ಅಂತರಾಷ್ಟ್ರೀಯ

ಆಕಾಶದಲ್ಲಿದ್ದವರಿಗೆ ಕೊರೊನಾ ಬಂದರೆ ಅವರು ಅಲ್ಲೇ ಇರಲಿ ಎಂದ ನಾಸಾ!

Pinterest LinkedIn Tumblr


ವಾಷಿಂಗ್ಟನ್: ಇಡೀ ಜಗತ್ತು ಮಾರಕ ಕೊರೊನಾ ವೈರಸ್ ಸುಳಿಗೆ ಸಿಕ್ಕು ನರಳುತ್ತಿದೆ. ಭೂಮಿಯ ಮೇಲಿರುವ ಒಟ್ಟು ದೇಶಗಳ ಪೈಕಿ ಕಾಲು ಭಾಗ ದೇಶಗಳಿಗೆ ಕೊರೊನಾ ಅಂಟಿಕೊಂಡಿದೆ. ಇನ್ನುಳಿದ ದೇಶಗಳಿಗೆ ಅದ್ಯಾವಾಗ ಈ ಮಹಾಮಾರಿ ತಗುಲುವುದೋ ಯಾರು ಬಲ್ಲರು?.

ಇದು ಭೂಮಿಯ ಮೇಲಿನ ಕತೆಯಾದರೆ ಅಂತರೀಕ್ಷದಲ್ಲಿರುವ ಗಗನಯಾತ್ರಿಗಳ ವ್ಯಥೆ ಬೇರೆಯೇ ಆಗಿದೆ. ಬ್ರಹ್ಮಾಂಡದ ಅಧ್ಯಯನದಲ್ಲಿ ನಿರತವಾಗಿರುವ ನಾಸಾ ಹಾಗೂ ವಿಶ್ವದ ಇತರ ಅಂತರೀಕ್ಷ ಅಧ್ಯಯನ ಸಂಸ್ಥೆಗಳು, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಗಗನಯಾತ್ರಿಗಳನ್ನು ಕಳುಹಿಸುವುದು ರೂಢಿ.

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಾ ಅಥವಾ ಐಎಸ್‌ಎಸ್‌ಗೆ ಗಗನಯಾತ್ರಿಗಳು ಪ್ರಯಾಣ ಬೆಳೆಸುವುದು ನಿರಂತರ ಪ್ರಕ್ರಿಯೆ. ಆದರೆ ಮಾರಾಕ ಕೊರೊನಾ ವೈರಸ್ ಇದೀಗ ಬಾಹ್ಯಾಕಾಶ ಸಂಸ್ಥೆಗಳನ್ನೂ ಕಾಡತೊಡಗಿದ್ದು, ಐಎಸ್‌ಎಸ್‌ ಪ್ರಯಾಣದ ಮೇಲೆ ನಾಸಾ ನಿರ್ಬಂಧ ವಿಧಿಸಿಕೊಂಡಿದೆ.

ಹೌದು, ಐಎಸ್‌ಎಸ್‌ ಯೋಜನೆಗಳನ್ನು ಮುಂದೂಡಿರುವ ನಾಸಾ, ಸದ್ಯ ಯಾವುದೇ ಗಗನಯಾತ್ರಿಗಳನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸುವುದಿಲ್ಲ ಎಂದು ಘೋಷಿಸಿದೆ. ಅಲ್ಲದೇ ಭವಿಷ್ಯದಲ್ಲಿ ಐಎಎಸ್‌ಎಸ್‌ಗೆ ತೆರಳಲಿರುವ ಗಗನಯಾತ್ರಿಗಳ ಆರೋಗ್ಯ ಪರೀಕ್ಷೆಯನ್ನು ಅತ್ಯಂತ ಕಟ್ಟುನಿಟ್ಟಾಗಿ ಮಾಡಲು ನಿರ್ಧರಿಸಿದೆ.

ಈಗಾಗಲೇ ಐಎಸ್‌ಎಸ್‌ನಲ್ಲಿರುವ ಗಗನಯಾತ್ರಿಗಳು ನಿಗದಿತ ಸಮಯಕ್ಕೆ ಭೂಮಿಗೆ ಮರಳುವುದು ಕೂಡ ಸಂದೇಹ ಎನ್ನಲಾಗಿದೆ. ಕಾರಣ ಗಗನಾಯತ್ರಿಗಳನ್ನು ಕರೆತರಲು ನಭಕ್ಕೆ ಚಿಮ್ಮುವ ರಾಕೆಟ್ ಗಳಲ್ಲಿ ಕೊರೊನಾ ವೈರಣು ಹೊಕ್ಕರೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ನಿರ್ನಾಮವಾದಂತೇ ಸರಿ.

ಈ ಹಿನ್ನೆಲೆಯಲ್ಲಿ ಐಎಸ್‌ಎಸ್‌ ಯೋಜನೆಗಳನ್ನು ಮುಂದೂಡಿರುವ ನಾಸಾ, ಉಡಾವಣಾ ಯಂತ್ರಗಳೂ ಸೇರಿದಂತೆ ತನ್ನ ಸುಪರ್ದಿಗೆ ಬರುವ ಎಲ್ಲಾ ಉಡವಾಣಾ ಕೇಂದ್ರಗಳ ಸ್ವಚ್ಛತೆಯಲ್ಲಿ ನಿರತವಾಗಿದೆ. ಅಲ್ಲದೇ ಇದೇ ಏಪ್ರಿಲ್, ಮೇ ಹಾಗೂ ಜೂನ್‌ನಲ್ಲಿ ನಿಗದಿಯಾಗಿದ್ದ ಬಾಹ್ಯಾಕಾಶ ಯಾತ್ರೆಗಳಿಗೆ ನಾಸಾ ಬ್ರೇಕ್ ಹಾಕಿದೆ.

ಒಟ್ಟಿನಲ್ಲಿ ಮಾರಕ ಕೊರೊನಾ ವೈರಸ್ ಕೇವಲ ಭೂಮಿ ಮಾತ್ರವಲ್ಲದೇ ಬಾಹ್ಯಾಕಾಶದಲ್ಲೂ ಆತಂಕ ಸೃಷ್ಟಿಸಿದ್ದು, ಈ ದಿಸೆಯಲ್ಲಿ ನಾಸಾ ಅತ್ಯಂತ ಸೂಕ್ಷ್ಮ ಹೆಜ್ಜೆಗಳನ್ನಿಡುತ್ತಿರುವುದು ಸ್ಪಷ್ಟ.

Comments are closed.