ಅಂತರಾಷ್ಟ್ರೀಯ

ಕೊರೊನಾಗೆ 2 ಲಕ್ಷಕ್ಕೂ ಹೆಚ್ಚು ಮಂದಿ ಸಾಯುವ ಅಂದಾಜು: ಟ್ರಂಪ್!

Pinterest LinkedIn Tumblr


ವಾಷಿಂಗ್ಟನ್: ಅಮೆರಿಕದಲ್ಲಿ ಕೊರೊನಾ ವೈರಸ್ ತನ್ನ ಮರಣ ಮೃದಂಗವನ್ನು ಮುಂದುವರೆಸಿದ್ದು, ಸಾವಿನ ಸಂಖ್ಯೆಯಲ್ಲಿ ಚೀನಾವನ್ನೂ ಮೀರಿಸಿರುವುದು ಇಡೀ ಜಗತ್ತನ್ನೇ ದಂಗು ಬಡಿಸಿದೆ.

ಮಾರಕ ವೈರಾಣುವಿಗೆ ಈಗಾಗಲೇ ಅಮೆರಿಕದಲ್ಲಿ 3,415 ಜನ ಸಾವಿಗೀಡಾಗಿದ್ದು, 1,75,000 ಜನರಿಗೆ ಸೋಂಕು ತಗುಲಿರುವುದು ದೃಢವಾಗಿದೆ. ಅಲ್ಲದೇ ಇದುವರೆಗೂ ಒಟ್ಟು 10 ಲಕ್ಷಕ್ಕೂ ಅಧಿಕ ಜನರನ್ನು ಪರೀಕ್ಷೆಗೆ ಗುರಿಪಡಿಸಲಾಗಿದೆ.

ಈ ಮಧ್ಯೆ ಅಮೆರಿಕದಲ್ಲಿ ಮುಂದಿನ ಎರಡು ವಾರಗಳಲ್ಲಿ ಸುಮಾರು 2,40,000 ಜನರು ಕೊರೊನಾ ವೈರಸ್‌ಗೆ ಬಲಿಯಾಗಲಿದ್ದಾರೆ ಎಂಬ ಆಘಾತಕಾರಿ ವರದಿಯನ್ನು ಸ್ವತಃ ಟ್ರಂಪ್ ಸರ್ಕಾರ ಬಿಡುಗಡೆ ಮಾಡಿದೆ.

ಮುಂದಿನ ಎರಡು ವಾರಗಳಲ್ಲಿ ಸುಮಾರು 2,40,000 ಜನ ಈ ಮಾರಕ ವೈರಾಣುವಿಗೆ ಬಲಿಯಾಗಲಿದ್ದು, ಅಮೆರಿಕ ತನ್ನ ಇತಿಹಾದಲ್ಲೇ ಅತ್ಯಂತ ದು:ಖದ ದಿನಗಳನ್ನು ಎದುರಿಸಬೇಕಿದೆ ಎಂದು ವೈಟ್‌ಹೌಸ್ ಪ್ರಕಟಣೆ ಹೊರಡಿಸಿದೆ.

ಇದಕ್ಕೆ ಪುಷ್ಠಿ ಎಂಬಂತೆ ಭಾರೀ ಸಾವು-ನೋವುಗಳನ್ನು ತಡೆದುಕೊಳ್ಳಲು ಸಿದ್ಧವಾಗಿರಿ ಎಂದು ಸ್ವತಃ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೇಶದ ಜನತೆಗೆ ಕರೆ ಕೊಟ್ಟಿದ್ದಾರೆ. ಅಧ್ಯಕ್ಷರ ಈ ಕರೆಯಿಂದಾಗಿ ಅಮೆರಿಕನ್ನರು ಅಕ್ಷರಶಃ ನಡುಗಿ ಹೋಗಿದ್ದಾರೆ.

ಸರ್ಕಾರದ ಮಾರ್ಗಸೂಚಿಗಳು ಹಾಗೂ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಈ ಮಾರಕ ವೈರಾಣುವಿನಿಂದ ದೂರ ಇರಿ ಎಂದು ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ದೇಶವಾಸಿಗಳಿಗೆ ಕರೆ ನೀಡಿದ್ದಾರೆ.

Comments are closed.