾಗಿ ಅಮೆರಿಕದ ಸಂಶೋಧಕರು ಪ್ರಕಟಿಸಿದ್ದಾರೆ. ಈ ಲಸಿಕೆಯನ್ನು ದೇಹದ ಸೀಮಿತ ಪ್ರದೇಶಕ್ಕೆ ಪ್ರಯೋಗಿಸಲಾಗಿದ್ದು, ಇದಕ್ಕೆ ಪ್ರತಿಯಾಗಿ ಇಲಿಯ ದೇಹದಲ್ಲಿ ನಿರ್ದಿಷ್ಟ ಕೊರೊನಾ ವೈರಸ್ ಬೆಳವಣಿಗೆಯನ್ನು ತಟಸ್ಥಗೊಳಿಸುವಷ್ಟು ಮಟ್ಟಿಗಿನ ರೋಗನಿರೋಧಕ ಶಕ್ತಿ ಹೆಚ್ಚಳವಾಗಿದೆ.
ಅಮೆರಿಕದ ಪಿಟ್ಸ್‌ಬರ್ಗ್ ವಿಶ್ವವಿದ್ಯಾಲಯದಲ್ಲಿ ತಯಾರಿಸಲಾಗಿರುವ ಈ ಹೊಸ ಲಸಿಕೆಗೆ ”ಪಿಟ್‌ಕೊವ್ಯಾಕ್” ಎಂದು ಹೆಸರಿಡಲಾಗಿದೆ. ”ಈ ಲಸಿಕೆ ಪ್ರಯೋಗಿಸಿದ 2 ವಾರದಲ್ಲೇ ಇಲಿಗಳ ದೇಹದಲ್ಲಿ ಕೊರೊನಾ ವೈರಸ್, ಸಾರ್ಸ್ ಸಿಒ-2 ವೈರಾಣುವನ್ನು ಕೊಲ್ಲಲು ಅಗತ್ಯವಾದಷ್ಟು ರೋಗ ನಿರೋಧಕ ಶಕ್ತಿ ಸೃಷ್ಟಿಯಾಗಿದೆ,” ಎಂದು ವಿಜ್ಞಾನಿ ಆಂಡ್ರಿಯಾ ಗ್ಯಾಂಬೊಟ್ಟೊ ಹೇಳಿದ್ದಾರೆ.
”ಈ ಲಸಿಕೆಯು ವೈರಾಣು ಮಣಿಸಲು ಅಗತ್ಯವಾದ ‘ಸ್ಪೈಕ್ ಪ್ರೊಟೀನ್’ ಅನ್ನು ಉತ್ಪಾದಿಸಿ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. 2003ರ ಸಾರ್ಸ್, 2014ರ ಮೆರ್ಸ್ ಸೋಂಕಿನ ಸಮಯದ ಪರೀಕ್ಷೆಗಳ ಅನುಭವವನ್ನು ಈ ಲಸಿಕೆ ಅಭಿವೃದ್ಧಿಗೆ ಬಳಸಿಕೊಂಡಿದ್ದೇವೆ. ಈ ಲಸಿಕೆ ನೀಡಿದಾಗ ಕೊರೊನಾ ವೈರಾಣು ಸಂಪೂರ್ಣ ನಿಷ್ಕ್ರಿಯಗೊಂಡಿರುವುದು ದಾಖಲಾಗಿದೆ,” ಎಂದು ಗ್ಯಾಂಬೊಟ್ಟೊ ಅವರು ಇ-ಬಯೊಮೆಡಿಸಿನ್ ಜರ್ನಲ್‌ನಲ್ಲಿ ಪ್ರಕಟವಾಗಿರುವ ಲೇಖನದಲ್ಲಿ ವಿವರಿಸಿದ್ದಾರೆ.
Comments are closed.