ಅಂತರಾಷ್ಟ್ರೀಯ

ಕೊರೊನಾಕ್ಕೆ ಬಳಸುವ ಮಲೇರಿಯಾ ಔಷಧದಿಂದ ಹೃದಯಕ್ಕೆ ತೊಂದರೆ

Pinterest LinkedIn Tumblr


ನ್ಯೂಯಾರ್ಕ್‌: ತೀವ್ರ ಗಂಭೀರ ಸ್ಥಿತಿ ತಲುಪಿರುವ ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿರುವ ಮಲೇರಿಯಾ ನಿರೋಧಕ ಔಷಧದಿಂದ ಹೃದಯಕ್ಕೆ ತೊಂದರೆಯಾಗುವ ಅಪಾಯವಿದೆ ಎಂದು ಅಮೆರಿಕದ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

‘‘ಮಲೇರಿಯಾ ನಿರೋಧಕ ಔಷಧವಾದ ಹೈಡ್ರಾಕ್ಸಿಕ್ಲೊರೊಕ್ವಿನ್‌ ಮತ್ತು ರೋಗನಿರೋಧಕವಾದ ಅಜಿತ್ರೋಮೈಸಿನ್‌ ಅನ್ನು ಗಂಭೀರ ಸ್ಥಿತಿ ರೋಗಿಗಳಿಗೆ ನೀಡಲಾಗುತ್ತಿದೆ. ಈ ಸಂಯೋಜನೆಯಿಂದ ಹೃದಯ ಬಡಿತದಲ್ಲಿ ಏರಿಳಿತ ಉಂಟಾಗುವ ಸಾಧ್ಯತೆ ಇದೆ. ಸಾಧಾರಣ ಬಡಿತದ ಲಯ ಕಳೆದುಕೊಂಡು ಹೃದಯವು ಸಮಸ್ಯೆಗೀಡಾಗುವ ಅಪಾಯವಿದೆ,’’ ಎಂಬುದಾಗಿ ಇಂಡಿಯಾನಾ ವಿಶ್ವವಿದ್ಯಾಲಯ ಮತ್ತು ಒರಿಗನ್‌ ಹೆಲ್ತ್‌ ಮತ್ತು ಸೈನ್ಸ್‌ ವಿಶ್ವವಿದ್ಯಾಲಯದ ತಜ್ಞರು ಎಚ್ಚರಿಸಿದ್ದಾರೆ.

‘‘ಒಂದು ವೇಳೆ ಮಲೇರಿಯಾ ನಿರೋಧಕ ಔಷಧ ಬಳಕೆ ಅನಿವಾರ್ಯವಾದಲ್ಲಿ ಅಂತಹ ಸಂದರ್ಭದಲ್ಲಿ ರೋಗಿಯ ಹೃದಯದ ಸ್ಥಿತಿಗತಿಯನ್ನು ಕೂಡ ನಿರಂತರ ಅಧ್ಯಯನ ನಡೆಸುತ್ತಿರಬೇಕು. ಇಲ್ಲವಾದಲ್ಲಿ ಔಷಧದ ಪರಿಣಾಮದಿಂದ ಹೃದಯಕ್ಕೆ ರಕ್ತ ಸಂಚಾರ ಮಾಡುವ ನಾಳಗಳು ಹಿಗ್ಗಿಕೊಂಡು ಹೃದಯಸ್ತಂಭನ ಉಂಟಾಗುವ ಸಾಧ್ಯತೆ ಹೆಚ್ಚಿದೆ ಎಂದು ಎಚ್ಚರಿಸಿದ್ದಾರೆ. ಅಮೆರಿಕನ್‌ ಕಾರ್ಡಿಯಾಲಜಿ ಕಾಲೇಜಿನ ನಿಯತಕಾಲಿಕದಲ್ಲಿಈ ಸಂಶೋಧನಾ ವರದಿ ಪ್ರಕಟವಾಗಿದೆ.

ಗಾಳಿಯಿಂದ ಹರಡಲ್ಲ

ಕೊರೊನಾ ಸೋಂಕಿತ ವ್ಯಕ್ತಿಯ ಹತ್ತಿರದಲ್ಲಿದ್ದು ಆತ ಸೀನಿದಾಗ ಅಥವಾ ಕೆಮ್ಮಿದಾಗ ಹೊರಬರುವ ಶ್ವಾಸಕೋಶದ ದ್ರವದ ಹನಿಗಳಿಂದ ಮಾತ್ರ ವೈರಾಣು ಮತ್ತೊಬ್ಬರಿಗೆ ತಗುಲುತ್ತದೆಯೇ ಹೊರತು ಸೋಂಕಿತರು ಉಸಿರಾಡುವ ಗಾಳಿಯಿಂದ ಅಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ಸ್ಪಷ್ಟಪಡಿಸಿದೆ. ‘‘ಗಾಳಿಯಿಂದ ಹರಡುವ ಸೋಂಕಿಗೂ ಕೊರೊನಾಗೂ ಬಹಳ ವ್ಯತ್ಯಾಸವಿದೆ. ಚೀನಾದಲ್ಲಿ75,465 ಸೋಂಕಿತರ ಅಧ್ಯಯನ ನಡೆಸಲಾಗಿದ್ದು, ಗಾಳಿಯಿಂದ ವೈರಾಣು ಹಬ್ಬಿದ ವರದಿ ಸಿಕ್ಕಿಲ್ಲ. ಸೋಂಕಿತರಿಂದ ಹೊರಬಂದ ದ್ರವ ಯಾವುದಾದರೂ ವಸ್ತುವಿನ (ಟೇಬಲ್‌, ಗ್ಲಾಸ್‌, ಬಟ್ಟೆ, ನೆಲ) ಮೇಲೆ ಬಿದ್ದಿದ್ದು ಅದನ್ನು ಇತರರು ಮುಟ್ಟಿ ತಮ್ಮ ಮುಖ ಅಥವಾ ಇತರ ಭಾಗಗಳನ್ನು ಮುಟ್ಟಿಕೊಂಡಾಗ ಕೊರೊನಾ ವೈರಾಣು ಅವರ ದೇಹ ಪ್ರವೇಶಿಸುತ್ತದೆ. ಈ ಸಾಧ್ಯತೆ ಹೆಚ್ಚಾಗಿ ಕಂಡುಬರುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೊಸ್‌ ಅಧಾನೊಮ್‌ ಗೆಬ್ರೆಯೆಸುಸ್‌ ಹೇಳಿದ್ದಾರೆ.

Comments are closed.